Advertisement

ಬರ ಘೋಷಣೆ ಮಾನದಂಡ ಪರಿಷ್ಕರಿಸಲು ಕೇಂದ್ರಕ್ಕೆ ಆಗ್ರಹ

11:21 PM Jul 24, 2023 | Team Udayavani |

ಬೆಂಗಳೂರು: ಬರ ಘೋಷಣೆಗೆ ನಿಗದಿ ಮಾಡಿರುವ ಮಾನದಂಡಗಳನ್ನು ಪರಿಷ್ಕರಿಸುವಂತೆ ಕೇಂದ್ರ ಸರಕಾರಕ್ಕೆ ಪತ್ರ ಬರೆಯಲು ರಾಜ್ಯ ನಿರ್ಧರಿಸಿದ್ದು, ಇದಕ್ಕೆ ಸಂಬಂಧಪಟ್ಟಂತೆ ಮಾಹಿತಿಗಳನ್ನು ಕಲೆ ಹಾಕಲಾಗುತ್ತಿದೆ.

Advertisement

ರಾಜ್ಯದಲ್ಲಿ ಉಂಟಾಗು ತ್ತಿರುವ ಭಾರೀ ಮಳೆ ಹಿನ್ನೆಲೆಯಲ್ಲಿ ಜಿಲ್ಲಾಧಿಕಾರಿಗಳ ಜತೆಗೆ ಸಭೆ ನಡೆಸಿದ ಬಳಿಕ ಕಂದಾಯ ಸಚಿವ ಕೃಷ್ಣಬೈರೇಗೌಡ ಈ ವಿಷಯ ತಿಳಿಸಿದ್ದು, ಕೇಂದ್ರ ಸರಕಾರ ಮಾನದಂಡಗಳನ್ನು ಬಿಗಿ ಮಾಡಿರುವುದರಿಂದ ರಾಜ್ಯದ ಕೈ ಕಟ್ಟಿ ಹಾಕಿದಂತಾಗಿದೆ ಎಂದು ಹೇಳಿದ್ದಾರೆ.

ತಾಲೂಕುಗಳನ್ನು ಬರಪೀಡಿತ ಎಂದು ಘೋಷಿಸುವುದಕ್ಕೆ ಕೇಂದ್ರ ಸರಕಾರ ಕೆಲವು ಕಠಿನ ಮಾನದಂಡ ವಿಧಿಸಿದೆ. ಶೇ.60ರಷ್ಟು ಮಳೆ ಕೊರತೆ ಇರಬೇಕು. ಮೂರು ವಾರ ಮಳೆ ಇರಬಾರದೆಂಬ ನಿಯಮವಿದೆ. ಈಗ ಎಲ್ಲೂ ಶೇ.60 ಮಳೆ ಕೊರತೆ ಆಗಿಲ್ಲ. ಮಾನದಂಡ ಮರುಪರಿಶೀಲನೆಗೆ ಸಂಬಂಧಿಸಿ ಕೇಂದ್ರ ಸರಕಾರಕ್ಕೆ ಪತ್ರ ಬರೆಯುವಂತೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಮಾಡಲಾಗುವುದು ಎಂದರು.

ಆಯಾಯ ರಾಜ್ಯಕ್ಕನು ಗುಣವಾಗಿ ಬರ ಮಾನದಂಡ ರಚಿಸಲು ಹಾಗೂ ಶೇ.25ರಷ್ಟು ಮಳೆ ಕೊರತೆಯಾದ ಪ್ರದೇಶವನ್ನು ಬರಪೀಡಿತ ಎಂದು ಘೋಷಿಸಲು ಅವಕಾಶ ನೀಡುವಂತೆ ಮಾನದಂಡ ಪರಿವರ್ತಿಸಲು ಮನವಿ ಮಾಡುತ್ತೇವೆ. ಸೋಮವಾರ ಮಧ್ಯಾಹ್ನ ಕೇಂದ್ರ ಸರಕಾರದ ಅಧಿಕಾರಿಗಳೊಂದಿಗೆ ಸಭೆ ನಡೆಯಲಿದ್ದು, ಅದರಲ್ಲಿ ಈ ವಿಷಯ ಪ್ರಸ್ತಾವಿಸಲು ನಮ್ಮ ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

