Advertisement

ಹೆವನ್‌ಸಿಟಿ ಬಡಾವಣೆ ಪುರಸಭೆ ವ್ಯಾಪ್ತಿಗೆ ಸೇರಿಸಿ

05:06 PM Oct 12, 2020 | Suhan S |

ಮುದ್ದೇಬಿಹಾಳ: ಪಟ್ಟಣದ ಹುಡ್ಕೋ ಹಿಂಭಾಗದ 55ನೇ ಸರ್ವೇ ನಂಬರ್‌ನಲ್ಲಿರುವ ಹೆವನ್‌ ಸಿಟಿ ಬಡಾವಣೆಯನ್ನು ಹಡಲಗೇರಿ ಗ್ರಾಮ ಪಂಚಾಯತ್‌ ವ್ಯಾಪ್ತಿಯಿಂದ ಪುರಸಭೆ ವ್ಯಾಪ್ತಿಗೆ ಒಳಪಡಿಸಿ ಅಭಿವೃದ್ಧಿಪಡಿಸಬೇಕು ಎಂದು ಆಗ್ರಹಿಸಿ ಆ ಬಡಾವಣೆ ನಿವಾಸಿಗಳು ಹೆವನ್‌ ಸಿಟಿ ಕ್ಷೇಮಾಭಿವೃದ್ಧಿ ಸಂಘದ ನೇತೃತ್ವದಲ್ಲಿಶಾಸಕ, ಕರ್ನಾಟಕ ಆಹಾರ ನಿಗಮದ ಅಧ್ಯಕ್ಷ ಎ.ಎಸ್‌. ಪಾಟೀಲ ನಡಹಳ್ಳಿಗೆ ರವಿವಾರ ಮನವಿ ಸಲ್ಲಿಸಿದ್ದಾರೆ.

Advertisement

ಶಾಸಕರ ಗೃಹಕಚೇರಿ ದಾಸೋಹ ನಿಲಯಕ್ಕೆ ಆಗಮಿಸಿದ್ದ 30-40 ನಿವಾಸಿಗಳು 10 ವರ್ಷಗಳಹಿಂದೆಯೇ ಎನ್‌ಎ ಪ್ಲಾಟ್‌ ಆಗಿರುವ ಈಬಡಾವಣೆಯು 89 ಮನೆಗಳನ್ನು ಹೊಂದಿದ್ದು ಒಟ್ಟಾರೆ 250 ಮನೆಗಳ ಜನವಸತಿ ಪ್ರದೇಶವಾಗಿದೆ. ಆದರೆ ಇಲ್ಲೀತನಕ ಗ್ರಾಪಂನಿಂದ ಬೀದಿ ದೀಪಸೇರಿ ಯಾವುದೇ ಅಭಿವೃದ್ಧಿ ಆಗಿಲ್ಲ. ಆದರೆ ಗ್ರಾಪಂನವರು ಪ್ರತಿ ವರ್ಷ ಕರ ವಸೂಲಿ, ಹೊಸಪ್ಲಾಟು ಖರೀದಿ, ಕಟ್ಟಡ ಅನುಮತಿಗೆ ಡೆವಲಪ್‌ ಮೆಂಟ್‌ ಚಾರ್ಜ್‌ ಎಂದು ಪುರಸಭೆಯವರು ವಿಧಿಸುವ ತೆರಿಗೆಗೆ ಸಮನಾದ ಹಣ ವಸೂಲಿ ಮಾಡುತ್ತಾರೆ ಎಂದು ದೂರಿದರು.

ಈ ಬಡಾವಣೆಯನ್ನು ಗ್ರಾಪಂನವರು ಆದಾಯದ ಮೂಲವನ್ನಾಗಿ ಮಾಡಿಕೊಂಡಿದ್ದಾರೆ. ಕುಡಿಯುವ ನೀರು, ರಸ್ತೆ ರಿಪೇರಿ, ಚರಂಡಿ ಅಥವಾ ಡ್ರೈನೇಜ್‌, ಬೀದಿ ದೀಪದ ವ್ಯವಸ್ಥೆ, ಕಸದ ವಿಲೇವಾರಿ ಮತ್ತಿತರ ಸಮಸ್ಯೆಗಳ ಪರಿಹಾರಕ್ಕಾಗಿ ಹಲವು ಬಾರಿ ಮನವಿ ಮಾಡಿದ್ದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಪುರಸಭೆಯವರನ್ನು ಕೇಳಿದರೆ ನಿಮ್ಮ ಲೇ-ಔಟ್‌ ನಮ್ಮ ವ್ಯಾಪ್ತಿಗೆ ಬರುವುದಿಲ್ಲ. ಸಂಬಂಧಿಸಿದವರಿಗೆ ಕೇಳಿ ಎನ್ನುತ್ತಿದ್ದಾರೆ. ಇದರಿಂದಾಗಿ ಗ್ರಾಪಂನಿಂದ ಬಡಾವಣೆಯ ನಿವಾಸಿಗಳಿಗೆ ಅನ್ಯಾಯ ಆಗುತ್ತಲೇ ಇದೆ ಎಂದು ವಿವರಿಸಿದರು.

