Advertisement

ಜಿಎಸ್‌ಟಿ ಅಧಿಕಾರಿಗಳೊಂದಿಗೆ ವಿಚಾರ ವಿನಿಮಯ, ಮನವಿ ಪತ್ರ

02:53 PM Nov 19, 2017 | |

 ಪುಣೆ: ಪುಣೆ ರೆಸ್ಟೋರೆಂಟ್‌ ಆ್ಯಂಡ್‌ ಹೊಟೇಲಿಯರ್ಸ್‌ ಅಸೋಸಿ ಯೇಶನ್‌ನ ಅಧ್ಯಕ್ಷ ಗಣೇಶ್‌ ಶೆಟ್ಟಿ ಮತ್ತು ಪದಾಧಿಕಾರಿಗಳ ನೇತೃತ್ವದಲ್ಲಿ ಮಹಾರಾಷ್ಟ್ರ ಸರಕಾರದ ಸಚಿವ, ಪುಣೆ ಜಿಲ್ಲಾ  ಉಸ್ತುವಾರಿ ಸಚಿವ ಗಿರೀಶ್‌ ಬಾಪಟ್‌ ಅವರ ಮಾರ್ಗದರ್ಶನದೊಂದಿಗೆ ನ. 17ರಂದು ಪುಣೆಯ ಕ್ಯಾಂಪ್‌ನ  ವಿವಿಐಪಿ ಸರ್ಕ್ನೂಟ್‌ ಹೌಸ್‌ನಲ್ಲಿ ಪುಣೆ ವಲಯದ  ಜಿಎಸ್‌ಟಿ ಅಧಿಕಾರಿಗಳೊಂದಿಗೆ ಜಿಎಸ್‌ಟಿಯ ಬಗ್ಗೆ ವಿಚಾರ ವಿನಿಮಯ ನಡೆಯಿತು.

Advertisement

ಈ  ಸಂದರ್ಭದಲ್ಲಿ ಪುಣೆ ವಿಭಾಗದ ಜಿಎಸ್‌ಟಿ ಅಧಿಕಾರಿಗಳಾದ ಉಪ ಆಯುಕ್ತರಾದ ಭಾಂಗಡಿಯ  ಮತ್ತು ಸುಮೇರ್‌ ಕುಮಾರ್‌ ಕಾಳೆ ಅವರು ಉಪಸ್ಥಿತರಿದ್ದು, ಜಿಎಸ್‌ಟಿ ಬಗ್ಗೆ ಹೊಟೇಲ್‌ ಉದ್ಯಮದವರು ಅಳವಡಿಸಿಕೊಳ್ಳಬೇಕಾದ ನಿಯಮಗಳ ಬಗ್ಗೆ ತಿಳಿಸಿದರು. ಕೇಂದ್ರ ಸರಕಾರವು ಇದೀಗ  ತೆರಿಗೆಯನ್ನು ಶೇ.5ಕ್ಕೆ  ಇಳಿಸಿದ್ದು, ಇದನ್ನು ಕಟ್ಟು ನಿಟ್ಟಾಗಿ ಉದ್ಯಮದವರು ಪಾಲಿಸಿಕೊಳ್ಳಬೇಕು ಹಾಗೂ ಪ್ರತಿಯೋರ್ವ ಹೋಟೆಲ್‌ ಉದ್ಯಮಿ ತಮ್ಮ ತಮ್ಮ ಹೊಟೇಲ್‌ನ ನಾಮಫಲಕಗಳಲ್ಲಿ ಜಿಎಸ್‌ಟಿ ಸಂಖ್ಯೆಯನ್ನು ನಮೂದಿಸುವಂತೆ ತಿಳಿಸಿದರು.

