ಕೊರಟಗೆರೆ: ಸಾರ್ವಜನಿಕವಾಗಿ ಹಿಂದು ಸ್ಮಶಾನವಾಗಿ ಎಲ್ಲಾ ಸಮುದಾಯದವರಿಗೂ ಒಂದೇ ಸ್ಮಶಾನ ಎಂಬ ಸರ್ಕಾರದ ಆದೇಶದಂತೆ ಮುಂದಿನ ದಿನಗಳಲ್ಲಿ ಪಟ್ಟಣ ಹಾಗೂ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗಳೊಂದಿಗೆ ಸರ್ಕಾರಿ ಜಮೀನುಗಳಲ್ಲಿ ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಲಾಗುವುದು ಹಾಗೂ ದಲಿತ ಮುಖಂಡರ ಮನವಿ ಮೇರೆಗೆ ಪ್ರತ್ಯೇಕ ಸ್ಮಶಾನ ಮಂಜೂರಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಹಶೀಲ್ದಾರ್ ನಾಹಿದಾ ಜಮ್ ಜಮ್ ತಿಳಿಸಿದರು.
ಕೊರಟಗೆರೆ ಪಟ್ಟಣದ ಡಾ, ಅಂಬೇಡ್ಕರ್ ಭವನದಲ್ಲಿ ಸಮಾಜ ಕಲ್ಯಾಣ ಇಲಾಖೆ ಆಯೋಜಿಸಿದ್ದ ಪರಿಶಿಷ್ಠ ಜಾತಿ, ಪರಿಶಿಷ್ಠ ವರ್ಗದ ಹಿತರಕ್ಷಣಾ ಸಮಿತಿ ಸಬೆಯ ಅಧ್ಯಕ್ಷತೆ ವಹಿಸಿ ದಲಿತ ಮುಖಂಡ ದಾಡಿ ವೆಂಕಟೇಶ್ ರವರ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ವರ್ಗಕ್ಕೆ ಪ್ರತ್ಯೇಕ ಸ್ಮಶಾನಕ್ಕೆ ಮನವಿ ಸಲ್ಲಿಸಿದ ಹಿನ್ನೆಲೆಯಲ್ಲಿ ಮಾತನಾಡಿ ಸಾರ್ವಜನಿಕವಾಗಿ ಎಲ್ಲಾ ಸಮುದಾಯದವರಿಗೂ ಒಂದೇ ಸ್ಮಶಾನ ಎಂಬ ಸರ್ಕಾರದ ಆದೇಶವಾಗಿದ್ದು ಮುಂದಿನ ದಿನಗಳಲ್ಲಿ ಎಲ್ಲಾ ಪಟ್ಟಣ ಹಾಗೂ ಗ್ರಾಮಗಳಲ್ಲಿ ಮೂಲಭೂತ ಸೌಕರ್ಯಗ ಳೊಂದಿಗೆ ಸರ್ಕಾರಿ ಜಮೀನುಗಳಲ್ಲಿ ಹಿಂದು ಸ್ಮಶಾನಕ್ಕೆ ಭೂಮಿ ಮಂಜೂರು ಮಾಡಲಾಗುವುದು ಹಾಗೂ ದಲಿತ ಮುಖಂಡರ ಮನವಿ ಮೇರೆಗೆ ಸರ್ಕಾರದ ಆದೇಶ ರದ್ದುಪಡಿಸಿ ಪರಿಶಿಷ್ಠ ಜಾತಿ ಮತ್ತು ವರ್ಗಕ್ಕ ಪ್ರತ್ಯೇಕ ಸ್ಮಶಾನ ಮಂಜೂರಿಗೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುವುದು ಎಂದು ತಿಳಿಸಿದರು. ಅವರು ಈಗಾಗಲೆ ದಾಸರಹಳ್ಳಿ ಗ್ರಾಮದಲ್ಲಿ ಸ್ಮಶಾನಕ್ಕಾಗಿ ಕಾಯ್ದಿರಿಸಿದ ಜಮೀನನ್ನು ಮತ್ತು ಅಕ್ಕಿರಾಂಪುರ ಗ್ರಾಮದ ಒತ್ತುವರಿಯಾಗಿರುವ ಪ್ರದೇಶವನ್ನು ತೆರೆವುಗೊಳಿಸಿ ಪಂಚಾಯಿತಿಗೆ ಹಸ್ತಾಂತರಿಸಲಾಗಿರುತ್ತದೆ ಎಂದು ತಿಳಿಸಿದರು.