ಬಡಾವಣೆ ಸದಸ್ಯರೆಲ್ಲ ಕೂಡಿ ನಮ್ಮಲ್ಲಿಯೇ 3 ಲಕ್ಷ ಹಣ ಸಂಗ್ರಹಿಸಿ ಕುಡಿಯುವ ನೀರಿಗಾಗಿ ಭಾಗಶಃ ಪೈಪ್‌ಲೈನ್‌ ಮಾಡಿಸಿದ್ದೇವೆ. ಹೆಸ್ಕಾಂಗೆ ಹಣ ನೀಡಿ ಟ್ರಾನ್ಸ್‌ಫಾರ್ಮರ್‌ ಚಾರ್ಜ್‌ ಮಾಡಿಸಿ ವಿದ್ಯುತ್‌ ಸಂಪರ್ಕ ಕಲ್ಪಿಸಿಕೊಂಡಿದ್ದೇವೆ. ಮಳೆಗಾಲದಲ್ಲಿ ನಡೆದಾಡಲೂ ಆಗದಂತಹ ರಸ್ತೆಗಳಿಗೆ ಗರಸು ಹಾಕಿಸಿ ತಾತ್ಕಾಲಿಕ ರಿಪೇರಿ ಮಾಡಿಸಿದ್ದೇವೆ. ಮುಳ್ಳು ಕಂಟಿಗಳನ್ನು ತೆಗೆಸಿದ್ದೇವೆ. ಕೆಲವರು ಸ್ವತಃ ಬೀದಿ ದೀಪ  ಅಳವಡಿಸಿಕೊಂಡಿದ್ದಾರೆ. ನೀರಿಗಾಗಿ ಪೈಪ್‌ಹಾಕಿಸಿಕೊಂಡು ಸಾಮಾಜಿಕ ಹೊಣೆಗಾರಿಕೆ ಪ್ರದರ್ಶಿಸಲಾಗಿದೆ ಎಂದು ತಿಳಿಸಿದರು. ಪುರಸಭೆಗೆ ಒಂದು ಕಿ.ಮೀ, ಗ್ರಾಪಂಗೆ 8 ಕಿ.ಮೀ ಅಂತರ ಹೊಂದಿರುವ ಈ ಬಡಾವಣೆಯನ್ನು ಕೂಡಲೇ ಪುರಸಭೆ ವ್ಯಾಪ್ತಿಗೆ ಸೇರಿಸಬೇಕು. ಸಿಸಿ ರಸ್ತೆ, ಎಲ್‌ಇಡಿ ಬೀದಿ ದೀಪ ಅಳವಡಿಕೆ, ಕುಡಿಯುವ ನೀರಿಗೆ ಉಳಿದೆಡೆ ಪೈಪ್‌ಲೈನ್‌ ಹಾಕುವುದು, ಚರಂಡಿ, ಒಳಚರಂಡಿ ವ್ಯವಸ್ಥೆ ಕಲ್ಪಿಸುವುದು, ಕಸ ವಿಲೇವಾರಿಗೆ ಅಗತ್ಯ ಕ್ರಮ ಕೈಗೊಳ್ಳುವುದು, ಅಲ್ಲಲ್ಲಿ ಸೂಚನಾ ಫಲಕ ಅಳವಡಿಸುವುದು, ಮುಳ್ಳು ಕಂಟಿಗಳನ್ನುಸ್ವಚ್ಛಗೊಳಿಸುವುದು, ಗಾರ್ಡನ್‌ ಜಾಗ ಸೂಚಿಸಿ ಅಭಿವೃದ್ಧಿ ಸೇರಿದಂತೆ ವಿವಿಧ ಬೇಡಿಕೆ ಶೀಘ್ರ ಈಡೇರಿಸಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

ಬೇಡಿಕೆ ಆಲಿಸಿ, ಮನವಿ ಸ್ವೀಕರಿಸಿದ ಶಾಸಕರು ಈ ಕುರಿತು ತಾಪಂ ಇಒ, ಪಿಡಿಒ,ಪುರಸಭೆ ಮುಖ್ಯಾಧಿಕಾರಿ ಜತೆ ಮಾತನಾಡಿ ಪ್ಲಾಟ್‌ ಮಾಲೀಕನಿಂದ ಅಭಿವೃದ್ಧಿ ಪಡಿಸಲುಸೂಚಿಸುವುದಾಗಿ ಹಾಗೂ ಸರ್ಕಾರದ ಗಮನಕ್ಕೆ ತಂದು ಬೇಡಿಕೆ ಈಡೇರಿಸುವುದಾಗಿ ಭರವಸೆ ನೀಡಿದರು. ಸಂಘದ ಅಧ್ಯಕ್ಷ ಶಶಿಧರ ಹಾಲ್ಯಾಳ, ಪ್ರಧಾನ ಕಾರ್ಯದರ್ಶಿ ರಾಚಯ್ಯ ಹಿರೇಮಠ, ತಾಪಂ ಮಾಜಿ ಅಧ್ಯಕ್ಷೆ ಅಕ್ಕಮಹಾದೇವಿ ಹಾಲ್ಯಾಳ, ಸಂಗಮೇಶ ಸಜ್ಜನ, ವೀರೇಶ ಕಟ್ಟಿ, ವೀರೇಶ ಢವಳೇಶ್ವರ, ಬೀರೇಶ ಬ್ಯಾಲ್ಯಾಳ, ಎಸ್‌.ಎಚ್‌. ಜೈನಾಪುರ, ಭಾರತಿ ಮಾಡಗಿ, ಡಾ|ಸಂಗಮೇಶ ಹಾಲವಾರ ಇದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next