ಅಂಬರೀಷ್ ಅವರಿಗೂ ಹಾರ್ಸ್ ರೇಸ್‌ಗೂ ಅವಿನಾಭಾವ ಸಂಬಂಧ. ಅಂಬರೀಷ್ ಅವರು ಕುದುರೆ ಹಾಗೂ ರೇಸ್ ಅನ್ನು ತುಂಬಾನೇ ಇಷ್ಟಪಡುತ್ತಿದ್ದರು. ಹಾಗೆ ನೋಡಿದರೆ, ಒಂದಷ್ಟು ಸಮಯವನ್ನು ಅಲ್ಲೇ ಕಳೆಯುತ್ತಿದ್ದರು ಕೂಡ. ಹೀಗಾಗಿ, ಈಗಿರುವ ರೇಸ್‌ಕೋರ್ಸ್ ರಸ್ತೆಗೆ ಅಂಬರೀಷ್ ಅವರ ಹೆಸರು ಇಡಬೇಕು ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಒತ್ತಾಯಿಸಿದೆ.
ಈ ಸಂಬಂಧ, ಮುಖ್ಯಮಂತ್ರಿ ಎಚ್.ಡಿ.ಕುಮಾರಸ್ವಾಮಿ ಅವರನ್ನು ಸಂಪರ್ಕಿಸಿ, ರೇಸ್‌ಕೋರ್ಸ್‌ಗೆ ಅಂಬರೀಷ್ ಅವರ ಹೆಸರಿಡಬೇಕು ಎಂದು ಮನವಿ ಮಾಡಲು ನಿರ್ಧರಿಸಿದೆ. ರೇಸ್‌ಕೋರ್ಸ್ ರಸ್ತೆ ನಗರ ಮಧ್ಯೆವಿದೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೂ ಹತ್ತಿರವಿದೆ. ರೇಸ್‌ಕೋರ್ಸ್ ಮೇಲೆ ಅಂಬರೀಷ್ ಅವರಿಗೆ ಅಪಾರ ಪ್ರೀತಿ ಇದ್ದುದರಿಂದ, ಆ ರಸ್ತೆಗೆ ಅಂಬರೀಷ್ ರಸ್ತೆ ಎಂದು ನಾಮಕರಣ ಮಾಡಬೇಕು ಎಂದು ಚಿತ್ರೋದ್ಯಮದಿಂದ ಒತ್ತಾಯ ಮಾಡಲು ಮಂಡಳಿ ನಿರ್ಧರಿಸಿದೆ.
ರಾಜ್ಯಾದ್ಯಂತ ಚಿತ್ರ ಪ್ರದರ್ಶನ ರದ್ದು: ಅಂಬರೀಷ್ ನಿಧನದ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯದಲ್ಲಿರುವ ಬಹುತೇಕ ಚಿತ್ರಮಂದಿರಗಳು ಸ್ವ-ಇಚ್ಛೆಯಿಂದಲೇ ಪ್ರದರ್ಶನ ಹಾಗೂ ಸಿನಿಮಾ ಚಟುವಟಿಕೆಗಳನ್ನು ರದ್ದು ಮಾಡುವ ಮೂಲಕ ಗೌರವ ಸಲ್ಲಿಸಿದ್ದು ವಿಶೇಷ. ಚಿತ್ರಮಂದಿರದ ಮಾಲೀಕರು ವೈಯಕ್ತಿಕವಾಗಿಯೇ ಚಿತ್ರ ಪ್ರದರ್ಶನ ರದ್ದುಪಡಿಸುವ ಮೂಲಕ ಅಂಬರೀಷ್ ಅವರಿಗೆ ವಿಶೇಷ ನಮನ ಸಲ್ಲಿಸಿದ್ದಾರೆ.
