Advertisement

ರಾಚವಿಗೆ ಸರ್ಕಾರಿ ಭೂಮಿ ನೀಡಲು ಮನವಿ

02:05 PM Mar 04, 2020 | Suhan S |

ಬೆಳಗಾವಿ: ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಬೆಳಗಾವಿ ತಾಲೂಕಿನ ಹಿರೇಬಾಗೇವಾಡಿ ಮತ್ತು ಹಾಲಗಿಮರಡಿ ಗ್ರಾಮದಲ್ಲಿರುವ ಸರ್ಕಾರಿ ಭೂಮಿ ನೀಡುವಂತೆ ಒತ್ತಾಯಿಸಿ ಶಿಕ್ಷಕೇತರ ನೌಕರರ ಸಂಘದ ಸದಸ್ಯರು ಮಂಗಳವಾರ ಜಿಲ್ಲಾಧಿಕಾರಿಗೆ ಮನವಿ ಸಲ್ಲಿಸಿದರು.

Advertisement

ಉತ್ತರ ಕರ್ನಾಟಕದ ಕನ್ನಡ ಹೋರಾಟಗಾರರು, ಸ್ವಾಮೀಜಿಗಳು, ಸಾಹಿತಿಗಳು, ಸಾರ್ವಜನಿಕರು, ಶಿಕ್ಷಣ ಪ್ರೇಮಿಗಳು ಮತ್ತು ವಿದ್ಯಾರ್ಥಿಗಳ ಆಶಯದಂತೆ ಹತ್ತು ವರ್ಷಗಳ ಹಿಂದೆ ಸ್ಥಾಪನೆಯಾದ ರಾಣಿ ಚನ್ನಮ್ಮ ವಿಶ್ವವಿದ್ಯಾಲಯವು ಈಗ ಭೂತರಾಮನಹಟ್ಟಿಯಲ್ಲಿ ಕೇಂದ್ರ ಸರ್ಕಾರವು ಗುರುತುಪಡಿಸಿ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಕಾರ್ಯನಿರ್ವಹಿಸುತ್ತಿದೆ.ಆದರೆ ಇದು ಕಾಯ್ದಿಟ್ಟ ಅರಣ್ಯ ಪ್ರದೇಶವೆಂದು ಘೋಷಿತವಾದ್ದರಿಂದ ಈ ಜಾಗವು ವಿವಿಯ ಸುಪರ್ದಿಯಲ್ಲಿಲ್ಲ ಎಂದು ಹೇಳಿದರು.

ವಿಶ್ವವಿದ್ಯಾಲಯದಲ್ಲಿ ಪ್ರಸ್ತುತ ವಿವಿಧ 19 ಸ್ನಾತಕೋತ್ತರ ವಿಷಯಗಳು ವಿಭಾಗಗಳು, ವಿವಿಧ ಅಧ್ಯಯನ ಪೀಠಗಳು ಕಾರ್ಯನಿರ್ವಹಿಸುತ್ತಿದ್ದು, ಸುಮಾರು 2000 ವಿದ್ಯಾರ್ಥಿಗಳ ಜೊತೆಗೆ ಸಂಶೋಧನಾ ವಿದ್ಯಾರ್ಥಿಗಳು ವ್ಯಾಸಂಗ ಮಾಡುತ್ತಿದ್ದಾರೆ. ಇದರೊಂದಿಗೆ 100 ಜನ ಬೋಧಕರು, 200 ಜನ ಬೋಧಕೇತರ ಸಿಬ್ಬಂದಿ ಸೇವೆ ಸಲ್ಲಿಸುತ್ತಿದ್ದಾರೆ. ಆದರೆ ವಿಶ್ವವಿದ್ಯಾಲಯವು ಸ್ವಂತಜಾಗ ಹೊಂದದೇ ಇರುವುದರಿಂದ ಯಾವುದೇ ಅಭಿವೃದ್ಧಿ ಕೆಲಸಗಳಾಗುತ್ತಿಲ್ಲ. ಸದ್ಯವಿರುವ ಕಟ್ಟಡದಲ್ಲಿಯೇ ಎಲ್ಲ ಕೆಲಸಗಳು ನಡೆಯುತ್ತಿವೆ ಎಂದು ತಮ್ಮ ಸಮಸ್ಯೆ ಹೇಳಿಕೊಂಡರು.

