ಪಳ್ಳಿ: ನಿಟ್ಟೆ ಗ್ರಾಮ ಪಂಚಾಯತ್ ಮಟ್ಟದ ಕರ್ನಾಟಕ ಅಭಿವೃದ್ಧಿ ಕಾರ್ಯಕ್ರಮದ ಸಭೆಯು ಪಂಚಾಯತ್ ಅಧ್ಯಕ್ಷೆ ಸಬಿತಾ ಪೂಜಾರಿ ಅವರ ಅಧ್ಯಕ್ಷತೆಯಲ್ಲಿ ಪಂಚಾಯತ್ ಸಭಾಭವನದಲ್ಲಿ ಆ. 1ರಂದು ಜರಗಿತು. ಕಲ್ಲಂಬಾಡಿ ಪದವು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ 96 ಮಕ್ಕಳಿದ್ದು ಈ ಶಾಲೆಯ ಕಟ್ಟಡವು ಮಣ್ಣಿನ ಗೋಡೆಯನ್ನು ಹೊಂದಿದೆ.
ಈ ಕಟ್ಟಡವು ಹಳೆಯದಾಗಿದ್ದು ಶಿಕ್ಷಕರು ಮಕ್ಕಳಿಗೆ ಭಯಭೀತರಾಗಿಯೇ ವಿದ್ಯಾರ್ಜನೆ ನೀಡುವಂತಾಗಿದೆ.ಮಳೆಗಾಲದಲ್ಲಿ ಮಣ್ಣಿನ ಗೋಡೆಯು ನೀರನ್ನು ಹೀರಿಕೊಳ್ಳುತ್ತಿದ್ದು ಗೋಡೆ ಕುಸಿಯುವ ಭೀತಿ ಎದುರಾಗಿದೆ.ಈ ನಿಟ್ಟಿನಲ್ಲಿ ಹೊಸ ಕಟ್ಟಡ ನಿರ್ಮಿಸಿ ಕೊಡುವಂತೆ ಶಾಲಾ ಮುಖ್ಯೋ ಪಾಧ್ಯಾಯರು ಆಗ್ರಹಿಸಿದರು.
ದೂಪದಕಟ್ಟೆ ಯು.ಬಿ.ಎಂ.ಸಿ ಶಾಲೆಯಲ್ಲಿ 2 ಮಕ್ಕಳು ಏಳನೇ ತರಗತಿ ಪೂರೈಸಿ ಎಂಟನೇ ತರಗತಿಗೆ ಸೇರ್ಪಡೆಯಾಗಿಲ್ಲ ಎಂದು ಶಿಕ್ಷಕರು ಸಭೆಯ ಗಮನ ಸೆಳೆದರು. ಈ ಕುರಿತು ಗ್ರಾಮ ಪಂಚಾಯತ್‌ನಿಂದ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.
ಕೆಮ್ಮಣ್ಣು ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯ 3ನೇ ತರಗತಿ ವಿದ್ಯಾರ್ಥಿ ದಿಶಾ ಆಚಾರ್ಯ ಕಳೆದ ಒಂದುವರೆ ವರ್ಷಗಳಿಂದ ಶಾಲೆಗೆ ಗೈರು ಹಾಜರಾಗುತ್ತಿದ್ದ ಬಗ್ಗೆ ಶಾಲಾ ಶಿಕ್ಷಕಿ ಗ್ರೇಟಾ ಸಭೆಯ ಗಮನ ಸೆಳೆದರು. ಈ ಬಗ್ಗೆ ಮನೆಗೆ ಭೇಟಿ ನೀಡಿ ಮನವೊಲಿಸುವ ಪ್ರಯತ್ನ ಕೈಗೊಳ್ಳುವುದಾಗಿ ಹೇಳಿದರು.
ಪಂ. ಉಪಾಧ್ಯಕ್ಷ ಗೋಪಾಲ್ ಶೆಟ್ಟಿ, ಕೃಷಿ ಇಲಾಖೆಯ ರಾಧಕೃಷ್ಣ ಶೆಟ್ಟಿ, ತೋಟಗಾರಿಕಾ ಇಲಾಖೆಯ ನಿಂಗಪ್ಪ, ಸಮಾಜ ಕಲ್ಯಾಣ ಇಲಾಖೆ ವಿನಾಯಕ, ಶಿಕ್ಷಣ ಇಲಾಖೆಯ ಪ್ರದೀಪ್ ನಾಯಕ್, ಪಂಚಾಯತ್ ರಾಜ್ ಎಂಜಿನಿಯರ್ ಸುಧಾಕರ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ರಾಜೇಶ್ವರೀ, ಮೆಸ್ಕಾಂ ಇಲಾಖೆ ಸುಧೀಂದ್ರ, ಕಂದಾಯ ಇಲಾಖೆ ಆನಂದ್, ಪಶು ಸಂಗೋಪನೆ ಶೋಭಾ, ಅರಣ್ಯ ಇಲಾಖೆ ವಿದ್ಯಾಲಕ್ಷ್ಮೀ ಸಾಮಾಜಿಕ ನ್ಯಾಯ ಸಂಹಿತೆ ಅಧ್ಯಕ್ಷೆ ಪ್ರತಿಮಾ ಇಲಾಖೆಗಳ ಅಧಿಕಾರಿಗಳು ಮಾಹಿತಿ ನೀಡಿದರು.ಪಿಡಿಒ ಎಸ್. ಸುಧಾಕರ್ ಶೆಟ್ಟಿ ಸ್ವಾಗತಿಸಿ, ನಿರೂಪಿಸಿ, ವಂದಿಸಿದರು. ಪಂಚಾಯತ್ ಸಿಬಂದಿ ಸಹಕರಿಸಿದರು.