ಶಿರಹಟ್ಟಿ: ತಾಲೂಕಿನ ಕೆರೆಹಳ್ಳಿ ತಾಂಡಾದ ಜನತೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಸುಮಾರು ವರ್ಷಗಳಿಂದ ವಾಸಿಸುತ್ತಿದ್ದಾರೆ. ಇವರಿಗೆ ಅರಣ್ಯ ಹಕ್ಕು ನಿಯಮದಡಿ ಮತ್ತು ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಅಧಿನಿಯಮದಂತೆ ವಾಸಿಸಲು ಅನುಕೂಲ ಕಲ್ಪಿಸಬೇಕೆಂದು ಆಗ್ರಹಿಸಿ ತಾಂಡಾದ ಜನತೆ ಹಾಗೂ ತಾಂಡಾ ಅಭಿವೃದ್ಧಿ ನಿಗಮದ ಜಿಲ್ಲಾಧ್ಯಕ್ಷ ಅಶೋಕ ಲಮಾಣಿ ಅವರು ಉಪತಹಶೀಲ್ದಾರ್ ಜಿ.ಪಿ. ಪೂಜಾರಗೆ ಮನವಿ ಸಲ್ಲಿಸಿದರು.
ಅರಣ್ಯ ಇಲಾಖೆ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ವಾಸಿಸುವ ತಾಂಡಾದ ಜನತೆಯನ್ನು ಅರಣ್ಯ ಇಲಾಖೆ ಒಕ್ಕಲೆಬ್ಬಿಸುವ ಕಾರ್ಯಕ್ಕೆ ಮುಂದಾಗಿದೆ. ಇದು ಅವರ ಜೀವನೋಪಾಯಕ್ಕೆ ತೊಂದರೆಯಾಗಿದೆ. ಮೇಲಿಂದ ಮೇಲೆ ಇಲಾಖೆಯವರು ಜನರಿಗೆ ತೊಂದರೆ ನೀಡುತ್ತಿದ್ದು, ಅಲ್ಲಿಂದ ಕಾಲ್ಕಿಳುವಂತೆ ಒತ್ತಾಯಿಸುತ್ತಿದ್ದಾರೆ. ಜೊತೆಗೆ ಅರಣ್ಯ ಇಲಾಖೆ ಅರಣ್ಯದಲ್ಲಿ ವಾಸಿಸುವ ಅರಣ್ಯ ಹಕ್ಕು ಕಾಯ್ದೆ ಮತ್ತು ಪಾರಂಪರಿಕ ಅರಣ್ಯ ವಾಸಿಗಳ ಅರಣ್ಯ ಹಕ್ಕು ಕಿತ್ತುಕೊಳ್ಳುತ್ತಿದ್ದು, ಅವರ ಜೀವನೋಪಾಯಕ್ಕೆ ತೊಂದರೆಯನ್ನುಂಟು ಮಾಡುತ್ತಿದ್ದಾರೆ. ಅವರಿಗೆ ಜೀವಿಸಲು ಅವಕಾಶ ಮತ್ತು ಜೀವನೋಪಾಯಕ್ಕೆ ಜಮೀನು ಒದಗಿಸಬೇಕು ಎಂದು ಮನವಿ ಮಾಡಿದರು.