ಕೇಂದ್ರ ಆರ್ಥಿಕ ಕಾರ್ಯಾಲಯವು ಉದ್ಯಮಿಗಳಿಗೆ ಹೊಸ ಕಾಯಿದೆಯೊಂದನ್ನು ಹೊರತಂದಿದ್ದು,ನ್ಯಾಷನಲ್‌  ಆ್ಯಂಟಿ ಪ್ರಾಫಿಟೀರಿಂಗ್‌ ಅಥಾರಿಟಿ ಎಂಬುದು ಈ ಕಾಯಿದೆಯ ಹೆಸರಾಗಿದೆ. ಈ ಕಾಯಿದೆಯ ಅಡಿಯಲ್ಲಿ ಎಲ್ಲಾ ಖಾದ್ಯಆಹಾರ  ಪದಾರ್ಥ ವಿತರಣೆಯಲ್ಲಿ ನಮೂದಿಸಿದ ದರದಲ್ಲಿಯೇ ಮಾರಾಟ ಮಾಡುವುದು ಕಡ್ಡಾಯವಾಗಲಿದೆ. ಹೆಚ್ಚಿಗೆ ಅದಾಯವನ್ನು ಗಳಿಸಲು ನಮೂದಿಸಿದ ದರಕ್ಕಿಂತ ಹೆಚ್ಚಿಗೆ ವಸೂಲಿ ಮಾಡುವುದು ಕಂಡಲ್ಲಿ ಅದು ಅಪರಾಧವಾಗಲಿದ್ದು, ಇದು ಎಲ್ಲಾ  ವ್ಯಾಪಾರ ವರ್ಗದವರಿಗೆ  ಅನ್ವಯವಾಗಲಿದೆ ಎಂದು ಅಧಿಕಾರಿಗಳು ವಿಚಾರ ವಿನಿಮಯ ವೇಳೆ ಹೇಳಿದರು.

ಈ ಸಂದರ್ಭದಲ್ಲಿ  ಅಸೋಸಿಯೇಶನ್‌ನ  ಅಧ್ಯಕ್ಷ  ಗಣೇಶ್‌ ಶೆಟ್ಟಿ ಅವರು ಪ್ರತಿಕ್ರಿಯಿಸಿ, ನ್ಯಾಷನಲ್‌  ಆ್ಯಂಟಿ ಪ್ರಾಫಿಟೀರಿಂಗ್‌ ಅಥಾರಿಟಿ ಕಾಯಿದೆಯ ಪ್ರಕಾರ ಅದು ಕೇವಲ ಪ್ಯಾಕ್‌  ಮಾಡಿದ ಆಹಾರ ಪದಾರ್ಥಗಳಿಗೆ ಮಾತ್ರ ಅನ್ವಯಿಸಬಹುದು. ಹೊಟೇಲ್‌ ಉದ್ಯಮದವರಿಗೆ ಅದನ್ನು ಪಾಲಿಸಿಕೊಂಡು ಬರಲು ಸಾಧ್ಯವಿಲ್ಲ. ಯಾಕೆಂದರೆ, ತರಕಾರಿ ಮಾರ್ಕೆಟ್‌ ಹಾಗೂ ಇತರ ಸಾಮಗ್ರಿಗಳ ಮಾರುಕಟ್ಟೆ ಬೆಲೆಯು ಒಂದೇ ರೀತಿಯಲ್ಲಿ ಇರುವುದಿಲ್ಲ. ತರಕಾರಿ ಮಾರ್ಕೆಟ್‌ನಲ್ಲಿ  ಕೊತ್ತಂಬರಿ ಕಡ್ಡಿಯ ಬೆಲೆ ಇಂದು 10 ರೂ. ಇದ್ದರೆ ಮತ್ತೂಂದು ದಿನ 50 ರೂ. ಆಗುತ್ತದೆ. ಅದೇ, ಈರುಳ್ಳಿ ಬೆಲೆ 20 ರೂ. ಇದ್ದದು 80 ರೂ. ಅಥವಾ 100  ರೂ.ವರೆಗೂ ತಲುಪಬಹುದು. ಹಾಗೆಯೇ, ಇತರ  ತರಕಾರಿ, ಮಾಂಸಹಾರಿ, ಮಸಾಲೆ ಪದಾರ್ಥಗಳ ಬೆಲೆಯಲ್ಲಿ ಏರಿಳಿತ ಆಗುತ್ತಿರುವುದರಿಂದ  ಹೊಟೇಲ್‌ ಉದ್ಯಮದವರು ಅದಕ್ಕೆ ಹೊಂದಾಣಿಕೆ ಮಾಡಿಕೊಂಡು ಹೋಗುವ ಅನಿವಾರ್ಯತೆ ಇದೆ. ಈ ಕಾಯಿದೆ  ಹೊಟೇಲ್‌ ಉದ್ಯಮಕ್ಕೆ ಮಾರಕವಾಗಬಹುದು ಎಂದರು.

