ಸಾಗರ: ಭ್ರಷ್ಟಾಚಾರದಲ್ಲಿ ಭಾಗಿಯಾಗಿರುವ ಮತ್ತು ಮೂರು ಜಾತ್ರೆಯಿಂದಲೂ ಅಧಿಕಾರದಲ್ಲಿ ಮುಂದುವರೆಯಲು ವ್ಯವಸ್ಥಿತ ಹುನ್ನಾರ ನಡೆಸುತ್ತಿರುವ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿಯನ್ನು ರದ್ದುಪಡಿಸಲು ಒತ್ತಾಯಿಸಿ ಮಾರಿಕಾಂಬಾ ಹಿತರಕ್ಷಣಾ ಸಮಿತಿ ವತಿಯಿಂದ ಶನಿವಾರ ಉಪವಿಭಾಗಾಧಿಕಾರಿಗಳು, ತಹಶೀಲ್ದಾರ್ ಮತ್ತು ಎಎಸ್‌ಪಿ ಕಚೇರಿಗೆ ಮನವಿ ಸಲ್ಲಿಸಲಾಯಿತು.
ಕಳೆದ ಮೂರು ಜಾತ್ರೆಯಿಂದಲೂ ಹಾಲಿ ಇರುವ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಅಧಿಕಾರದಲ್ಲಿ ಮುಂದುವರೆಯುತ್ತಿದೆ. ಮುಂದಿನ ಜಾತ್ರೆಗೂ ಸಹ ತಮ್ಮ ಸಮಿತಿಯೇ ಮುಂದುವರೆಯಬೇಕು ಎಂದು ಸಮಿತಿ ವ್ಯವಸ್ಥಿತ ಹುನ್ನಾರ ನಡೆಸುತ್ತಿದೆ. ಇತ್ತೀಚೆಗೆ ಮಹಾಸಭೆ ಕರೆದು 14 ವರ್ಷಗಳ ಲೆಕ್ಕಪತ್ರ ಒಮ್ಮೆಲೇ ಮಂಡಿಸಿದೆ. ಮಹಾಸಭೆಯಲ್ಲಿ ನೂತನ ಸಮಿತಿ ರಚಿಸುವ ಭರವಸೆ ನೀಡಿದ್ದು ಈತನಕ ಅದನ್ನು ಈಡೇರಿಸಿಲ್ಲ ಎಂದು ಮನವಿಯಲ್ಲಿ ಹೇಳಲಾಗಿದೆ.
ಮಹಾಸಭೆ ತೀರ್ಮಾನದ ಪ್ರಕಾರ ಕ್ಷೇತ್ರದ ಶಾಸಕರನ್ನು ಸಮಿತಿಯ ಗೌರವಾಧ್ಯಕ್ಷರನ್ನಾಗಿ ನೇಮಕ ಮಾಡಿಕೊಳ್ಳಲಾಗಿದೆ. ಸಮಿತಿಗೆ ಉಳಿದ ಸದಸ್ಯರನ್ನು ತೆಗೆದುಕೊಳ್ಳುವ ತೀರ್ಮಾನ ಮಹಾಸಭೆಯಲ್ಲಿ ಆಗಿದ್ದರೂ ಈತನಕ ಅದನ್ನು ಕಾರ್ಯರೂಪಕ್ಕೆ ತಂದಿಲ್ಲ. ಹಾಲಿ ಮಾರಿಕಾಂಬಾ ವ್ಯವಸ್ಥಾಪಕ ಸಮಿತಿ ಮೇಲೆ ಹಲವು ಗುರುತರ ಆರೋಪಗಳಿವೆ. ಈ ಹಿನ್ನೆಲೆಯಲ್ಲಿ ಮಹಾಸಭೆಯಲ್ಲಿ ಗೊಂದಲ ಸೃಷ್ಟಿಸಿ ಸಭೆಯನ್ನು ಅರ್ಧಕ್ಕೆ ಮೊಟಕುಗೊಳಿಸಿದ್ದು ಮೇಲ್ನೋಟಕ್ಕೆ ಕಂಡು ಬರುತ್ತಿದೆ. ತಾವು ಮಾಡಿರುವ ಭ್ರಷ್ಟಾಚಾರ ಮುಚ್ಚಿ ಹಾಕಿಕೊಳ್ಳಲು ಸಮಿತಿ ಮತ್ತೆ ಅಧಿಕಾರದಲ್ಲಿ ಮುಂದುವರೆಯಲು ಪ್ರಯತ್ನ ನಡೆಸುತ್ತಿದೆ ಎಂದು ಮನವಿಯಲ್ಲಿ ದೂರಲಾಗಿದೆ.
ಈ ಹಿನ್ನೆಲೆಯಲ್ಲಿ ಹಾಲಿ ಸಮಿತಿಯನ್ನು ರದ್ದು ಮಾಡಿ ನೂತನ ಸಮಿತಿ ರಚನೆ ಮಾಡಬೇಕು. ಸಮಿತಿಯನ್ನು ಅಧಿಕಾರದಿಂದ ಕೆಳಗೆ ಇಳಿಸಲು ಒತ್ತಾಯಿಸಿ ಹಿತರಕ್ಷಣಾ ಸಮಿತಿ ವತಿಯಿಂದ ಹಾಲಿ ಸಮಿತಿ ಅಧ್ಯಕ್ಷರು, ಪ್ರಧಾನ ಕಾರ್ಯದರ್ಶಿ ಮನೆ ಎದುರು ಪ್ರತಿಭಟನೆ ನಡೆಸಲಾಗುತ್ತದೆ. ಜೊತೆಗೆ ದೇವಸ್ಥಾನದ ಎದುರು ಬೇಡಿಕೆ ಈಡೇರುವ ತನಕ ಅಹೋರಾತ್ರಿ ಧರಣಿಯನ್ನು ಮುಂದಿನ ಏಳು ದಿನಗಳೊಳಗೆ ನಡೆಸಲಾಗುತ್ತದೆ ಎಂದು ಮನವಿಯಲ್ಲಿ ಎಚ್ಚರಿಕೆ ನೀಡಲಾಗಿದೆ.
ಸಮಿತಿ ಸಂಚಾಲಕ ಎಂ.ಡಿ.ಆನಂದ್, ಕಾನೂನು ಸಲಹೆಗಾರ ವಿ.ಶಂಕರ್, ಪ್ರಮುಖರಾದ ರಾಮಪ್ಪ ಟಿ., ಗೋಪಾಲಕೃಷ್ಣ ಶ್ಯಾನಭಾಗ್, ಕೊಟ್ರಪ್ಪ, ಗುರುಬಸಪ್ಪ ಗೌಡ, ಜನಾರ್ದನ ಆಚಾರಿ, ಶ್ರೀಧರ್, ಜಿ.ಕೆ.ಭೈರಪ್ಪ, ಸುರೇಶ್ ಕಾರ್ಗಲ್, ನಿತ್ಯಾನಂದ ಶೆಟ್ಟಿ, ಸದಾನಂದ, ಬಂಗಾರಪ್ಪ, ಸೇಟ್ ಇನ್ನಿತರರು ಹಾಜರಿದ್ದರು.