ಪಟ್ಟಣ ಪಂಚಾಯಿತಿ ಮುಖ್ಯಾಧಿಕಾರಿ ಭಾಗ್ಯಮ್ಮ ಮಾತನಾಡಿ ಪಟ್ಟಣ ಪಂಚಾಯಿತಿ ಆದಾಯದಲ್ಲಿ ಗುತ್ತಿಗೆ ನೌಕರರ ವೇತನ, ಸರ್ಕಾರಕ್ಕೆ ಪಾವತಿಸಬೇಕಾದ ಕರಗಳು ಮತ್ತು ತೆರಿಗೆಗಳು ಹಾಗೂ ಕಚೇರಿಯ ಆಡಳಿತಾತ್ಮಕ ವೆಚ್ಚಗಳನ್ನು ಕಳೆದು ಉಳಿದ ಮೊತ್ತದಲ್ಲಿ ಶೇ.24.10, ಶೇ.7.25 ಹಾಗೂ ಶೇ.5 ರಷ್ಟು ಮೀಸಲಿಡಲಾಗಿದೆ ಹಾಗೂ 2021-22 ನೇ ಸಾಲಿನಲ್ಲಿ ಎಸ್.ಎಫ್.ಸಿ ಅನುದಾನ ಶೇ.24.10 ರಲ್ಲಿ ಕ್ರಿಯಾ ಯೋಜನೆ ತಯಾರಿಸಿ ಅಂಬೇಡ್ಕರ್ ಜಯಂತಿಗೆ 20 ಸಾವಿರ ಮೀಸಲಾಗಿರಿಸಿದ್ದು ಅದರಂತೆ ಮೊತ್ತವನ್ನು ಖರ್ಚು ಮಾಡಲಾಗಿದೆ ಎಂದು ತಿಳಿಸಿದರು. ವಿಶ್ವೇಶ್ವರಯ್ಯ ಜಲ ನಿಗಮ ನಿಯಮಿತ ಎತ್ತಿನಹೊಳೆ ಜಲ ನಿಗಮ ನಿಯಮಿತ ಸಹಾಯಕ ಕಾರ್ಯಪಾಲಕ ಇಂಜಿನಿಯರ್ ದಾಡಿ ವೆಂಕಟೇಶ್ ಪ್ರಶ್ನೆಗೆ ಮಾತನಾಡಿ 2018-19 ನೇ ಸಾಲಿನ ವರೆಗೆ ಕೆ.ಆರ್.ಐ.ಡಿ.ಎಲ್ ಇಲಾಖೆಗೆ ಕಾಮಗಾರಿಗಳನ್ನು ಕೈಗೊಳ್ಳಲು ಮೇಲಾಧಿಕಾರಿಗಳು ಅನುಮೋದನೆ ನೀಡಿದ್ದು, ಅದರಂತೆ ಕಾಮಗಾರಿಗಳನ್ನು ಕೈಗೊಂಡಿರುತ್ತಾರೆ, 2019-20 ಮತ್ತು 2021-22 ನೇ ಸಾಲಿನ ಕಾಮಗಾರಿಗಳನ್ನು ನಿಗಮದ ವತಿಯಿಂದಲೇ ಅನುಷ್ಠಾನಗೊಳಿಸಲು ಅನುದಾನ ಒದಗಿಸಿದ್ದು, ಅದರಂತೆ ಕೆ.ಟಿ.ಪಿ.ಪಿ ನಿಯಗಳನ್ವಯ ಕಾಮಗಾರಿಗಳನ್ನು ಟೆಂಡರ್ ಆಹ್ವಾನಿಸಿ ಕೈಗೆತ್ತಿಕೊಳ್ಳಲಾಗುತ್ತಿದೆ ಎಂದು ಮಾಹಿತಿ ನೀಡಿದರು.
