Advertisement

ಬಸ್‌ ಸೌಲಭ್ಯ ಒದಗಿಸಲು ಆಗ್ರಹ

03:04 PM Nov 26, 2021 | Team Udayavani |

ಶಹಾಬಾದ: ತಾಲೂಕಿನ ಹೊನಗುಂಟಾ ಗ್ರಾಮಕ್ಕೆ ಸರಿಯಾದ ಸಮಯಕ್ಕೆ ಬಸ್‌ ಸೌಲಭ್ಯ ಒದಗಿಸಬೇಕೆಂದು ಒತ್ತಾಯಿಸಿ ಬುಧವಾರ ಎಐಡಿಎಸ್‌ಒ ಸಂಘಟನೆ ವತಿಯಿಂದ ಚಿತ್ತಾಪುರ ಬಸ್‌ ಡಿಪೋ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.

Advertisement

ಹೊನಗುಂಟಾ ಗ್ರಾಮದಿಂದ ಹಲವಾರು ವಿದ್ಯಾರ್ಥಿಗಳು ಶೈಕ್ಷಣಿಕ ವಿದ್ಯಾಭ್ಯಾಸಕ್ಕಾಗಿ ಹಾಗೂ ಸಾಮಾನ್ಯ ಜನರು ತಮ್ಮ ದಿನ ನಿತ್ಯದ ಕೆಲಸಕ್ಕಾಗಿ ಶಹಾಬಾದ ನಗರಕ್ಕೆ ಬರುತ್ತಾರೆ. ಲಾಕ್‌ ಡೌನ್‌ ಮುಗಿದ ನಂತರ ಶಾಲೆ-ಕಾಲೇಜುಗಳು ಪ್ರಾರಂಭವಾಗಿದ್ದು, ವಿದ್ಯಾರ್ಥಿಗಳು ತರಗತಿಗಳಿಗೆ ಹಾಜರಾಗಬೇಕಾದ ಅವಶ್ಯಕತೆ ಇದೆ. ಇಂತಹ ಸಂದರ್ಭದಲ್ಲಿ ಗ್ರಾಮೀಣ ಹಾಗೂ ನಗರದ ಬಹುತೇಕ ವಿದ್ಯಾರ್ಥಿಗಳು ಬಸ್‌ ಮೂಲಕ ಪ್ರಯಣಿಸುತ್ತಾರೆ. ಹೀಗಾಗಿ ಅವರಿಗೆ ಸೂಕ್ತ ಬಸ್‌ ಸೌಲಭ್ಯ ಒದಗಿಸಬೇಕು ಎಂದು ಕೋರಲಾಯಿತು.

ಗ್ರಾಮದ ವಿದ್ಯಾರ್ಥಿಗಳು ಪ್ರೌಢ ಶಿಕ್ಷಣ ಮುಗಿಸಿಕೊಂಡು ಹೆಚ್ಚಿನ ವಿದ್ಯಾಭ್ಯಾಸಕ್ಕಾಗಿ ಶಹಾಬಾದ, ಜೇವರ್ಗಿ, ಚಿತ್ತಾಪುರ, ಕಲಬುರಗಿ ನಗರಕ್ಕೆ ಬರುತ್ತಿದ್ದಾರೆ. ಅವರ ಬಳಿ ಬಸ್‌ ಪಾಸ್‌ ಇದ್ದರೂ ಕೂಡ ಸರಿಯಾದ ಸಮಯಕ್ಕೆ ಬಸ್‌ ಬಾರದ ಕಾರಣ ಅವರು ಖಾಸಗಿ ವಾಹನಗಳಿಗೆ ದಿನಾಲೂ ಹಣ ನೀಡಿ ತೆರಳುತ್ತಿದ್ದಾರೆ. ಇದರಿಂದ ಬಹಳ ತೊಂದರೆಯಾಗುತ್ತಿದೆಯಲ್ಲದೇ, ವಿದ್ಯಾಭ್ಯಾಸಕ್ಕೂ ಹೊಡೆತ ಬೀಳುತ್ತಿದೆ ಎಂದು ಮನವಿಪತ್ರದಲ್ಲಿ ತಿಳಿಸಲಾಗಿದೆ. ಹೊನಗಂಟಾ ಗ್ರಾಮಸ್ಥರು ಹಾಗೂ ವಿದ್ಯಾರ್ಥಿಗಳಿಗೆ ಅನುಕೂಲವಾಗುವಂತೆ ಹೊನಗುಂಟಾದಿಂದ ಶಹಾಬಾದ್‌ಗೆ ಬೆಳಗ್ಗೆ 6ಕ್ಕೆ, 8ಕ್ಕೆ ಹಾಗೂ ಶಹಾಬಾದಿಂದ ಹೊನಗುಂಟಕ್ಕೆ ಮಧ್ಯಾಹ್ನ 1:30ಕ್ಕೆ, 4:30ಕ್ಕೆ ಬಸ್‌ ಸೌಲಭ್ಯ ಕಲ್ಪಿಸಲು ಚಿತ್ತಾಪುರ ಬಸ್‌ ಡಿಪೋ ವ್ಯವಸ್ಥಾಪಕರಿಗೆ ಮನವಿ ಪತ್ರ ಸಲ್ಲಿಸಲಾಯಿತು.

ಮನವಿ ಪತ್ರ ಸ್ವೀಕರಿಸಿ ಮಾತನಾಡಿದ ಅ ಧಿಕಾರಿಗಳು ಎರಡು ದಿನಗಳಲ್ಲಿ ಸಮಸ್ಯೆ ಬಗೆಹರಿಸುವುದಾಗಿ ಆಶ್ವಾಸನೆ ನೀಡಿದರು. ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ತುಳಜಾ ರಾಮ ಎನ್‌.ಕೆ, ತಾಲೂಕು ಅಧ್ಯಕ್ಷ ಕಿರಣ ಜಿ.ಮಾನೆ, ಉಪಾಧ್ಯಕ್ಷ ದೇವರಾಜ ಹೊನಗುಂಟ, ವಿದ್ಯಾರ್ಥಿಗಳಾದ ಮನುಗಿರಿ, ಸಿದ್ಧು ಕೊಲೆ, ಕೃಷ್ಣ, ರೇವಣಸಿದ್ಧು ಹಾಗೂ ಸಂಘಟನೆ ಮುಖಂಡರು ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next