ಬೆಂಗಳೂರು: ಕಾಸರಗೋಡಿನ ಸರ್ಕಾರಿ ಕನ್ನಡ ಶಾಲೆಗಳಿಗೆ ಮಲಯಾಳಿ ಶಿಕ್ಷಕರನ್ನು ನೇಮಕ ಮಾಡಿ ಕನ್ನಡ ವಿದ್ಯಾರ್ಥಿಗಳಿಗೆ ಅನ್ಯಾಯ ಮಾಡಲಾಗುತ್ತಿದ್ದು, ಮಕ್ಕಳ ಮೇಲೆ ಭಾಷಾ ಹೇರಿಕೆ ಮಾಡದಂತೆ ಕೇರಳ ಸರ್ಕಾರಕ್ಕೆ ಪತ್ರ ಬರೆದು ಒತ್ತಾಯಿಸುವಂತೆ ಕನ್ನಡ ಪಕ್ಷದ ವಾಟಾಳ್ ನಾಗರಾಜ್, ಉಪ ಮುಖ್ಯಮಂತ್ರಿ ಡಾ.ಜಿ. ಪರಮೇಶ್ವರ ಅವರಿಗೆ ಮನವಿ ಮಾಡಿದ್ದಾರೆ.
ಕಾಸರಗೋಡಿನ ಕನ್ನಡಿಗರ ನಿಯೋಗದೊಂದಿಗೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಮಾಜಿ ಅಧ್ಯಕ್ಷ ಸಾ.ರಾ.ಗೋವಿಂದು ಜತೆ ಡಿಸಿಎಂರನ್ನು ಭೇಟಿ ಮಾಡಿದ ಅವರು, ಕಾಸರಗೋಡಿನಲ್ಲಿ ಕನ್ನಡ ಶಾಲೆ ಉಳಿಸುವ ನಿಟ್ಟಿನಲ್ಲಿ ಸರ್ಕಾರ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.
ನಂತರ ಸುದ್ದಿಗಾರರ ಜತೆ ಮಾತನಾಡಿದ ವಾಟಾಳ್, ಕಾಸರಗೋಡು ಕರ್ನಾಟಕಕ್ಕೆ ಸೇರಬೇಕಾಗಿತ್ತು. ಆದರೆ, ಕೇರಳದಲ್ಲಿಯೇ ಉಳಿಯುವಂತಾಯಿತು. ಮಲಯಾಳಂ ಭಾಷೆ ಹೇರಿಕೆಯಿಂದ ಅಲ್ಲಿನ ಕನ್ನಡ ಶಾಲೆಗಳಿಗೆ ಕುತ್ತು ಬಂದಿದೆ. ಕಾಸರಗೋಡು ಕನ್ನಡ ಶಾಲೆಗಳ ರಕ್ಷಣೆಗಾಗಿ ನವೆಂಬರ್ 25ರ ನಂತರ ಕಾಸರಗೋಡಿನಿಂದ ಬೆಂಗಳೂರಿಗೆ ಜಾಥಾ ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.
ಕಾಸರಗೋಡು ಕನ್ನಡ ಹೋರಾಟ ಸಮಿತಿ ಪ್ರಧಾನ ಕಾರ್ಯದರ್ಶಿ ಭಾಸ್ಕರ್ ಮಾತನಾಡಿ, ಕಾಸರಗೋಡಿನಲ್ಲಿ ದ್ವಿಭಾಷೆ ಬಳಕೆಗೆ ಶಾಸನಾತ್ಮಕ ಮಾನ್ಯತೆ ಇದೆ. ಆದರೂ ಕೇರಳ ಸರ್ಕಾರ ಅದನ್ನು ಅನುಷ್ಠಾನಗೊಳಿಸುತ್ತಿಲ್ಲ. ಇನ್ನು 10ನೇ ತರಗತಿಯಲ್ಲಿ ಕನ್ನಡ ಮಾಧ್ಯಮದಲ್ಲಿ ಕಲಿತ ವಿದ್ಯಾರ್ಥಿಳಿಗೆ ಕರ್ನಾಟಕದಲ್ಲಿ ಸೀಟು ಪಡೆಯಲು ಅವಕಾಶವಿದೆ.
ಆದರೆ, ಕಾಸರಗೋಡಿನ ಮಲಯಾಳಿ ವಿದ್ಯಾರ್ಥಿಗಳು ಕನ್ನಡ ಬಲ್ಲವರೆಂದು ದಾಖಲಾತಿ ಪಡೆಯುತ್ತಿದ್ದಾರೆ. ಇದರಿಂದ ಅರ್ಹ ಕನ್ನಡ ವಿದ್ಯಾರ್ಥಿಗಳು ವೃತ್ತಿಪರ ಕೋರ್ಸ್ ಸೀಟು ಪಡೆಯುವುದರಿಂದ ವಂಚಿತರಾಗುತ್ತಿದ್ದಾರೆ ಎಂದು ತಿಳಿಸಿದರು.