Advertisement

ಆನ್‌ಲೈನ್‌ ವ್ಯವಸ್ಥೆ ಕಲ್ಪಿಸಲು ಮನವಿ

12:03 PM Nov 16, 2017 | Team Udayavani |

ಬೆಂಗಳೂರು: ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಮತದಾರರ ನೋಂದಣಿ ಹಾಗೂ ಮತದಾನ ಪ್ರಕ್ರಿಯೆಗೆ ಆನ್‌ಲೈನ್‌ ವ್ಯವಸ್ಥೆ ಅಳವಡಿಸಬೇಕು ಎಂದು “ಈಗಲ್‌ ಐ’ (ಹದ್ದಿನ ಕಣ್ಣು) ಸಂಸ್ಥೆ ಚುನಾವಣಾ ಆಯೋಗದ ಮುಖ್ಯ ಚುನಾವಣಾ ಆಯುಕ್ತರನ್ನು ಒತ್ತಾಯಿಸಿದೆ.

Advertisement

ಗುಜರಾತಿನಲ್ಲಿ ಈಗಾಗಲೇ ಪದವೀಧರ ಮತ್ತು ಶಿಕ್ಷಕರ ಕ್ಷೇತ್ರಗಳ ಚುನಾವಣೆ ಪ್ರಕ್ರಿಯೆ ಸಂಪೂರ್ಣ ಆನ್‌ಲೈನ್‌ನಲ್ಲಿ ನಡೆಯುತ್ತಿದೆ. ಮಾಹಿತಿ ತಂತ್ರಜ್ಞಾನದ ಕೇಂದ್ರಬಿಂದು ಆಗಿರುವ ಕರ್ನಾಟಕದಲ್ಲೂ ಈ ಮಾದರಿಯ ವ್ಯವಸ್ಥೆ ಜಾರಿಗೊಳಿಸಬೇಕು. ಇದರಿಂದ ಚುನಾವಣೆ ಮತ್ತಷ್ಟು ಪಾರದರ್ಶಕಗೊಳ್ಳಲಿದೆ ಎಂದು ಈಗಲ್‌ ಐ ಸಂಸ್ಥೆ ಅಧ್ಯಕ್ಷ ಪ್ರೊ.ಕೆ.ಪಿ. ಶ್ರೀನಾಥ್‌ ಬುಧವಾರ ಸುದ್ದಿಗೋಷ್ಠಿಯಲ್ಲಿ ಆಗ್ರಹಿಸಿದರು.

ಸಮಸ್ಯೆ ಏನು?: ತಂತ್ರಜ್ಞಾನ ಯುಗದಲ್ಲಿ ಕಡಲೆಕಾಯಿ ಕೂಡ ಆನ್‌ಲೈನ್‌ನಲ್ಲಿ ಮಾರಾಟ ಮಾಡಲಾಗುತ್ತಿದೆ. ಹೀಗಿರುವಾಗ, ಪದವೀಧರ ಕ್ಷೇತ್ರಗಳ ಮತದಾರರ ನೋಂದಣಿ ಮತ್ತು ಮತದಾನ ಪ್ರಕ್ರಿಯೆಯನ್ನು ಆನ್‌ಲೈನ್‌ ನಲ್ಲಿ ನಡೆಸಲು ಏನು ಸಮಸ್ಯೆ ಎಂದು ಕೇಳಿದ ಅವರು, ಈ ಸಂಬಂಧ ರಾಜ್ಯ ಮುಖ್ಯ ಚುನಾವಣಾಧಿಕಾರಿ ಮೂಲಕ ಭಾರತೀಯ ಚುನಾವಣಾ ಆಯೋಗಕ್ಕೆ ಮನವಿ ಮಾಡಲಾಗುವುದು ಎಂದು ತಿಳಿಸಿದರು.

ಕಳೆದ ಬಾರಿ ಚುನಾವಣಾಧಿಕಾರಿಗಳು ನೀಡಿದ ಮಾಹಿತಿ ಪ್ರಕಾರ ರಾಜ್ಯದಲ್ಲಿ ಸುಮಾರು ಒಂದು ಲಕ್ಷ ಪದವೀಧರ ಕ್ಷೇತ್ರದ ಮತದಾರರಿದ್ದಾರೆ. ಈ ಪೈಕಿ ಮತ ಚಲಾಯಿಸಿದವರು ಕೇವಲ ಶೇ. 20ರಷ್ಟು ಜನ. ಒಂದು ವೇಳೆ ಆನ್‌ಲೈನ್‌ ವ್ಯವಸ್ಥೆ ಜಾರಿಯಾದರೆ, ಮತದಾನದ ಪ್ರಮಾಣ ಶೇ. 90ರಷ್ಟು ಆಗಲಿದೆ. ಅಷ್ಟೇ ಅಲ್ಲ, ಪೇಪರ್‌ ಲೆಸ್‌ ವ್ಯವಸ್ಥೆ ಜಾರಿಗೆ ಬರಲಿದೆ. ಖರ್ಚು-ವೆಚ್ಚ ಕೂಡ ಸಾಕಷ್ಟು ಕಡಿಮೆ ಆಗಲಿದೆ ಎಂದರು.

ಇದಲ್ಲದೆ, ಒಬ್ಬ ವ್ಯಕ್ತಿ ಏಕಕಾಲದಲ್ಲಿ ಎರಡೆರಡು ಕ್ಷೇತ್ರಗಳಲ್ಲಿ ಸ್ಪರ್ಧೆಗೆ ಅವಕಾಶ ನೀಡಲಾಗುತ್ತಿದೆ. ಇದು ಅನಿವಾರ್ಯವಾಗಿ ಉಪಚುನಾವಣೆಗೆ ಎಡೆಮಾಡಿಕೊಡುತ್ತದೆ. ಇದರಿಂದ ಅನಗತ್ಯವಾಗಿ ಸಾರ್ವಜನಿಕ ಹಣ ಪೋಲು ಆಗುತ್ತದೆ. ಇದಕ್ಕೆ ಅವಕಾಶ ನೀಡಬಾರದು ಎಂದು ಒತ್ತಾಯಿಸಿದರು.

Advertisement

ಸಂಸ್ಥೆ ಕಾರ್ಯದರ್ಶಿ ರಾಜೇಂದ್ರ ಕುಮಾರ್‌ ಮಾತನಾಡಿ, ಕುಲಪತಿ ನೇಮಕ, ಸಿಂಡಿಕೇಟ್‌ ನೇಮಕ ಸೇರಿದಂತೆ ಪ್ರತಿಯೊಂದರಲ್ಲೂ ಭ್ರಷ್ಟಾಚಾರ ತಾಂಡವಾಡುತ್ತಿದೆ. ಇದರಿಂದ ಉನ್ನತ ಶಿಕ್ಷಣ ನಿರ್ವಹಣೆ ಅಧಃಪತನವಾಗುತ್ತಿದೆ.
ಕುಲಪತಿಗಳ ಆಯ್ಕೆ ಪ್ರಕ್ರಿಯೆಗೆ ಸಂಬಂಧಿಸಿದಂತೆ ರಾಜ್ಯ ವಿಶ್ವವಿದ್ಯಾಲಯಗಳ ಅಧಿನಿಯಮಕ್ಕೆ ತಿದ್ದುಪಡಿ ತರಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next