ಇಲಾಖೆಯವರು ಅರಣ್ಯ ಹಕ್ಕು ಉಲ್ಲಂಘನೆ ಮಾಡುತ್ತಿದ್ದಾರೆ. ಸರಕಾರ ಅರಣ್ಯದಲ್ಲಿ ವಾಸಿಸುವ ಹಕ್ಕುನ್ನು ಅವರಿಗೆ ಒದಗಿಸಿದ್ದರೂ ಅರಣ್ಯ ಇಲಾಖೆ ಮೊಂಡು ಧೋರಣೆ ಅನುಸರಿಸುತ್ತಿದೆ. ಭಾರತ ಸರಕಾರ 2006 ಮತ್ತು 2008 ನಿಯಮಗಳ ತಿದ್ದುಪಡಿ 2012ರ ಪ್ರಕಾರ ಪರಿಶಿಷ್ಟ ಪಂಗಡ ಹಾಗೂ ಇತರೆ ಪಾರಂಪರಿಕ ಅರಣ್ಯ ವಾಸಿಗಳಿಗೆ ವಾಸಿಸಲು ಅವಕಾಶ ಕಲ್ಪಿಸಿದೆ. ಅದಕ್ಕಾಗಿ ಊಳುವವನೇ ಭೂಮಿ ಒಡೆಯ ಎಂಬ ನಿಯಮದಂತೆ ಲಂಬಾಣಿ ಜನಾಂಗಕ್ಕೆ ಜೀವಿಸಲು ಮತ್ತು ಜೀವನೋಪಾಯಕ್ಕೆ ಅವಕಾಶ ನೀಡಬೇಕು.
ಮುಗ್ದ ಜನರ ಮೇಲೆ ಇಲಾಖೆ ನಡೆಸುತ್ತಿರುವ ದೌರ್ಜನ್ಯ ಸಹಿಸಲಾಗುವುದಿಲ್ಲ. ಆದ್ದರಿಂದ ಈ ತಕ್ಷಣವೇ ಅರಣ್ಯಾಧಿಕಾರಿಗಳಿಗೆ ಲಂಬಾಣಿ ಜನಾಂಗಕ್ಕೆ ಜೀವನಕ್ಕೆ ಮತ್ತು ಜೀವನೋಪಾಯಕ್ಕಾಗಿ ಅಲ್ಲಿಯೇ ಮುಂದುವರೆಸಲು ಆದೇಶಿಸಬೇಕೆಂದು ಆಗ್ರಹಿಸಿ ಉಪ ತಹಶೀಲ್ದಾರ್ ಗೆ ಮನವಿ ಸಲ್ಲಿಸಿದರು.
ತಾಪಂ ಸದಸ್ಯ ದೇವಪ್ಪ ಲಮಾಣಿ, ತಾಪಂ ಮಾಜಿ ಸದಸ್ಯ ಜಾನು ಲಮಾಣಿ, ಶಂಕರ ಪವಾರ, ಶಿವಣ್ಣ ಲಮಾಣಿ, ಪಾಂಡಪ್ಪ ಲಮಾಣಿ, ಧನಸಿಂಗ್ ಲಮಾಣಿ, ಶಂಕ್ರಪ್ಪ ಲಮಾಣಿ, ಮಲ್ಲೇಶಪ್ಪ ಲಮಾಣಿ, ದೀಪಕ್ ಲಮಾಣಿ, ಸುಮಿತ್ರಾ ಲಮಾಣಿ, ಗೌರವ್ವ ಲಮಾಣಿ, ಚಿನ್ನವ್ವ ಲಮಾಣಿ, ಗಂಗವ್ವ ಲಮಾಣಿ, ಲಕ್ಷ್ಮವ್ವ ಲಮಾಣಿ, ಪಾರವ್ವ ಲಮಾಣಿ, ಪೂಜಾ ಲಮಾಣಿ, ಥಾವರೆಪ್ಪ ಲಮಾಣಿ, ಶಿವಪ್ಪ ಲಮಾಣಿ, ರಮೇಶ ಲಮಾಣಿ, ಹೂಬಪ್ಪ ಲಮಾಣಿ, ಮೇಘಪ್ಪ ಲಮಾಣಿ, ಡಾಕಪ್ಪ ಲಮಾಣಿ ಹಾಗೂ ಕೆರೆಹಳ್ಳಿ ತಾಂಡಾದ ಜನರು ಮನವಿ ಸಲ್ಲಿಸುವ ನಿಯೋಗದಲ್ಲಿ ಇದ್ದರು.