ಚಾಮರಾಜನಗರ: ನಗರದ ಪೂರ್ವ ಪೊಲೀಸ್ ಠಾಣೆ ಎಸ್‌ಐ ಬಿ.ಪುಟ್ಟಸ್ವಾಮಿ ವರ್ಗಾವಣೆ ರದ್ದುಗೊಳಿಸಲು ಒತ್ತಾಯಿಸಿ ನಾಗರಿಕ ಹಿತರಕ್ಷಣೆ ಹೋರಾಟ ಸಮಿತಿಯಿಂದ ಸೋಮವಾರ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಚಾಮರಾಜೇಶ್ವರ ದೇವಾಲಯದ ಆವರಣದಿಂದ ಮೆರವಣಿಗೆ ಹೊರಟ ಪ್ರತಿಭಟನೆಕಾರರು ಭುವನೇಶ್ವರಿ ವೃತ್ತಕ್ಕೆ ತೆರಳಿ ಮಾನವ ಸರಪಳಿ ರಚಿಸಿ ಕೆಲಹೊತ್ತು ರಸ್ತೆ ತಡೆ ನಡೆಸಿದರು. ನಂತರ ಬಿ.ರಾಚಯ್ಯ ಜೋಡಿ ರಸ್ತೆ ಮೂಲಕ ಜಿಲ್ಲಾ ಪೋಲಿಸ್ ಕಚೇರಿಗೆ ತೆರಳಿ ಕೆಲಕಾಲ ಪ್ರತಿಭಟನೆ ನಡೆಸಿ, ಜಿಲ್ಲಾ ವರಿಷ್ಠಾಧಿಕಾರಿ ಎಚ್.ಡಿ. ಆನಂದ್ ಕುಮಾರ್‌ಗೆ ಮನವಿ ಸಲ್ಲಿಸಿದರು.
ದಕ್ಷ, ಪ್ರಾಮಾಣಿಕ ಎಸ್‌ಐ ಬಿ.ಪುಟ್ಟ ಸ್ವಾಮಿಯನ್ನು ಸಿಇಎನ್‌ಗೆ ವರ್ಗಾವಣೆ ಮಾಡಿ ಆದೇಶ ಹೊರಡಿಸಿರುವುದನ್ನು ಸರ್ಕಾರ ಕೂಡಲೇ ಕೈ ಬಿಡಬೇಕು ಎಂದು ಪ್ರತಿಭಟನಾನಿರತರು ಒತ್ತಾಯಿಸಿದರು. ರಾಮಸಮುದ್ರ ಪೂರ್ವ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಒಂದು ವರ್ಷ 2 ತಿಂಗಳ ಅವಧಿಯಲ್ಲಿ ಪುಟ್ಟಸ್ವಾಮಿ
ಯವರು, ಕೋಮು, ಜಾತಿ ಗಲಭೆ ಯಾಗದಂತೆ ಹಾಗೂ ಅಕ್ರಮ ಮದ್ಯ ಮಾರಾಟ ಮಾಡದಂತೆ ತೀವ್ರ ನಿಗಾವಹಿಸಿ ದಕ್ಷತೆಯಿಂದ ಕೆಲಸ ನಿರ್ವಹಿಸಿದ್ದಾರೆ. ಅಕ್ರಮ ಚಟುವಟಿಕೆಗಳಿಗೆ ಕಡಿವಾಣ ಹಾಕಿ ತಮ್ಮ ಠಾಣೆ ವ್ಯಾಪ್ತಿಯಗ್ರಾಮಗಳ ಬಡವರು, ಮಹಿಳೆಯರು, ವಿದ್ಯಾರ್ಥಿಗಳು, ನೆಮ್ಮದಿಯಿಂದ ಜೀವನ ಮಾಡಲು ಉತ್ತಮ ವಾತಾವರಣ ನಿರ್ಮಾಣ ಮಾಡಿದ್ದಾರೆ. ಅಲ್ಲದೆ ಠಾಣೆ ವಿನ್ಯಾಸ ಬದಲಾಯಿಸಿ ಮಾದರಿಯಾಗಿ ಮಾಡಿ ಜನರು ನಿರ್ಭೀತಿಯಿಂದ ತಮ್ಮ ಸಮಸ್ಯೆಗಳನ್ನು ಮಧ್ಯವರ್ತಿಗಳಿಲ್ಲದೆ ಬಗೆಹರಿಸಿಕೊಳ್ಳುವ ಒಂದು ಜನಸ್ನೇಹಿ ಠಾಣೆಯಾಗಿ ಮಾಡಿರುವುದು ಕರ್ತವ್ಯ ನಿಷ್ಠೆಗೆ ಸಾಕ್ಷಿ ಎಂದು ತಿಳಿಸಿದರು.