ಕಾಯ್ದಿಟ್ಟ ಅರಣ್ಯ ಪ್ರದೇಶವಾದ್ದರಿಂದ ಹೊಸ ಕಟ್ಟಡಗಳ ನಿರ್ಮಾಣ ಮತ್ತು ನವೀಕರಣಗೊಳಿಸಲು ಅರಣ್ಯ ಇಲಾಖೆಯ ಅನುಮತಿ ಇಲ್ಲ. ಇಂತಹ ಸಂದಿಗ್ಧ ಪರಿಸ್ಥಿತಿಯಲ್ಲಿ ಅನೇಕ ಮೂಲಭೂತ ಸೌಕರ್ಯಗಳ ಕೊರತೆಯಿಂದ ವಿಶ್ವವಿದ್ಯಾಲಯದ ನೈಜ ಉದ್ದೇಶ ನಿರೀಕ್ಷಿತ ಮಟ್ಟದಲ್ಲಿ ವಿದ್ಯಾರ್ಥಿಗಳನ್ನು ತಲುಪುತ್ತಿಲ್ಲ. ಮೇಲಾಗಿ ಸ್ವಂತ ಜಾಗ ಇಲ್ಲದೇ ಮತ್ತು ಮೂಲಭೂತ ಸೌಕರ್ಯಗಳ ಕೊರತೆಯಿಂದ ಯು.ಜಿ.ಸಿ.ಮಾನ್ಯತೆ ಕಳೆದುಕೊಳ್ಳುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದರು.

ಈ ಹಿನ್ನೆಲೆಯಲ್ಲಿ ರಾಣಿ ಚನ್ನಮ್ಮ ವಿಶ್ವವಿದ್ಯಾಲಯಕ್ಕೆ ಬೆಳಗಾವಿ ಸಮೀಪ ಇರುವ ಹಾಗೂ ಶೈಕ್ಷಣಿಕ ವಾತಾವರಣಕ್ಕೆ ಪೂರಕವಾಗಿರುವ ಬಾಗೇವಾಡಿ ಗ್ರಾಮದಲ್ಲಿರುವ ಸರ್ವೇ ನಂ.421, 423, 426, 427, 429 ಮತ್ತು 431ದ 88.19 ಎಕರೆ ಹಾಗೂ ಹಾಲಗಿಮರಡಿ ಗ್ರಾಮದಲ್ಲಿರುವ ಸರ್ವೇ ನಂ. 47,48 ಮತ್ತು 49ದ ವಿಸ್ತೀರ್ಣ 38.29 ಎಕರೆಗಳ ಸರ್ಕಾರಿ ಭೂಮಿ ನೀಡಲು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಪಡಿಸಿದರು.

Advertisement

ಈ ಸಂದರ್ಭದಲ್ಲಿ ಶಿಕ್ಷಕೇತರ ನೌಕರರ ಸಂಘ ಅಧ್ಯಕ್ಷ ರಾಮು ಹಂಚಿನಾಳ, ಕಾರ್ಯದರ್ಶಿ ಹಣಮಂತ ಕುಲಗೋಡ, ಸಂಘದ ಸದಸ್ಯ ಮುರಗೇಶ ಎಚ್‌ ಎಂ., ಎಸ್‌ಸಿ, ಎಸ್‌ಟಿ ಸಂಘದ ಅಧ್ಯಕ್ಷೆ ಕೀರ್ತಿವರ್ಮಾ ಎಂ. ಕಾಂಬಳೆ, ಮಾರುತಿ ಕರಿಯವರ, ಹನುಮಂತ ಕುಲಗೋಡ, ಸೋಮಣ್ಣಗೌಡ ಪಾಟೀಲ, ಮಹೇಶ ವಾಲಿ, ರವಿ ಒಂಟಗೂಡಿ, ಜಡೇಶಕುಮಾರ ಕೆರವಡ್ಡಿ, ಮಾರುತಿ ಕರೆಣ್ಣವರ, ಶ್ರೀನಿವಾಸ ಹಡಾಡಿ, ತುಷಾರ ಪಾಟೀಲ, ಪರಶುರಾಮ ಪಾಟೀಲ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next