7 ದಿನಗಳಲ್ಲಿ 144 ಟಿಎಂಸಿ ನೀರು
ಕಳೆದ 7 ದಿನಗಳಲ್ಲಿ ಜಲಾಶಯ ಗಳಲ್ಲಿ 144 ಟಿಎಂಸಿ ನೀರು ಸಂಗ್ರಹವಾಗಿದೆ. ರವಿವಾರ ಒಂದೇ ದಿನ ಜಲಾಶಯಗಳಲ್ಲಿ 40 ಟಿಎಂಸಿ ನೀರು ಶೇಖರಣೆಯಾಗಿದೆ. ರಾಜ್ಯದ ಬಹುತೇಕ ಭಾಗಗಳಲ್ಲಿ ಮಳೆ ಆಗುತ್ತಿದೆ. ವಾರದ ಹಿಂದೆ ನೀರಿನ ಸಮಸ್ಯೆ ಇತ್ತು. ಇಂದು ಒಟ್ಟು ಜಲಾಶಯಗಳಲ್ಲಿ ಶೇ. 40ರಷ್ಟು ನೀರು ಸಂಗ್ರಹವಾಗಿದೆ. ಕಾವೇರಿ, ಕೃಷ್ಣಾ ಪ್ರದೇಶದಲ್ಲಿ ಜಲಾಶಯದ ಒಳ ಹರಿವು ಹೆಚ್ಚಾಗಿದೆ. ಕಾವೇರಿ ದಡದ ಹಾರಂಗಿ, ಹೇಮಾವತಿ, ಕಬಿನಿ, ಕೆಆರ್‌ಎಸ್‌ ನಲ್ಲಿ 67,278 ಕ್ಯುಸೆಕ್‌ ನೀರಿದ್ದು, ಹೊರ ಹರಿವು ಆರಂಭವಾಗಿದೆ. ಕೃಷ್ಣಾ ದಡದ ಜಲಾಶಯಗಳಲ್ಲಿ 2.61 ಲಕ್ಷ ಕ್ಯುಸೆಕ್‌ ಒಳ ಹರಿವು ಇದೆ ಎಂದು ವಿವರಿಸಿದರು.

Advertisement

ಶೇ.14 ಮಳೆ ಕೊರತೆ
ಒಂದು ವಾರದಿಂದ ಮಳೆ ಹೆಚ್ಚಾಗಿದೆ. ಜುಲೈ ತಿಂಗಳಲ್ಲಿ ಹೆಚ್ಚು ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿತ್ತು. ಜೂನ್‌ ಅಂತ್ಯದಲ್ಲಿ ಶೇ.56ರಷ್ಟು ಮಳೆ ಕೊರತೆ ಇತ್ತು. ಒಂದು ವಾರದಲ್ಲಿ ಆಗಿ ರುವ ಮಳೆಯಿಂದಾಗಿ ಈಗ ಮಳೆ ಕೊರತೆ ಶೇ.14ಕ್ಕೆ ಇಳಿದಿದೆ ಎಂದರು.

ಬೆಂಗಳೂರು ಸುತ್ತಮುತ್ತಲಿನ ಜಿಲ್ಲೆಗಳಲ್ಲಿ ಮಳೆ ಕಡಿಮೆಯಾಗಿದೆ. ರಾಮನಗರ, ಕೋಲಾರ, ಚಿಕ್ಕಬಳ್ಳಾಪುರ, ಮೈಸೂರು, ಮಂಡ್ಯ, ಚಾಮರಾಜನಗರದಲ್ಲಿ ಮಳೆ ಕೊರತೆ ಇದೆ. ಮಲೆನಾಡಿನಲ್ಲಿ ಮಳೆಯಾದರೂ ವಾಡಿಕೆಗೆ ಹೋಲಿಸಿದರೆ ಕಡಿಮೆ ಯಾಗಿದೆ. ಉತ್ತರ ಒಳನಾಡಿನಲ್ಲಿ ಹೆಚ್ಚು ಮಳೆಯಾಗಿದೆ. ಜುಲೈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆಯಾಗಿದೆ ಎಂದು ವಿವರಿಸಿದರು.