ದಾಸರಹಳ್ಳಿ ಮಂಜುನಾಥ್ ತಾಲೂಕಿನಲ್ಲಿ ಪರಿಶಿಷ್ಠ ಜಾತಿ ಮತ್ತು ವರ್ಗದ ಜನಾಂಗದ ಮೇಲೆ ಮದ್ಯ ಮಾರಾಟ ಮಾಡುತ್ತಾರೆ ಎಂದು ಅಬಕಾರಿ ನಿರೀಕ್ಷಕರು ಕೇಸ್ ದಾಖಲಿಸಿ ಹಿಂಸೆ ನೀಡುತ್ತಿದ್ದಾರೆ ತಾಲೂಕಿನಲ್ಲಿ ಎಷ್ಟು ಮದ್ಯದ ಅಂಗಡಿಗಳಿವೆ ಎಂಬ ಪ್ರಶ್ನೆಗೆ ಅಬಕಾರಿ ನಿರೀಕ್ಷಕಿ ಶ್ರೀಲತಾ ಮಾಹಿತಿ ನೀಡಿ ತಾಲೂಕಿನಲ್ಲಿ ಮನೆಗಳಲ್ಲಿ, ಚಿಲ್ಲರೆ ಅಂಗಡಿ, ಪೆಟ್ಟಿಗೆ ಅಂಗಡಿಗಳಲ್ಲಿ ಅಕ್ರಮವಾಗಿ ಮದ್ಯ ಮಾರಾಟ ಮಾಡುತ್ತಿರುವವರ ಮೇಲೆ ಅನಿರೀಕ್ಷಿತ ದಾಳಿ ಮಾಡಿ ಜನವರಿ 2021 ರಿಂದ ಅಕ್ಟೋಬರ್ 2021 ವರೆಗೆ 218 ದಾಳಿ ನಡೆಸಿ ಅಕ್ರಮ ಮಧ್ಯಮಾರಾಟ ಮಾಡುವವರ ವಿರುದ್ದ 16 ಕಠಿಣ ಪ್ರಕರಣ ದಾಖಲಿಸಿ, 147 ಮಂದಿ ಆರೋಪಿಗಳನ್ನು ದಸ್ತಗಿರಿ ಮಾಡಿ 1194.310 ಲೀಟರ್ ಮಧ್ಯ 4.300 ಲೀ ಬಿಯರ್, 32 ಲೀಟರ್ ಶೇಂದಿ ಮತ್ತು 1.650 ಕಿ.ಲೋ ಗ್ರಾಂ ಗಾಂಜಾವನ್ನು ಜಪ್ತಿ ಪಡಿಸಿಕೊಳ್ಳಲಾಗಿದೆ. ದಂಡದ ಹಣ 6,08,500 ರೂಗಳನ್ನು ಸರ್ಕಾರಕ್ಕೆ ಸಂದಾಯ ಮಾಡಲಾಗಿದೆ. ಪ್ರಕರಣಗಳು ದಾಖಲಿಸುವಾಗ ಮೇಲ್ವರ್ಗ, ಕೆಳವರ್ಗ, ಪರಿಶಿಷ್ಟ ಜಾತಿ, ವರ್ಗ ಎಂಬ ಜಾತಿ ಬೇಧ ವಿಂಗಡಿಸದೇ ಕೃತ್ಯ ನಡೆದ ಅನುಸಾರವಾಗಿ ಪ್ರಕರಣ ದಾಖಲಿಸಲಾಗಿದೆ. ಕೊರಟಗೆರೆ ವಲಯ ವ್ಯಾಪ್ತಿಯಲ್ಲಿ ಒಟ್ಟು 22 ಮದ್ಯದಂಗಡಿಗಳು ಕಾರ್ಯನಿರ್ವಹಿಸುತ್ತಿರುತ್ತದೆ ಎಂದು ಸಭೆಗೆ ಮಾಹಿತಿ ನೀಡಿದರು.
