Advertisement

ಖರೀದಿ ಕೇಂದ್ರ ಆರಂಭಿಸಲು ಆಗ್ರಹ

01:11 PM Dec 17, 2019 | Suhan S |

ಲಿಂಗಸುಗೂರು: ಭತ್ತ, ತೊಗರಿ, ಕಡಲೆ ಬೆಳೆಗೆ ಸೂಕ್ತ ಬೆಲೆಯಿಲ್ಲದೆ ರೈತರು ಸಂಕಷ್ಟ ಎದುರಿಸುವಂತಾಗಿದೆ. ಕೂಡಲೇ ಬೆಂಬಲ ಬೆಲೆ ಯೋಜನೆಯಡಿ ಖರೀದಿ ಕೇಂದ್ರ ಆರಂಭಿಸಲು ಆಗ್ರಹಿಸಿ ರಾಜ್ಯ ರೈತ ಸಂಘದ ಕಾರ್ಯಕರ್ತರು ಸೋಮವಾರ ಪಟ್ಟಣದ ಸಹಾಯಕ ಆಯುಕ್ತರ ಕಚೇರಿ ಬಳಿ ಧರಣಿ ನಡೆಸಿದರು.

Advertisement

ತೊಗರಿ, ಭತ್ತ, ಸೇರಿ ರೈತರು ಬೆಳೆದ ಎಲ್ಲ ಬೆಳೆಗಳಿಗೆ ಸ್ವಾಮಿನಾಥನ್‌ ವರದಿ ಆಧರಿಸಿ ವೈಜ್ಞಾನಿಕ ಬೆಲೆ ನಿಗದಿಮಾಡಬೇಕು. ರಾಷ್ಟ್ರೀಕೃತ ಹಾಗೂ ಸಹಕಾರಿ ಬ್ಯಾಂಕ್‌ ಗಳ ಮತ್ತು ಖಾಸಗಿ ಹಣಕಾಸು ಸಂಸ್ಥೆಯಲ್ಲಿನ ಸಾಲ ಮನ್ನಾ ಮಾಡಬೇಕು. ಎಪಿಎಂಸಿಯಲ್ಲಿ ವರ್ತಕರು ಪ್ರತಿ ಕ್ವಿಂಟಲ್‌ ಆಹಾರ ಧಾನ್ಯಕ್ಕೆ 3ರಿಂದ 5 ಕೆಜಿ ಸೂಟ ತೆಗೆಯುತ್ತಿದ್ದಾರೆ. ಕಮಿಷನ್‌ ಹಾವಳಿ, ಖಾಲಿಚೀಲದ ಮೊತ್ತ ಪಡೆಯವುದನ್ನು ತಡೆಗಟ್ಟಬೇಕು. ಕೃಷಿ ಮಾರುಕಟ್ಟೆಯಲ್ಲಿ ಮಧ್ಯವರ್ತಿಗಳ ಹಾವಳಿ ಹೆಚ್ಚಾಗಿದೆ. ಇದಕ್ಕೆ ಕಡಿವಾಣ ಹಾಕಬೇಕು. ನಂದವಾಡಗಿ ಏತ ನೀರಾವರಿ ಯೋಜನೆ ಕಾಮಗಾರಿ ಶೇ.70ರಷ್ಟು ಪೂರ್ಣಗೊಂಡಿದ್ದರೂ ಈವರೆಗೆ ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ನೀಡಿಲ್ಲ. ಕೂಡಲೇ ರೈತರಿಗೆ ಪರಿಹಾರ ನೀಡಬೇಕು. ತಾಲೂಕು ಕೇಂದ್ರದಲ್ಲಿರೈತ ಭವನ ನಿರ್ಮಿಸಬೇಕು ಎಂದು ಆಗ್ರಹಿಸಿದರು.

ರೈತ ಸಂಘದ ರಾಜ್ಯ ಕಾರ್ಯದರ್ಶಿ ಬಲವಂತ ಕಾಂಬಳೆ, ಹನುಮಂತಪ್ಪ ಹೊಳೆಯಾಚೆ, ಜಿಲ್ಲಾ ಅಧ್ಯಕ್ಷ ಶರಣಪ್ಪ ಮರಳಿ, ತಾಲೂಕು ಅಧ್ಯಕ್ಷ ಶಿವಪುತ್ರಗೌಡ, ಬಸನಗೌಡ ಹಿರೇಹೆಸರೂರು, ಮಹಿಳಾ ಘಟಕದ ಅಧ್ಯಕ್ಷೆ ಉಮಾದೇವಿ ನಾಯಕ, ಕರಿಯಪ್ಪ ಸಿರವಾರ, ಆದಪ್ಪ ಹಾಗಲ್ದಾಳ, ವಿಜಯ ಬಡಿಗೇರ, ರಾಮಯ್ಯರೆಡ್ಡಿ,ಸಿ.ಎಚ್‌.ರವಿಕುಮಾರ, ಸಂಗನಗೌಡ ಹೊಸೂರು ಇತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next