ಶಿವಮೊಗ್ಗ: ಸ್ಮಾರ್ಟ್‌ಸಿಟಿ ಅಧಿಕಾರಿಗಳ ಅವೈಜ್ಞಾನಿಕ ನಡೆಯಿಂದಾಗಿ ಶಿವಮೊಗ್ಗ ನಗರ ಕೆರೆ ಸಿಟಿಯಾಗಿ ಮಾರ್ಪಟ್ಟಿದೆ ಎಂದು ಆರೋಪಿಸಿ ಶಿವಮೊಗ್ಗ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಕಾರ್ಯಕರ್ತರು ಜಿಲ್ಲಾಧಿಕಾರಿಗೆ ಶುಕ್ರವಾರ ಮನವಿ ಸಲ್ಲಿಸಿದರು.
ಕಳೆದ ಎರಡು ಮೂರು ದಿನಗಳಿಂದ ಸುರಿಯುತ್ತಿರುವ ಧಾರಕಾರ ಮಳೆಯಿಂದಾಗಿ ಜನಜೀವನ ಅಸ್ತವ್ಯಸ್ತವಾಗಿದೆ. ಶಿವಮೊಗ್ಗ ನಗರ ಸಂಪೂರ್ಣ ಕೆರೆಯಂತಾಗಿದೆ. ಸ್ಮಾರ್ಟ್ ಸಿಟಿಯ ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ರಸ್ತೆಗಳೆಲ್ಲಾ ಹೊಳೆಯಂತಾಗಿವೆ. ಬಡಾವಣೆಗಳೆಲ್ಲವೂ ನದಿಗಳಾಗಿವೆ. ಬಹುತೇಕ ಬಡಾವಣೆಗಳ ನೆಲಮಹಡಿ ಮನೆಗಳಿಗೆ ನೀರು ಪ್ರವಾಹದಂತೆ ನುಗ್ಗಿವೆ ಎಂದು ಮನವಿಯಲ್ಲಿ ಅಸಮಾಧಾನ ವ್ಯಕ್ತಪಡಿಸಲಾಗಿದೆ.
ಸ್ಮಾರ್ಟ್ ಸಿಟಿ ಕಾಮಗಾರಿಗಳು ಸಕಾಲಕ್ಕೆ ಪೂರ್ಣಗೊಂಡಿಲ್ಲ. ಹಲವೆಡೆ ಬೃಹದಾಕಾರದ ಗುಂಡಿಗಳನ್ನು ತೆಗೆಯಲಾಗಿದೆ. ರಸ್ತೆಗಳನ್ನು ಅಗೆಯಲಾಗಿದೆ. ಇದೀಗ ರಸ್ತೆಗಳೆಲ್ಲಾ ಜಲಾವೃತವಾಗಿರುವುದರಿಂದ ಸಂಚಾರವೇ ದುಸ್ತರವಾಗಿದೆ. ಮಳೆಗಾಲ ಆರಂಭಕ್ಕೂ ಮುನ್ನವೇ ಸುರಿಯುತ್ತಿರುವ ಮಳೆಗೆ ಇಷ್ಟೊಂದು ಅವಾಂತರ ಸೃಷ್ಟಿಯಾಗಿದೆ. ಮುಂದಿನ ದಿನಗಳಲ್ಲಿ ಮತ್ತಷ್ಟು ಗಂಭೀರವಾದ ಪರಿಣಾಮ ಎದುರಿಸಬೇಕಾಗುತ್ತದೆ. ಹಾಗಾಗಿ ಜಿಲ್ಲಾಡಳಿತ ಹಾಗೂ ಮಹಾನಗರ ಪಾಲಿಕೆ ಶೀಘ್ರವೇ ಎಚ್ಚೆತ್ತುಕೊಂಡು ಕಾಮಗಾರಿ ಶೀಘ್ರ ಪೂರ್ಣಗೊಳಿಸಿ ಜನರ ಸಮಸ್ಯೆ ತಪ್ಪಿಸಬೇಕು ಎಂದು ಮನವಿಯಲ್ಲಿ ಒತ್ತಾಯಿಸಲಾಗಿದೆ.
ಈ ವೇಳೆ ದಕ್ಷಿಣ ಬ್ಲಾಕ್ ಯುವ ಕಾಂಗ್ರೆಸ್ ಅಧ್ಯಕ್ಷ ವಿನಯ್ ತಾಂದ್ಲೆ, ರಾಜ್ಯ ಕಾಂಗ್ರೆಸ್ ನಾಯಕರಾದ ದೇವೇಂದ್ರಪ್ಪ ಕೆ, ಎನ್.ಎಸ್.ಯು. ಐ. ರಾಜ್ಯ ಕಾರ್ಯದರ್ಶಿ ಬಾಲಾಜಿ, ಯುವ ಮುಖಂಡರಾದ ಶರತ್, ವಿನೋದ, ಪ್ರದೀಪ್, ರಘು, ಕಾರ್ಮಿಕ ಘಟಕ ಅಧ್ಯಕ್ಷ ಪ್ರಮೋದ್, ರಾಘವೇಂದ್ರ, ಯುವ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ಪುರಲೆ ಮಂಜು, ಸುರೇಶ್, ಪ್ರಮೋದ್, ಸಂದೀಪ, ಮಂಜುನಾಥ್, ವಿನ್ಯಾಸ, ಭರತ್, ಚಂದನ್, ವಿನಯ್, ಸೇರಿದಂತೆ ಹಲವರಿದ್ದರು.