ಶಿವಮೊಗ್ಗ: ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿ ಮಾಡಿರುವ ರೈತರಿಗೆ ಭೂಮಿ ಹಕ್ಕು ನೀಡಬೇಕೆಂದು ಒತ್ತಾಯಿಸಿ ರಾಜ್ಯ ರೈತಸಂಘ ಹಾಗೂ ಹಸಿರುಸೇನೆಯ ಕಾರ್ಯಕರ್ತರು ಸೋಮವಾರ ಡಾ. ಬಿ.ಆರ್. ಅಂಬೇಡ್ಕರ್ ಭವನದಿಂದ ಜಿಲ್ಲಾಕಾರಿಗಳ ಕಚೇರಿಗೆ ಕಾಲ್ನಡಿಗೆ ಮೂಲಕ ಆಗಮಿಸಿ ಪ್ರತಿಭಟನೆ ನಡೆಸಿದರು.
ರಾಜ್ಯದಲ್ಲಿ ಸುಮಾರು 50 ಲಕ್ಷ ರೈತ ಕುಟುಂಬಗಳು ದಶಕಗಳಿಂದಲೂ ಬಗರ್‌ಹುಕುಂ ಮತ್ತು ಅರಣ್ಯ ಭೂಮಿ ಸಾಗುವಳಿ ಮಾಡುತ್ತಾ ತಮ್ಮ ಬದುಕನ್ನು ಕಟ್ಟಿಕೊಂಡಿದ್ದಾರೆ. ಆದರೆ ಸ್ವಾತಂತ್ರ್ಯ ಬಂದು 70 ವರ್ಷ ಕಳೆದರೂ ಸಾಗುವಳಿ ದಾರರಿಗೆ ಭೂಮಿಯ ಒಡೆತನ ಸಿಕ್ಕಿಲ್ಲ ಎಂದು ಪ್ರತಿಭಟನಾಕಾರರು ದೂರಿದರು.
ಕರ್ನಾಟಕದಲ್ಲಿ ಸುಮಾರು 7 ಲಕ್ಷ ಅರ್ಜಿಗಳು ವಿಲೇವಾರಿಯಾಗಿಲ್ಲ. ನಮೂನೆ 50 ಹಾಗೂ 53ರಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಆದರೆ 75 ವರ್ಷಗಳಿಂದ ಸಾಗುವಳಿ ಮಾಡುತ್ತಿರುವುದರ ಬಗ್ಗೆ ದಾಖಲೆ ನೀಡಬೇಕು ಎನ್ನುವ ನಿಯಮದಿಂದ ರೈತರು ಭೂಮಿ ಹಕ್ಕನ್ನು ಪಡೆಯುವಲ್ಲಿ ವಂಚಿತರಾಗುತ್ತಿದ್ದಾರೆ. ಆದ್ದರಿಂದ ರೈತರಿಗೆ ಯಾವುದೇ ಕಠಿಣ ಷರತ್ತು ವಿಧಿಸದೆ ಭೂಮಿ ಹಕ್ಕು ನೀಡಬೇಕು ಎಂದು ರೈತ ಸಂಘದ ಮುಖಂಡ ಕೆ.ಟಿ. ಗಂಗಾಧರ್ ಹೇಳುತ್ತಾರೆ.
ಭೂಮಿಯ ಹಕ್ಕು ನೀಡುವುದರ ಜೊತೆಗೆ ಭತ್ತದ ಖರೀದಿ ಕೇಂದ್ರಗಳನ್ನು ಗ್ರಾಪಂ ಮಟ್ಟದಲ್ಲಿ ತೆರೆಯಬೇಕು. ಜಿಂದಾಲ್ಗೆ ಭೂಮಿ ಕೊಡುವ ನಿರ್ಧಾರ ಕೈ ಬಿಡಬೇಕು. ರೈತರ ಸಹಕಾರ ಸಂಘಗಳು ಮತ್ತು ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಪಡೆದಿರುವ ಎಲ್ಲಾ ರೀತಿಯ ಸಾಲಗಳನ್ನು ಮನ್ನಾ ಮಾಡಬೇಕು. ಬೆಳೆ ವಿಮೆ ಗೊಂದಲ ಬಗೆಹರಿಸಬೇಕು. 2013ರ ಭೂಸ್ವಾಧೀನ ಕಾಯ್ದೆಯನ್ನು ಜಾರಿಗೆ ತರಬೇಕು ಎಂದು ರೈತರು ಆಗ್ರಹಿಸಿದ್ದಾರೆ.
ಈ ಸಂದರ್ಭದಲ್ಲಿ ವೀರೇಶ್, ಜಯಪ್ಪ ಗೌಡ್ರು, ಯಶವಂತರಾವ್ ಘೋರ್ಪಡೆ, ಜಿ. ಉಮಾಪತಿಯಪ್ಪ, ಹಿರಿಯಣ್ಣಯ್ಯ ಸೇರಿದಂತೆ ಹಲವರಿದ್ದರು.