ಠಾಣೆ ವ್ಯಾಪ್ತಿಯ ಗ್ರಾಮಗಳಲ್ಲಿ ಕೋಮು ಮತ್ತು ಜಾತಿಗಳ ನಡುವೆ ಗಲಭೆ ನಡೆಯುವಂತೆ ಪ್ರಚೋದಿಸುವವರ ವಿರುದ್ಧ ಮುಲಾಜಿಲ್ಲದೆ ಕಾನೂನು ಕ್ರಮ ಜರುಗಿಸಿ ಜೈಲು ಸೇರುವಂತೆ ಮಾಡಿದ್ದಾರೆ. ಅಕ್ರಮ ಜೂಜುಅಡ್ಡೆಗಳ ಮೇಲೆ ದಾಳಿ ಮಾಡಿ ಅನೇಕರಿಂದ ದಂಡಕಟ್ಟಿಸಿರುತ್ತಾರೆ. ಇಂತಹ ದಕ್ಷ ಅಧಿಕಾರಿಯ ಅವಶ್ಯಕತೆ ಚಾಮರಾಜನಗರದಂತಹ ಹಿಂದುಳಿದ ಪ್ರದೇಶಕ್ಕಿದೆ. ಇಂತಹ ಅಧಿಕಾರಿಯನ್ನು ಏಕಾಏಕಿ ವರ್ಗಾವಣೆ ಮಾಡಿರುವುದು ನಿಜಕ್ಕೂ ತಾಲೂಕಿನ ಜನರಿಗೆ ಬೇಸರ ಮೂಡಿಸಿದೆ. ದಕ್ಷ ಅಧಿಕಾರಿಗಳಿಗೆ ಉಳಿಗಾಲವಿಲ್ಲವೆಂಬು ದಕ್ಕೆ ತಾಜಾ ನಿದರ್ಶನವಾಗಿದೆ. ಕೂಡಲೇ ಪುಟ್ಟಸ್ವಾಮಿ ಅವರ ವರ್ಗಾವಣೆ ರದ್ದುಪಡಿಸುವಂತೆ ಆಗ್ರಹಿಸಿದರು.
ಸಮಿತಿ ಗೌರವ ಅಧ್ಯಕ್ಷ ದುಂಡಯ್ಯ, ಪರ್ವತ್‌ರಾಜ್, ಆಲೂರು ಮಲ್ಲು, ನಾಗೇಂದ್ರ, ಬ.ಮ. ಕೃಷ್ಣಮೂರ್ತಿ,ಸಂಪತ್ತು, ಶಿವರಾಜು ಬಸವಣ್ಣ, ಎಸ್.ಪಿ. ಮಹೇಶ್, ಗೋವಿಂದರಾಜು, ತಾಪಂ ಸದಸ್ಯ ಮಹದೇವಯ್ಯ, ಮಾಜಿ ಸದಸ್ಯ ರಂಗಸ್ವಾಮಿ, ಧರಣಿ ಸಿದ್ಧರಾಜುಇದ್ದರು.