ಬೆಸ್ಕಾಂ ಇಎಎ ಮಲ್ಲಣ್ಣ ಸಭೆಯಲ್ಲಿ ಮಾಹಿತಿ ನೀಡಿ ಸರ್ಕಾರ ಪರಿಶಿಷ್ಠ ಜಾತಿ ಮತ್ತು ಪರಿಶಿಷ್ಠ ಪಂಗಡಕ್ಕೆ ಸೇರಿದ ಎಲ್ಲಾ ಬಡತನ ರೇಖೆಗಿಂತ ಕೆಳಗಿರುವ ಬಿಪಿಎಲ್ ಕಟುಂಬಕ್ಕೆ ಮಾಸಿಕ 75 ಯೂನಿಟ್ ಗಳವರೆಗಿನ ಉಚಿತ ವಿದ್ಯುತ್ ಸೌಲಭ್ಯ ನೀಡಲಾಗಿದ್ದು ಅರ್ಹ ಫಲಾನುಭವಿಗಳು ಬಿಪಿಎಲ್ ರೇಷಣ್ ಕಾರ್ಡ್(ಆರ್.ಸಿ.ಸಮಖ್ಯೆ ಸಹಿತ), ಆಧಾರ್ ಕಾರ್ಡ್, ಜಾತಿ ಪ್ರಮಾಣ ಪತ್ರ, ಬ್ಯಾಂಕ್ ಖಾತೆ ಐಎಪ್‍ಎಸ್‍ಸಿ ಕೋಡ್ ಸಹಿತ ಪಾಸ್ ಬುಕ್ ಜೆರಾಕ್ಸ್ ಪ್ರತಿಗಳೊಂದಿಗೆ ಬೆಸ್ಕಾಂ ಇಲಾಖೆ ಅರ್ಜಿನಮೂನೆಯೊಂದಿಗೆ ಅರ್ಜಿ ಸಲ್ಲಿಸುವಂತೆ ಮನವಿ ಮಾಹಿತಿ ನೀಡಿದರು.
ಸಭೆಯಲ್ಲಿ ಸರ್ಕಾರಿ ಮಾಧ್ಯಮಿಕ ಶಾಲೆಗಳಲ್ಲಿ ವಿದ್ಯಾಬ್ಯಾಸ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ವಿದ್ಯಾರ್ಥಿವೇತನ ಬಿಡುಗಡೆಯಾಗಿಲ್ಲ ಸಮಾಜ ಕಲ್ಯಾಣಾಧಿಕಾರಿಗಳು ತಕ್ಷಣ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಲಾಯಿತು,
ಈ ಸಂದರ್ಭ ದಲ್ಲಿ ತಾ.ಪಂ. ಕಾರ್ಯನಿರ್ವಹಣಾಧಿಕಾರಿ ಡಾ.ದೊಡ್ಡಸಿದ್ದಪ್ಪ, ಸಮಾಜಕಲ್ಯಾಣಾದಿಕಾರಿ ಉಮಾದೇವಿ, ಕ್ಷೇತ್ರಶಿಕ್ಷಣಾಧಿಕಾರಿ ಸುಧಾಕರ್, ಪಿಎಸೈ ನಾಗರಾಜು, ಜಿ.ಪಂ ಎಇಇ ರವಿಕುಮಾರ್, ಬೆಸ್ಕಾಂ ಎಇಇ ಮಲ್ಲಣ್ಣ, ಕೃಷಿ ಸಹಾಯಕ ನಿರ್ದೇಶಕ ನಾಗರಾಜು, ಟಿಹೆಚ್‍ಓ ಡಾ.ವಿಜಯ್‍ಕುಮಾರ್, ಸಿದ್ದನಗೌಡ , ಅಂಬಿಕಾ , ಸುರೇಶ್ , ಭಾಗ್ಯಮ್ಮ, ಮುಖಂಡರುಗಳಾದ ಪ.ಪಂ.ಸದಸ್ಯ ಪುಟ್ಟನರಸಪ್ಪ, ವಿನಯ್‍ಕುಮಾರ್, ರಮೇಶ್, ದಾಡಿ ವೆಂಕಟೇಶ್, ಅಗ್ರಹಾರ ನಾಗರಾಜು, ಮಲ್ಲೆಕಾವು ರಮೇಶ್, ಸೇರಿದಂತೆ ಇನ್ನಿತರ ಇಲಾಖಾ ಅಧಿಕಾರಿಗಳು, ಮುಖಂಡರುಗಳು ಉಪಸ್ಥಿತರಿದ್ದರು.