ಚಿತ್ರಪ್ರದರ್ಶನ ಮಾತ್ರವಲ್ಲ, ಚಿತ್ರರಂಗದ ಎಲ್ಲಾ ಚಟುವಟಿಕೆಗಳನ್ನು ಸಹ ಸ್ಥಗಿತಗೊಳಿಸಲಾಯಿತು. ಡಬ್ಬಿಂಗ್, ಎಡಿಟಿಂಗ್, ಎಫೆಕ್ಟ್ಸ್ ಸೇರಿದಂತೆ ಇನ್ನಿತರೆ ಸಿನಿಮಾ ಕಾರ್ಯಗಳನ್ನೆಲ್ಲಾ ರದ್ದುಪಡಿಸಲಾಯಿತ್ತು. ಸಾಮಾನ್ಯವಾಗಿ ಈ ರೀತಿಯ ಸಂದರ್ಭಗಳಲ್ಲಿ ಬೆಂಗಳೂರು, ಮೈಸೂರು ಸೇರಿದಂತೆ ಇನ್ನಿತರೆ ನಗರಗಳಲ್ಲಿ ಮಾತ್ರ ಸ್ವ-ಇಚ್ಛೆಯಿಂದಲೇ ಚಿತ್ರ ಪ್ರದರ್ಶನ ರದ್ದು ಮಾಡುವುದು ವಾಡಿಕೆ.
ಆದರೆ, ಉತ್ತರ ಕರ್ನಾಟಕ, ದಕ್ಷಿಣ ಕನ್ನಡ ಭಾಗದಲ್ಲೂ ಸಹ ಯಾವುದೇ ಒಂದು ಚಿತ್ರಪ್ರದರ್ಶನವಾಗಿಲ್ಲ. ಮಲ್ಟಿಪ್ಲೆಕ್ಸ್‌ನಲ್ಲೂ ಚಿತ್ರಪ್ರದರ್ಶನಗೊಂಡಿಲ್ಲ. ಸೋಮವಾರ (ಇಂದು) ಚಿತ್ರಪ್ರದರ್ಶನ ಸೇರಿದಂತೆ ಚಿತ್ರರಂಗದ ಚಟುವಟಿಕೆಗಳು ಎಂದಿನಂತೆ ನಡೆಯುತ್ತವೆಯಾ ಎಂಬುದಕ್ಕೆ ಸ್ಪಷ್ಟ ಉತ್ತರ ಸಿಕ್ಕಿಲ್ಲ.
ಈಡೇರದ ಮನೆ ಕನಸು: ಅಂಬರೀಶ್ ಅವರನ್ನು ಬಲ್ಲವರು ಯಾರೇ ಆದರೂ ಹೇಳುತ್ತಿದ್ದ ಒಂದು ಮಾತೆಂದರೆ ಅವರು ಯಾವತ್ತೂ ಯಾವುದಕ್ಕೂ ದುಃಖ ಮಾಡಿಕೊಂಡ ವ್ಯಕ್ತಿಯಲ್ಲ ಎಂದು. ಖುಷಿಯಾಗಿ ಇರುವ ವ್ಯಕ್ತಿತ್ವವನ್ನು ಅಂಬರೀಶ್ ಮೈಗೂಡಿಸಿಕೊಂಡಿದ್ದರು. ಅವರಿಗೆ ಇತ್ತೀಚೆಗೆ ಇದ್ದ ಒಂದೇ ಒಂದು ಸಣ್ಣ ಬೇಸರವೆಂದರೆ ಅದು ಮನೆ ನವೀಕರಣದ ಕೆಲಸ ಮುಗಿಯಲಿಲ್ಲ ಎಂಬುದು.
ಅಂಬರೀಶ್ ಅವರು ತಮ್ಮ ಜೆ.ಪಿ.ನಗರದ ಮನೆಯ ನವೀಕರಣ ಕಾರ್ಯಕ್ಕೆ ಕೈ ಹಾಕಿದ್ದರು. ಆದಷ್ಟು ಬೇಗ ನವೀಕರಿಸಿ ಆ ಮನೆಗೆ ಹೋಗಬೇಕೆಂಬ ಆಸೆ ಅವರಿಗಿತ್ತು. ಆದರೆ, ಅದು ಈಡೇರಲಿಲ್ಲ. ಮನೆ ಕೆಲಸ ತಡವಾಗುತ್ತಿದ್ದರಿಂದ ಮನೆಗೆ ಹೋಗಲು ಸಾಧ್ಯವಾಗುತ್ತಿಲ್ಲ ಎಂಬ ನೋವು ಅವರಲ್ಲಿತ್ತು. ಆದರೆ, ಶನಿವಾರ ಮಧ್ಯರಾತ್ರಿ ಆಸ್ಪತ್ರೆಯಿಂದ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಅವರ ನವೀಕರಿಸುತ್ತಿದ್ದ ಮನೆಗೆ ಕೊಂಡೊಯ್ಯಲಾಯಿತು.