ಲಕ್ಷ್ಮೇಶ್ವರ: ತಾಲೂಕಿನ ಅಡರಕಟ್ಟಿ ಗ್ರಾಮದ ಅಂಗನವಾಡಿಗೆ ಸ್ವಂತ ಕಟ್ಟಡವಿಲ್ಲದಿದ್ದರಿಂದ ಸೋಮವಾರ ಪಾಲಕರು ಮಕ್ಕಳೊಡಗೂಡಿ ಗ್ರಾಪಂಗೆ ದೌಡಾಯಿಸಿ ಕಟ್ಟಡಕ್ಕೆ ನಿವೇಶನ ನೀಡುವಂತೆ ಒತ್ತಾಯಿಸಿ ಗ್ರಾಪಂ ಒಳಗೆ ಪಟ್ಟುಹಿಡಿದು ಕುಳಿತ ಘಟನೆ ನಡೆಯಿತು.
ಕಳೆದ ಅನೇಕ ವರ್ಷಗಳಿಂದ ಗ್ರಾಮದ ಅಂಗನವಾಡಿ ಕೇಂದ್ರ ಸಂಖ್ಯೆ 59 ಸ್ಥಳೀಯ ರಂಭಾಪುರಿ ಹೈಸ್ಕೂಲ್ ಹತ್ತಿರದ ಕಟ್ಟಡದಲ್ಲಿ ನಡೆಯುತ್ತಿತ್ತು. ಈ ಕಟ್ಟಡ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಿಂದಲೇ ನಿರ್ಮಾಣಗೊಂಡಿದ್ದರೂ ನಿವೇಶನದ ದಾಖಲೆಗಳು ಕಟ್ಟಡಕ್ಕೆ ದಾನ ನೀಡಿದವರ ಹೆಸರಿನಲ್ಲಿಯೇ ಇತ್ತು. ಮೂರು ವರ್ಷಗಳ ಹಿಂದೆ ನಿವೇಶನದ ಮಾಲೀಕರು ನ್ಯಾಯಾಲಯದ ಮೆಟ್ಟಿಲು ಏರಿ ಕಟ್ಟಡ ತಮ್ಮ ತಾಬಾ ಪಡೆದುಕೊಂಡಿದ್ದರು. ಅಲ್ಲಿಂದ ಊರಿನ ಹಿರಿಯರ ಸಹಕಾರದಿಂದ ಗ್ರಾಮದಲ್ಲಿರುವ ರಂಭಾಪುರಿ ಶಿಕ್ಷಣ ಸಂಸ್ಥೆಯ ಕೊಠಡಿಯೊಂದರಲ್ಲಿ ಅಂಗನವಾಡಿ ನಡೆಯುತ್ತಿತ್ತು. ಆದರೆ ಈದೀಗ ಈ ಸಂಸ್ಥೆಯರು ಹೈಸ್ಕೂಲ್ ವಿದ್ಯಾರ್ಥಿಗಳ ಶಿಕ್ಷಣಕ್ಕೆ ತೊಂದರೆಯುಂಟಾಗುತ್ತಿದ್ದು, ಬೇರೆ ಕಡೆ ಸ್ಥಳಾಂತರಿಸುವಂತೆ ಮೊದಲೇ ಸೂಚಿಸಿದ್ದರು.
ಅದರಂತೆ ಸೋಮವಾರ ಅಂಗನವಾಡಿ ಮಕ್ಕಳು ಕೇಂದ್ರಕ್ಕೆ ಹೋದಾಗ ಕೊಠಡಿ ಬೀಗ ಹಾಕಿದ್ದರಿಂದ ಮಕ್ಕಳು ಬೀದಿಗೆ ಬೀಳುವಂತಾಯಿತು. ಈ ಸುದ್ದಿ ಪಾಲಕರನ್ನು ಕೆರಳಿಸುವಂತೆ ಮಾಡಿದ್ದರಿಂದ ಮಕ್ಕಳ ಸಮೇತವಾಗಿ ಪಾಲಕರು ನೇರವಾಗಿ ಗ್ರಾಪಂಗೆ ದೌಡಾಯಿಸಿ ಸ್ವಂತ ಕಟ್ಟಡದ ಸೌಲಭ್ಯ ಕಲ್ಪಿಸುವಂತೆ ಆಗ್ರಹಿಸಿ ಹಿರಿಯ ಅಧಿಕಾರಿಗಳು ಬರುವವರೆಗೂ ಇಲ್ಲಿಂದ ಕದಲುವುದಿಲ್ಲ ಎಂದು ಪಟ್ಟು ಹಿಡಿದು ಕುಳಿತರು.
