ಬೈಲಹೊಂಗಲ: ನೇಸರಗಿ ಗ್ರಾಮದಲ್ಲಿ ಬೀದಿದೀಪ, ಕುಡಿವ ನೀರು ಸೌಲಭ್ಯ, ರಸ್ತೆ ಬದಿಯ ಕಸ ತೆಗೆಸುವುದು, ಶೌಚಾಲಯ ನಿರ್ಮಾಣ, ಕುಡಿಯುವ ನೀರಿನ ವ್ಯವಸ್ಥೆ, ರಸ್ತೆ ಬದಿಯ ಮಲಮೂತ್ರ ವಿಸರ್ಜನೆ ನಿಲ್ಲಿಸಲು ಆಗ್ರಹಿಸಿ ಜನಜಾಗರಣ ಶ್ರಮಿಕ ಅಭಿವೃದ್ಧಿ ಸಂಘದ ಸದಸ್ಯರು ಶುಕ್ರವಾರ ಗ್ರಾಪಂ ಗೆ ಮುತ್ತಿಗೆ ಹಾಕಿ ಉಪವಾಸ ಸತ್ಯಾಗ್ರಹ ನಡೆಸಿ ಪ್ರತಿಭಟಿಸಿದರು.
ದೇಶನೂರ ಫಾ.ಮೆನಿನೋ, ನೇಸರಗಿ ಫಾ.ಪ್ರಕಾಶ, ಫಾ.ಥಾಮಸ್ ಚನ್ನಕಲಾ ಮಾತನಾಡಿ, ಹಲವಾರು ವರ್ಷಗಳಿಂದ ನೇಸರಗಿ ವೃತ್ತದಲ್ಲಿರುವ ಕ್ರಿಸ್ತ ನಿವಾಸ ಸುತ್ತಮುತ್ತಲಿನ ನಿವಾಸಿಗಳಿಗೆ ಸರಿಯಾದ ಬೀದಿದೀಪಗಳಿಲ್ಲ. ಕುಡಿಯುವ ನೀರಿನ ವ್ಯವಸ್ಥೆ ಇಲ್ಲ. ಅನೈರ್ಮಲ್ಯ ತಾಂಡವವಾಡಿದರೂ ಕಸ ತೆಗೆಯುವ ಗೋಜಿಗೆ ಗ್ರಾ.ಪಂ ಆಡಳಿತ ಮಂಡಳಿ ಹೋಗಿಲ್ಲ. ಶಾಲೆಯ ಪಕ್ಕದಲ್ಲಿ ಅನಧಿಕೃತ ಡಬ್ಟಾ ಅಂಗಡಿಗಳನ್ನು ರಾಜಾರೋಷವಾಗಿ ನಡೆಸಿ ಶಾಲೆಯಲ್ಲಿ ಕಲುಷಿತ ವಾತಾವರಣಕ್ಕೆ ಕಾರಣವಾದರೂ ಅವುಗಳನ್ನು ತೆಗೆಸಲು ಹಿಂದೇಟು ಹಾಕಲಾಗುತ್ತಿದೆ. ಇಡೀ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯವಿಲ್ಲದೇ ಇರುವುದರಿಂದ ಜನರು ರಸ್ತೆ ಬದಿಯಲ್ಲಿ ಮೂತ್ರವಿಸರ್ಜನೆ ಮಾಡುತ್ತಿದ್ದಾರೆ. ಕೂಡಲೇ ಗ್ರಾಮದಲ್ಲಿ ಸಾರ್ವಜನಿಕ ಶೌಚಾಲಯ ನಿರ್ಮಿಸಬೇಕೆಂದು ಒತ್ತಾಯಿಸಿದರು.
ಗ್ರಾಮದ ವಿವಿಧ ಭಾಗದಲ್ಲಿ ಕಸ ಎಲ್ಲೆಂದರಲ್ಲಿ ಬಿದ್ದಿರುತ್ತದೆ. ಅದನ್ನು ತೆಗೆಸದೇ ಇರುವುದರಿಂದ ಸಾಂಕ್ರಾಮಿಕ ರೋಗಗಳು ಹರಡುವ ಭೀತಿಯಿದೆ. ಸಾಕಷ್ಟು ಮಳೆಯಾಗುತ್ತಿದ್ದರೂ ನೀರಿನ ವ್ಯವಸ್ಥೆ ಮಾಡಲು ಗ್ರಾಪಂ ಕ್ರಮ ಕೈಗೊಂಡಿಲ್ಲ. ಶೌಚಾಲಯ ನಿರ್ಮಿಸಲು ಸರ್ಕಾರ ಸಾಕಷ್ಟು ಅನುದಾನ ನೀಡುತ್ತದೆ. ಅನುದಾನ ಸದ್ಬಳಕೆಯಾಗುವಂತೆ ಗ್ರಾಪಂ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು.
ಗ್ರಾಪಂ ಅಧ್ಯಕ್ಷ ಎಸ್.ಬಿ. ಮೋಕಾಶಿ ಮಾತನಾಡಿ, ಗ್ರಾಪಂ ವತಿಯಿಂದ ಶೌಚಾಲಯ ನಿರ್ಮಿಸಲು ಅನುದಾನ ಲಭ್ಯವಿದೆ. ಅದನ್ನು ಬಳಸಿ ಎಲ್ಲರೂ ಶೌಚಾಲಯ ನಿರ್ಮಿಸಲು ಪಣ ತೊಡಬೇಕು. ಗ್ರಾಮದ ಸ್ವಚ್ಛತೆ ಬಗ್ಗೆ ಗ್ರಾಪಂನೊಂದಿಗೆ ಸಾರ್ವಜನಿಕರು ಕೈಜೋಡಿಸಬೇಕು. ಸಾರ್ವಜನಿಕ ಸ್ಥಳದಲ್ಲಿ ಶೌಚಾಲಯ ನಿರ್ಮಿಸಿ, ಪ್ರತಿಭಟನಾಕಾರರ ಸಮಸ್ಯೆಗಳನ್ನು ಪರಿಹರಿಸಲು ಆದಷ್ಟು ಬೇಗ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು. ಇದಕ್ಕೂ ಮೊದಲು ಪ್ರತಿಭಟನಾಕಾರರು ಪ್ರತಿಭಟನಾ ಮೆರವಣಿಗೆ ನಡೆಸಿ ಗ್ರಾ.ಪಂ ಮುಂದೆ ಧರಣಿ ನಡೆಸಿದರು.
ಗ್ರಾಮಸ್ಥರಾದ ಯಲ್ಲಪ್ಪ ಬಾದರವಳ್ಳಿ, ಮಲ್ಲಪ್ಪ ಮಾಳನ್ನವರ, ಬಸನಗೌಡ ಪಾಟೀಲ, ರಾಮಲಿಂಗಪ್ಪ ಮಾಳನ್ನವರ, ಶಿವಾನಂದ ತೊಂಡಿಕಟ್ಟಿ,ಯಲ್ಲವ್ವ ಕೊಳದೂರ, ಶೋಭಾ ದೊಡಮನಿ, ಪಿಆರ್ ಡಿಸೋಜಾ, ಸಿಸ್ಟರ್ ಬ್ರೆಜಿಲ್, ಮಹಾದೇವಿ ಗ್ಯಾನಪ್ಪನ್ನವರ, ಚನ್ನವ್ವ ಮೆಣಶಿನಕಾಯಿ ಸೇರಿದಿಂತೆ ಇತರರು ಉಪಸ್ಥಿತರಿದ್ದರು.