ಬೆಂಗಳೂರು : ನಗರದಲ್ಲಿ ಓ ಎಫ್ ಸಿ ಕೇಬಲ್ ಗಳನ್ನು ನಿಯಮಬಾಹಿರವಾಗಿ ತೆರವುಗೊಳಿಸುತ್ತಿರುವುದಕ್ಕೆ ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರ್ಸ್ ಅಸೋಸಿಯೇಷನ್ ಆಕ್ಷೇಪ ವ್ಯಕ್ತಪಡಿಸಿದೆ.
ಈ ಸಂಬಂಧ ಮುಖ್ಯಮಂತ್ರಿಗಳನ್ನು ಭೇಟಿ ಮಾಡಿದ ಅಸೋಸಿಯೇಷನ್ ಪದಾಧಿಕಾರಿಗಳು, ಬಿಬಿಎಂಪಿಯಿಂದ ಕೈಗೊಂಡಿರುವ ಕೇಬಲ್ ತೆರವು ಕಾರ್ಯಾಚರಣೆಯನ್ನು ತಕ್ಷಣ ನಿಲ್ಲಿಸುವಂತೆ ಮನವಿ ಮಾಡಿದ್ರು.
ಸಿಎಂ ಅಧಿಕೃತ ನಿವಾಸ ಕಾವೇರಿಯಲ್ಲಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದ ಕರ್ನಾಟಕ ರಾಜ್ಯ ಕೇಬಲ್ ಟಿವಿ ಆಪರೇಟರಸ್ ಅಸೋಸಿಯೇಷನ್ ಅಧ್ಯಕ್ಷ ವಿ.ಎಸ್. ಪ್ಯಾಟ್ರೀಕ್ ನೇತೃತ್ವದ ನಿಯೋಗ, ಕೇಬಲ ಉದ್ಯಮದ ಸಂಕಷ್ಟಗಳ ಕುರಿತು ಮುಖ್ಯಮಂತ್ರಿಗಳಿಗೆ ಮನವರಿಕೆ ಮಾಡಿಕೊಟ್ಟಿದೆ. ಯಾವುದೇ ಸೂಚನೆ ನೀಡದೇ ಏಕಪಕ್ಷೀಯವಾಗಿ ಓಎಫ್ ಸಿ ಕೇಬಲ್ ಗಳನ್ನು ತೆರವು ಮಾಡುತ್ತಿರುವುದರಿಂದ ಉದ್ಯಮಕ್ಕೆ ಲಕ್ಷಾಂತರ ರೂಪಾಯಿ ನಷ್ಟವಾಗಿದೆ.
ಕಳೆದ ಮೂರು ದಶಕದಿಂದ ಕೇಬಲ ಉದ್ಯಮ ನಡೆಸುತ್ತಿರುವ ಕುಟುಂಬಗಳಿಗೆ ಇದರಿಂದ ತೊಂದರೆಯಾಗಿದೆ. ಸಿಎಟಿಎ ಕಾಯ್ದೆಯಡಿ ಸೂಕ್ತ ಅನುಮತಿ ಪಡೆದು ನಡೆಯುತ್ತಿರುವ ಕೇಬಲ್ ಉದ್ಯಮವು ಮಾಹಿತಿ ಮತ್ತು ಪ್ರಸಾರ ಇಲಾಖೆಯ ನಿಂಬಂಧನೆಗೆ ಒಳಪಟ್ಟಿದೆ. ಬೆಂಗಳೂರು ನಗರದಲ್ಲಿ ಇಂಟರ್ನೆಟ್ ಮತ್ತು ಬ್ರಾಡ್ ಬ್ಯಾಂಡ್ ಗಳನ್ನು ಬಳಕೆ ಮಾಡುತ್ತಿರುವವರಿಗೂ ಇದರಿಂದ ನಷ್ಟವಾಗ್ತಿದೆ.
ಹೀಗಾಗಿ ತಕ್ಷಣ ಕೇಬಲ್ ತೆರವು ಕಾರ್ಯಾಚರಣೆಯನ್ನು ನಿಲ್ಲಿಸುವಂತೆ ಅಸೋಸಿಯೇಷನ್ ಪದಾಧಿಕಾರಿಗಳು ಮುಖ್ಯಮಂತ್ರಿಗಳಿಗೆ ಮನವಿ ಮಾಡಿದರು. ಈ ಕುರಿತು ಸಂಬಂಧಿಸಿದ ಅಧಿಕಾರಿಗಳಿಗೆ ಸೂಕ್ತ ನಿರ್ದೇಶನ ನೀಡೋದಾಗಿ ಸಿಎಂ ಯಡಿಯೂರಪ್ಪ ಅವರು ಪದಾಧಿಕಾರಿಗಳಿಗೆ ಭರವಸೆ ನೀಡಿದರು.