ಗ್ರಾಮಸ್ಥರು ಮತ್ತು ಮಹಿಳೆಯರು ಗ್ರಾಪಂನವರನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡು ನಿಮ್ಮ ನಿರ್ಲಕ್ಷದಿಂದಲೇ ಮಕ್ಕಳು ಬೀದಿಗೆ ಬೀಳುವಂತಾಗಿದೆ. ಈಗ ನಮ್ಮ ಮಕ್ಕಳ ಅಂಗನವಾಡಿ ಕೇಂದ್ರದ ವ್ಯವಸ್ಥೆ ಮಾಡಿಕೊಡಲೇಬೇಕು ಎಂದು ಒತ್ತಾಯಿಸಿದರು. ಸ್ಥಳಕ್ಕೆ ಆಗಮಿಸಿದ ಅಂಗನವಾಡಿ ಮೇಲ್ವಿಚಾರಕಿಯಾದ ಉಷಾ ಅವರೊಂದಿಗೆ ಗ್ರಾಮ ಅಧ್ಯಕ್ಷರು ಮತ್ತು ಸದಸ್ಯರು ಚರ್ಚಿಸಿ ತಾತ್ಕಾಲಿಕವಾಗಿ ಬಾಡಿಗೆ ಕಟ್ಟಡ ಅಥವಾ ಬಿಇಒ ಅವರೊಂದಿಗೆ ಚರ್ಚಿಸಿ ಪ್ರಾಥಮಿಕ ಶಾಲೆಯಲ್ಲಿನ ಕಟ್ಟಡ ಒದಗಿಸಲಾಗುವುದು. ಅಲ್ಲದೇ ಗ್ರಾಪಂ ಕಟ್ಟಡದ ನಿರ್ಮಾಣಗೊಳ್ಳುತ್ತಿರುವ ನಿವೇಶದಲ್ಲಿ ಅಂಗನವಾಡಿಗೆ ನಿವೇಶನ ನೀಡಲಾಗುವುದು ಮತ್ತು ಕಟ್ಟಡ ನಿರ್ಮಾಣಕ್ಕೆ ಇಲಾಖೆಗೆ ಅನುದಾನ ಬಿಡುಗಡೆಗೊಳಿಸುವಂತೆ ಕೋರಲಾಗುವುದು ಎಂದು ಗ್ರಾಪಂ ಅಧ್ಯಕ್ಷ ಗಣೇಶ ನಾಯಕ, ಸದಸ್ಯ ಸಿದ್ದು ಹವಳದ, ಪಿಡಿಒ ಸವಿತಾ ಸೋಮಣ್ಣವರ ಪಾಲಕರನ್ನು ಸಮಾಧಾನಪಡಿಸಿದರು.
ಪಾಲಕರಾದ ಮಹಾದೇವಕ್ಕ ಹವಳದ, ಸುಶೀಲಮ್ಮ ಮಜ್ಜಿಗುಡ್ಡ, ಯಲ್ಲಮ್ಮ ಕುಂಬಾರ, ಸುಶೀಲಮ್ಮ ಹಿತ್ತಲಮನಿ, ರೇಣುಕಾ ಕುಂಬಾರ, ಶಾಂತವ್ವ ಹೂಗಾರ, ಶಾಂತಕ್ಕ ಪಾಟೀಲ, ಸವಿತಾ ಮಂಟೂರ, ರೇಖಾ ಮೆಣಸಿನಕಾಯಿ, ರವಿ ಹವಳದ, ಮಂಜುನಾಥ ಚಿಕ್ಕಣ್ಣವರ, ಮಲ್ಲೇಶ ಕುಂಬಾರ, ಯಮನೂರಪ್ಪ ಕಮ್ಮಾರ ಸೇರಿ ಅನೇಕರಿದ್ದರು.