Advertisement

ಬಜೆಟ್‌ನಲ್ಲಿ ದಲಿತರ ಅಭಿವೃದ್ಧಿಗೆ ಒತ್ತು ನೀಡಲು ಮನವಿ

06:05 AM Feb 04, 2018 | Team Udayavani |

ಬೆಂಗಳೂರು: ಈ ಬಾರಿಯ ಬಜೆಟ್‌ನಲ್ಲಿ ದಲಿತ ಸಮುದಾಯದ ಸಮಗ್ರ ಅಭಿವೃದ್ಧಿಗೆ ಕಾರ್ಯಕ್ರಮ ರೂಪಿಸುವಂತೆ ದಲಿತ ಸಂಘಟನೆಗಳು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಿವೆ.

Advertisement

ಗೃಹ ಕಚೇರಿ ಕೃಷ್ಣಾದಲ್ಲಿ ನಡೆದ ಬಜೆಟ್‌ ಪೂರ್ವಭಾವಿ ಸಭೆಯಲ್ಲಿ ಪಾಲ್ಗೊಂಡಿದ್ದ ದಲಿತ ಸಂಘಟನೆಗಳು, ದಲಿತ ಸಮುದಾಯಕ್ಕೆ ವಸತಿ ಸೌಲಭ್ಯ, ಭೂ ರಹಿತರಿಗೆ ಭೂಮಿ ಹಕ್ಕು, ಸ್ವಂತ ಉದ್ಯೋಗಕ್ಕಾಗಿ ಶೂನ್ಯ ಬಡ್ಡಿ ದರದಲ್ಲಿ ಸಾಲದ ವ್ಯವಸ್ಥೆ ಕಲ್ಪಿಸುವಂತೆ ಮನವಿ ಮಾಡಿದರು.

ರಾಜ್ಯದಲ್ಲಿ ದಲಿತ ಸಮುದಾಯ ಇನ್ನೂ ಸೌಲಭ್ಯಗಳಿಂದ ವಂಚಿತವಾಗಿದೆ. ಸರ್ಕಾರದ ಕಾರ್ಯಕ್ರಮಗಳು, ಯೋಜನೆಗಳು ಪರಿಣಾಮಕಾರಿಯಾಗಿ ಅನುಷ್ಟಾನಗೊಳ್ಳುತ್ತಿಲ್ಲ.  ಈ ಬಾರಿಯ ಬಜೆಟ್‌ನಲ್ಲಿ ದಲಿತ ಸಮುದಾಯದ ಅಭಿವೃದ್ಧಿಗೆ ಹೆಚ್ಚು ಒತ್ತು ನೀಡಬೇಕು. ಹಾಸ್ಟೆಲ್‌ಗ‌ಳಲ್ಲಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ಸೌಲಭ್ಯ ಕಲ್ಪಿಸಲು ಕ್ರಮ ಕೈಗೊಳ್ಳಬೇಕು ಎಂದು ಕೋರಿದರು.

ಮುಖಂಡರಾದ ಸಿ.ಎಂ.ಮುನಿಯಪ್ಪ, ವೆಂಕಟಸ್ವಾಮಿ, ಲಕ್ಷ್ಮಿನಾರಾಯಣ ನಾಗವಾರ, ಮಾವಳ್ಳಿ ಶಂಕರ್‌ ಬಜೆಟ್‌ನಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಬಗ್ಗೆ ತಮ್ಮ ಅಭಿಪ್ರಾಯ, ಸಲಹೆ ನೀಡಿದರು.ಸಮಾಜ ಕಲ್ಯಾಣ ಸಚಿವ ಎಚ್‌.ಆಂಜನೇಯ ಉಪಸ್ಥಿತರಿದ್ದರು.

