Advertisement

ಅತಿಕ್ರಮಣ ತೆರವುಗೊಳಿಸಲು ಆಗ್ರಹ

11:18 PM Jul 12, 2019 | Team Udayavani |

ಬೆಳ್ತಂಗಡಿ: ಗೋಮಾಳ ಜಾಗ ಅತಿಕ್ರಮಣವಾಗುತ್ತಿದ್ದರೂ ಗ್ರಾ.ಪಂ. ಕ್ರಮ ಜರಗಿಸದೆ ನಿರ್ಲಕ್ಷ ವಹಿಸುತ್ತಿದೆ. ಉಳಿದಿರುವ ಗೋಮಾಳ ಜಮೀನನ್ನು ಗ್ರಾ.ಪಂ.ಗೆ ಹಸ್ತಾಂತರ ಪ್ರಕ್ರಿಯೆಯೂ ನಡೆದಿಲ್ಲ. ಈ ವಿಚಾರವಾಗಿ ಗ್ರಾಮ ಕರಣಿಕರು ಉತ್ತರ ನೀಡುವಂತೆ ಸದಸ್ಯರು ಗ್ರಾ.ಪಂ. ಸಭೆಯಲ್ಲಿ ಪಟ್ಟುಹಿಡಿದರು.

Advertisement

ಮಡಂತ್ಯಾರು ಗ್ರಾ.ಪಂ. ಸಭಾಂಗಣ ದಲ್ಲಿ ಅಧ್ಯಕ್ಷ ಗೋಪಾಲಕೃಷ್ಣ ಕುಕ್ಕಳ ಅಧ್ಯಕ್ಷತೆಯಲ್ಲಿ ಗುರುವಾರ ನಡೆದ ಮಡಂತ್ಯಾರು ಗ್ರಾ.ಪಂ. ಸಭೆಯಲ್ಲಿ ವಿಚಾರ ಪ್ರಸ್ತಾವವಾಯಿತು. ಕಂದಾಯ ಇಲಾಖೆಯಲ್ಲಿ ಲಭ್ಯ ಇರುವ ಸರಕಾರಿ ಜಮೀನು ಮಾಹಿತಿ ನೀಡಬೇಕು. ಪಾರೆಂಕಿ ವಿದ್ಯಾರ್ಥಿನಿ ನಿಲಯ ಒಟ್ಟು 1 ಎಕ್ರೆ 25 ಸೆಂಟ್ಸ್‌ ಸರಕಾರಿ ಜಾಗ ಹೊಂದಿದ್ದು. ಹಾಸ್ಟೆಲ್‌ನ ಸುಪರ್ದಿಯಲ್ಲಿರುವ ಜಾಗದ ವಿವರ ನೀಡುವಂತೆ ಆಗ್ರಹಿಸಿದರು.

ಹಾಸ್ಟೆಲ್‌ ವಾರ್ಡನ್‌ ಪ್ರತಿಕ್ರಿಯಿಸಿ 1 ಎಕ್ರೆ ಜಾಗ ಹಾಸ್ಟೆಲ್‌ ಸುಪರ್ದಿಯಲ್ಲಿದೆ ಎಂದಾಗ, ಉಳಿದ 25 ಸೆಂಟ್ಸ್‌ ಮಾಹಿತಿ ನೀಡಿ ಎಂದು ಗ್ರಾಮಸ್ಥರು ಪ್ರಶ್ನಿಸಿದರು. ಜಿ.ಪಂ. ಸದಸ್ಯರೊಬ್ಬರು ಅತಿಕ್ರಮಿಸಿದ್ದಾರೆ ಎಂದು ವಾರ್ಡನ್‌ ದೂರಿದರು. ಸಭೆಯಲ್ಲಿ ಹಾಜರಿದ್ದ ಜಿ.ಪಂ. ಸದಸ್ಯ ಉತ್ತರಿಸಿ ಈ ಮೊದಲು ಜಾಗವು ನನ್ನ ವಶದಲ್ಲಿತ್ತು. ನನ್ನ ಗಮನಕ್ಕೆ ತಾರದೆ ಸರಕಾರ ಸರಕಾರಿ ಜಮೀನು ಎಂದು ಮಂಜೂರು ಮಾಡಿದೆ ಎಂದು ವಿವರ ನೀಡಿದರು. ಈ ವಿವರಣೆಗೆ ಗ್ರಾಮಸ್ಥರಿಂದ ಆಕ್ಷೇಪ ವ್ಯಕ್ತವಾಯಿತು.