ಕರಾವಳಿ, ಬೆಳಗಾವಿಯಲ್ಲಿ ಹೆಚ್ಚು ಮಳೆಯಾಗಲಿದೆ. ಬೀದರ್‌, ಯಾದಗಿರಿ, ವಿಜಯಪುರ, ಕಲಬುರಗಿ ಯಲ್ಲೂ ಅತಿ ಹೆಚ್ಚು ಮಳೆಯಾಗಲಿದೆ. ಈ ಸಂಬಂಧ ಜಿಲ್ಲಾಧಿಕಾರಿಗಳ ಬಳಿ ಮಾತನಾಡಿದ್ದೇನೆ. ಎಚ್ಚರಿಕೆಯಿಂದ ಕೆಲಸ ಮಾಡಿ ಎಂದು ಸೂಚಿಸಿದ್ದೇನೆ. 12 ಸೇತುವೆಗಳ ಮೇಲೆ ನೀರು ಹರಿಯು ತ್ತಿದೆ. ಕಟ್ಟೆಚ್ಚರದಿಂದ ಇರುವಂತೆ ಡಿ.ಸಿ.ಗಳಿಗೆ ಸೂಚಿಸಲಾಗಿದೆ ಎಂದರು.

ಸರಕಾರ ಉರುಳಿಸುವುದರಲ್ಲಿ
ಬಿಜೆಪಿಯವರು ಪರಿಣಿತರು
ಸರಕಾರ ಉರುಳಿಸುವ ತಂತ್ರದ ಬಗ್ಗೆ ಡಿಸಿಎಂ ಡಿ.ಕೆ.ಶಿವಕುಮಾರ್‌ ನೀಡಿರುವ ಹೇಳಿಕೆ ಬಗ್ಗೆ ಪ್ರತಿಕ್ರಿಯೆ ನೀಡಿದ ಸಚಿವ ಕೃಷ್ಣ ಬೈರೇಗೌಡ, ಬಿಜೆಪಿಯವರು ಜನರಿಂದ ಆಯ್ಕೆ ಆದ ಸರಕಾರಗಳನ್ನು ಉರುಳಿಸುವುದರಲ್ಲಿ ಪರಿಣಿತರು. ಹೀಗಾಗಿ ನಾವು ಎಚ್ಚರಿಕೆಯಿಂದ ಇರಬೇಕು. ಬೇರೆ ಬೇರೆ ರಾಜ್ಯದಲ್ಲಿ ಅನೇಕ ಸರಕಾರಗಳನ್ನು ಪತನಗೊಳಿಸಿದ್ದಾರೆ. ಡಿ.ಕೆ.ಶಿವಕುಮಾರ್‌ ಅವರಿಗೆ ಆ ಬಗ್ಗೆ ಮಾಹಿತಿ ಇರಬಹುದು. ಹೀಗಾಗಿ ಮಾತನಾಡಿದ್ದಾರೆ. ಹಿಂದಿನ ಸಚಿವರು ಹಾಗೂ ಮಾಜಿ ಮುಖ್ಯಮಂತ್ರಿ ನೀಡಿರುವ ಒಂದು ಹೇಳಿಕೆ ಸರಕಾರ ಉರುಳಿಸುವ ಪ್ರಯತ್ನಕ್ಕೆ ಪೂರಕವಾದಂತಿದೆ. ನಮ್ಮ ಶಾಸಕರ ಬಗ್ಗೆ ನಂಬಿಕೆ ಇದೆ. ಆದರೂ ಎಚ್ಚರಿಕೆ ಅಗತ್ಯ ಎಂದು ಹೇಳಿದರು.

ಮಳೆ ಅನಾಹುತದಿಂದ 27 ಸಾವು
ಮಳೆ ಅನಾಹುತದಿಂದ ಒಟ್ಟು 27 ಜನರು ಮೃತಪಟ್ಟಿದ್ದು, 8 ಮಂದಿ ಜನ ಸಿಡಿಲಿಗೆ ಬಲಿಯಾಗಿದ್ದಾರೆ. ಇದರಲ್ಲಿ ಕೆಲವರು ಕಾಲು ಜಾರಿ ಹಳ್ಳಗಳಿಗೆ ಬಿದ್ದಿದ್ದಾರೆ. ಅದನ್ನೂ ನಾವು ಪ್ರಕೃತಿ ವಿಕೋಪದ ಸಾವು ಎಂದೇ ಪರಿಗಣಿಸಿದ್ದೇವೆ. ಮಂಗಳವಾರ ಸಿಎಂ ಒಂದು ಪ್ರವಾಹ ಪೀಡಿತ ಜಿಲ್ಲೆಗೆ ಪ್ರವಾಸ ತೆರಳಲಿದ್ದಾರೆ. ನಾನು ಕೂಡ ರಾಜ್ಯ ಪ್ರವಾಸ ನಡೆಸುತ್ತೇನೆಂದು ಸಚಿವ ಕೃಷ್ಣ ಬೈರೇಗೌಡ ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next