ಸಂಜೆ  ಮುಖ್ಯಮಂತ್ರಿಯವರು ಹಿಂದುಳಿದ ವರ್ಗಗಳ ಸಂಘಟನೆಗಳ ಮುಖಂಡರೊಂದಿಗೆ ಬಜೆಟ್‌ ಪೂರ್ವಭಾವಿ ಸಮಾಲೋಚನೆ ನಡೆಸಿದರು. ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮದಿಂದ ಹೊಸ ಯೋಜನೆಗಳನ್ನು ರೂಪಿಸಿ ಜಾರಿಗೊಳಿಸುವ ಸಂಬಂಧ ಸಭೆಯಲ್ಲಿ ಸಲಹೆ ನೀಡಲಾಯಿತು ಎಂದು ಹೇಳಲಾಗಿದೆ. ಸಚಿವ ಎಚ್‌.ಎಂ.ರೇವಣ್ಣ ಉಪಸ್ಥಿತರಿದ್ದರು.

Advertisement

ಬಹಿಷ್ಕಾರ
ರಾಜ್ಯ ಸರ್ಕಾರ ಸದಾಶಿವ ಆಯೋಗ ವರದಿ ಜಾರಿಗೆ ಮೀನಾಮೇಷ ಎಣಿಸುತ್ತಿದೆ ಎಂದು ಆರೋಪಿಸಿ ಕೆಲವು ದಲಿತ ಮುಖಂಡರು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದ ಬಜೆಟ್‌ ಪೂರ್ವ ಭಾವಿ ಸಭೆ ಬಹಿಷ್ಕರಿಸಿ ಹೊರನಡೆದ ಘಟನೆ ನಡೆಯಿತು.

ಗೃಹ ಕಚೇರಿ ಕೃಷ್ಣಾದಲ್ಲಿ ಕರೆಯಲಾಗಿದ್ದ ಬಜೆಟ್‌ ಪೂರ್ವಭಾವಿ ಸಭೆಗೆ ಬಂದಿದ್ದ ಮಾರಸಂದ್ರ ಮುನಿಯಪ್ಪ ಹಾಗೂ ಎನ್‌.ಮೂರ್ತಿ ಸಭೆ ಬಹಿಷ್ಕರಿಸಿರುವುದಾಗಿ ಹೇಳಿ ಹೊರ ನಡೆದರು.

ಈ ಸಂದರ್ಭದಲ್ಲಿ ಮಾತನಾಡಿದ ಮಾರಸಂದ್ರ ಮುನಿಯಪ್ಪ, ಸಭೆಯಲ್ಲಿ ಸದಾಶಿವ ಆಯೋಗ ಜಾರಿ ಬಗ್ಗೆ ಕೇಳಿದೆವು. ಮುಖ್ಯಮಂತ್ರಿಯವರು ಸ್ಪಂದಿಸದ ಕಾರಣ ಸಭೆ ಬಹಿಷ್ಕರಿಸಿದ್ದೇವೆ ಎಂದು ಹೇಳಿದರು.

ಸದಾಶಿವ ಆಯೋಗದ ವರದಿ ಕಾರಿ ವಿಚಾರದಲ್ಲಿ ರಾಜ್ಯ ಸರ್ಕಾರ ಉದ್ದೇಶಪೂರ್ವಕವಾಗಿ ನಿರ್ಲಕ್ಷ್ಯ ಮಾಡುತ್ತಿದೆ. ರಾಹುಲ್‌ಗಾಂಧಿ ರಾಜ್ಯಕ್ಕೆ ಬಂದಾಗ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು. ವರದಿ ಜಾರಿಗಾಗಿ ರಾಜ್ಯದ 27 ಜಿಲ್ಲೆಗಳಲ್ಲಿ ಪ್ರತಿಭಟನೆ ಮಾಡಿದ್ದೇವೆ. ಎಲ್ಲೆಡೆ ವರದಿ ಜಾರಿಗೆ ಒಮ್ಮತ ಇದೆ. ದಲಿತರ ಬಗ್ಗೆ ಕಾಂಗ್ರೆಸ್‌ ಸರ್ಕಾರಕ್ಕೆ ನಿಜವಾದ ಕಳಕಳಿ ಇದ್ದರೆ ಕೂಡಲೇ ಸದಾಶಿವ ವರದಿ ಜಾರಿ ಮಾಡಬೇಕು ಎಂದು ಆಗ್ರಹಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next