ಈ ಸಂದರ್ಭ ಗ್ರಾ.ಪಂ. ಸದಸ್ಯರು ಮಧ್ಯಪ್ರವೇಶಿಸಿ, 1 ಎಕ್ರೆ 25 ಸೆಂಟ್ಸ್‌ ಅನ್ನು ಪಹಣಿ ಪತ್ರದಲ್ಲೂ ಸರಕಾರಿ ಜಾಗ ಎಂದು ನಮೂದಿಸಲಾಗಿದೆ. ಸರಕಾರಿ ಜಾಗವನ್ನು ಸರಕಾರಿ ಸಂಸ್ಥೆಗೆ ಮಂಜೂರು ಮಾಡುವಾಗ ಖಾಸಗಿಯವರ ಒಪ್ಪಿಗೆ ಪಡೆಯುವ ಅಗತ್ಯವಿಲ್ಲ. ತಮಗೇನಾದರೂ ಆಕ್ಷೇಪವಿದ್ದರೆ ಸಂಬಂಧಪಟ್ಟವರಿಗೆ ದೂರು ನೀಡಿ ಎಂದು ಜಿ.ಪಂ. ಸದಸ್ಯರಿಗೆ ಸೂಚಿಸಿ ಗೊಂದಲ ತಿಳಿಗೊಳಿಸಿದರು.

ತ್ಯಾಜ್ಯ ವಿಲೇ ಬಗ್ಗೆ ಚರ್ಚೆ
ಮಡಂತ್ಯಾರು – ಕಲ್ಲೇರಿ ಮಾರ್ಗದ ಇಕ್ಕೆಲಗಳಲ್ಲಿ ಕೋಳಿ ಹಾಗೂ ಇನ್ನಿತರ ತ್ಯಾಜ್ಯ ಎಸೆಯಲಾಗುತ್ತಿದ್ದು, ದುರ್ನಾತ ಬೀರುತ್ತಿದೆ ಎಂಬ ಕೂಗು ಕೇಳಿಬಂತು. ಇದಕ್ಕೆ ಉತ್ತರಿಸಿದ ಪಿ.ಡಿ.ಒ., ತ್ಯಾಜ್ಯವನ್ನು ಎಸೆಯದಂತೆ ಗ್ರಾಮದ ಎಲ್ಲ ಕೋಳಿ ಅಂಗಡಿಗಳಿಗೆ ಸೂಚನೆ ಪತ್ರ ನೀಡಲಾಗಿದ್ದು, ತಪ್ಪಿದ್ದಲ್ಲಿ ಪರವಾನಿಗೆ ರದ್ದುಪಡಿದುವ ಕ್ರಮ ಕೈಗೊಳ್ಳಲಾಗುವುದು ಎಂದು ತಿಳಿಸಲಾಗಿದೆ. ಅದಾಗ್ಯೂ ಬೇರೆ ಊರಿನವರು ಬಂದು ಇಲ್ಲಿ ತಾಜ್ಯ ಎಸೆಯುತ್ತಿದ್ದಾರೆ ಎಂಬುದು ಗಮನಕ್ಕೆ ಬಂದಿದೆ. ತ್ಯಾಜ್ಯ ಎಸೆಯುವ ವಾಹನಗಳು ಮತ್ತು ವ್ಯಕ್ತಿಗಳ ಬಗ್ಗೆ ಮಾಹಿತಿ ನೀಡಿದ ಗ್ರಾಮಸ್ಥರಿಗೆ ಸೂಕ್ತ ಬಹುಮಾನ ನೀಡುವ ಬಗ್ಗೆ ತೀರ್ಮಾನಿಸಲಾಯಿತು.

Advertisement

ನೋಡಲ್‌ ಅಧಿಕಾರಿಯಾಗಿ ತೋಟ ಗಾರಿಕ ಸ. ನಿರ್ದೇಶಕ ಶಿವಪ್ರಕಾಶ್‌ ಉಪಸ್ಥಿತರಿದ್ದರು. ಜಿ.ಪಂ. ಸದಸ್ಯೆ ಮಮತಾ ಶೆಟ್ಟಿ, ತಾ.ಪಂ. ಸದಸ್ಯೆ ವಸಂತಿ ಲಕ್ಷ್ಮಣ್‌, ಗ್ರಾ.ಪಂ. ಸದಸ್ಯರು, ಇಲಾಖಾ ಮಟ್ಟದ ಅಧಿಕಾರಿಗಳು ಉಪಸ್ಥಿತರಿದ್ದರು. ಪಿ.ಡಿ.ಒ. ನಾಗೇಶ್‌ ಎಂ. ಸ್ವಾಗತಿಸಿ, ನಿರೂಪಿಸಿ ದರು. ರಮೇಶ್‌ ಮೂಲ್ಯ ವಂದಿಸಿದರು.

ಗ್ರಾಮ ಪುರಸ್ಕಾರ
ರಾಷ್ಟ್ರ ಮಟ್ಟದ ಕಬಡ್ಡಿ ಆಟಗಾರ ಕೌಶಿಕ್‌ ಗೌಡ ಅವರಿಗೆ ಪ್ರಥಮ ಗೌರವ ಗ್ರಾಮ ಪುರಸ್ಕಾರ ನೀಡಿ ಗೌರವಿಸಲಾಯಿತು.

Advertisement

Udayavani is now on Telegram. Click here to join our channel and stay updated with the latest news.

Next