ಕೇಂದ್ರ ಸರಕಾರವು  ಹೊಟೇಲ್‌ ಉದ್ಯಮದವರಿಗೆ ವಾರ್ಷಿಕ ವ್ಯವಹಾರ ಒಂದು ಕೋಟಿ ರೂ. ಮೇಲ್ಪಟ್ಟವರಿಗೆ ಶೇ. 5 ಜಿಎಸ್‌ಟಿ ಅನ್ವಯವಾಗುವಂತೆ ಕಾಯಿದೆ ರೂಪಿಸಿದೆ, ಅದನ್ನು ಈಗ ಒಂದೂವರೆ ಕೋಟಿ ರೂ. ಮೇಲ್ಪಟ್ಟ ವ್ಯವಹಾರಕ್ಕೆ ಅನ್ವಯವಾಗುವಂತೆ ಜಾರಿಗೊಳಿಸಲಿದೆ ಎಂಬುದಾಗಿ ತಿಳಿದು ಬಂದಿದೆ. ಆದರೆ, ಹೊಟೇಲ್‌ ಉದ್ಯಮವು ಬಹಳ ಅರ್ಥಿಕ ಹೊರೆಯ ಉದ್ಯಮವಾಗಿರುವುದರಿಂದ ಸರಕಾರವು ಎರಡು ಕೋಟಿ ಮೇಲ್ಪಟ್ಟ ವ್ಯವಹಾರಕ್ಕೆ ಶೇ.5 ಜಿಎಸ್‌ಟಿ ಅನ್ವಯವಾಗುವಂತೆ ಕ್ರಮ ಕೈಗೊಂಡರೆ ಉತ್ತಮ ಮತ್ತು ಐ.ಟಿ.ಸಿ ಲಾಭವಾಗುವಂತೆ ಆಗಬೇಕು ಎಂದು ಗಣೇಶ್‌ ಶೆಟ್ಟಿ ಅವರು ಅಧಿಕಾರಿಗಳಿಗೆ ತಿಳಿಸಿದರು  ಹಾಗೂ ಅದಕ್ಕೆ ಪೂರಕವಾಗಿ ಹೊಟೇಲ್‌ ಉದ್ಯಮದ  ಮನವಿ ಪತ್ರವನ್ನು ಸಚಿವರಿಗೆ ಹಾಗೂ ಅವರ  ಸಮ್ಮುಖದಲ್ಲಿ  ಜಿಎಸ್‌ಟಿ ಅಧಿಕಾರಿಗಳಿಗೆ ಸಲ್ಲಿಸಿದರು.

Advertisement

ಈ ಸಂದರ್ಭ ಪುಣೆ ರೆಸ್ಟೋರೆಂಟ್‌ ಆ್ಯಂಡ್‌ ಹೊಟೇಲಿಯರ್ಸ್‌ ಅಸೋಸಿಯೇಶನ್‌ನ ಪ್ರಮುಖರಾದ ಉಪಾಧ್ಯಕ್ಷ ವಿಶ್ವನಾಥ್‌ ಪೂಜಾರಿ ಕಡ್ತಲ, ಕಾರ್ಯದರ್ಶಿ ಕಿಶೋರ್‌ ಸರ್ಪೋತ್ತಾದ್ದಾರ್‌,ಕೋಶಾಧಿಕಾರಿ  ಮೋಹನ್‌ ಶೆಟ್ಟಿ , ಸಮಿತಿ ಸದಸ್ಯರಾದ ವಸಂತ್‌ ಶೆಟ್ಟಿ, ಸುಧಾಕರ್‌ ಶೆಟ್ಟಿ , ರಾಜೇಶ್‌ ಶೆಟ್ಟಿ, ಹೊಟೇಲ್‌ ಉದ್ಯಮಿಗಳಾದ ವಿಶ್ವನಾಥ್‌ ಟಿ.ಪೂಜಾರಿ, ಲೋಹಿತ್‌ ಕೆ ಪೂಜಾರಿ, ಗಿರೀಶ್‌ ಪೂಜಾರಿ ಮೊದಲಾದವರು ಉಪಸ್ಥಿತರಿದ್ದರು. 

 ಚಿತ್ರ-ವರದಿ: ಹರೀಶ್‌ ಮೂಡಬಿದ್ರೆ

Advertisement

Udayavani is now on Telegram. Click here to join our channel and stay updated with the latest news.

Next