ಕಲಬುರಗಿ: ರೈತರ ಸಮಸ್ಯೆಗಳ ಪರಿಹಾರಕ್ಕೆ ಸಂಬಂಧಿಸಿದಂತೆ ಅನಿರ್ದಿಷ್ಟ ಕಾಲದ ಸತ್ಯಾಗ್ರಹದಲ್ಲಿ ನಿರತರಾಗಿರುವ ಮುಖಂಡ, ಮಾಜಿ ಸಚಿವ ಎಸ್.ಕೆ. ಕಾಂತಾ ಅವರು ಧರಣಿ ಸತ್ಯಾಗ್ರಹ ನಿಲ್ಲಿಸಬೇಕು ಎಂದು ಜಿಲ್ಲಾ ಉಸ್ತುವಾರಿ ಸಚಿವ ಪ್ರಿಯಾಂಕ್ ಖರ್ಗೆ ಮನವಿ ಮಾಡಿದರು.
ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಧರಣಿ ನಿರತ ಎಸ್.ಕೆ. ಕಾಂತಾ ಹಾಗೂ ಬೆಂಬಲಿಗರನ್ನು ಭೇಟಿಯಾಗಿ ಮಾತನಾಡಿದ ಸಚಿವರು, ತಮ್ಮ ಉಪಸ್ಥಿತಿಯಲ್ಲಿ ಶ್ರೀಸಿಮೆಂಟ್ ಹಾಗೂ ಇನ್ನಿತರ ಸಮಸ್ಯೆ ಚರ್ಚಿಸಲು ಅನುಕೂಲವಾಗುವ ಹಾಗೆ ಸಭೆ ಕರೆಯೋಣ. ಸಂಬಂ ಧಿಸಿದ ಅಧಿಕಾರಿ ಹಾಗೂ ಕಂಪನಿಗಳ ಮುಖ್ಯಸ್ಥರೊಂದಿಗೆ ಚರ್ಚಿಸುವ ಮೂಲಕ ರೈತರ ತೊಂದರೆಗೆ ಶಾಶ್ವತ ಪರಿಹಾರ ಕಂಡುಕೊಳ್ಳಲು ಅನುಕೂಲವಾಗುವುದು.
ತಾವು ಧರಣಿ ಸತ್ಯಾಗ್ರಹದಲ್ಲಿ ಕುಳಿತುಕೊಳ್ಳುವ ಬದಲು ಸಾಧ್ಯವಾದರೆ ಸಭೆಗಳಲ್ಲಿ ಭಾಗವಹಿಸಬೇಕು. ರೈತರಿಗಾಗಿರುವ ತೊಂದರೆಗಳ ನಿವಾರಣೆಗೆ ಪ್ರಾಮಾಣಿಕ ಪ್ರಯತ್ನ ಮಾಡಲಾಗುವುದು. ಧರಣಿ ಸತ್ಯಾಗ್ರಹ ಕೈಬಿಟ್ಟರೆ ಹೋರಾಟ ಕೊನೆಗೊಂಡಂತೆ ಎಂದು ಭಾವಿಸಬಾರದು ಎಂದು ಮನವರಿಕೆ ಮಾಡಿಕೊಟ್ಟರು.
ಖಾಸಗಿ ಕಂಪನಿಗಳಿಗೆ ಜಮೀನು ನೀಡಿರುವ ರೈತರ ಕುಟುಂಬದವರನ್ನು ಅದೇ ಕಂಪನಿಯಲ್ಲಿ ನೌಕರರಿಗೆ ತೆಗೆದುಕೊಳ್ಳಬೇಕು ಎಂದು ಡಾ| ಮಹಿಷಿ ವರದಿಯಲ್ಲಿ ತಿಳಿಸಲಾಗಿದೆ. ಅದಕ್ಕೂ ಹೆಚ್ಚಾಗಿ ಇತ್ತೀಚೆಗೆ ನಡೆದ ಸಚಿವ ಸಂಪುಟ ಸಭೆಯಲ್ಲಿ ಬೇರೆ ರಾಜ್ಯ ಅಥವಾ ರಾಷ್ಟ್ರದ ಕಂಪನಿಗಳು ನಮ್ಮ ರಾಜ್ಯದಲ್ಲಿ ಪ್ರಾರಂಭವಾದಲ್ಲಿ ಸ್ಥಳೀಯರಿಗೆ ಹೆಚ್ಚಿನ ಆದ್ಯತೆ ನೀಡಬೇಕು ಎಂದು ನಿರ್ಣಯಿಸಲಾಗಿದೆ. ಇದನ್ನು ಜಾರಿಗೆ ತರಲಾಗುವುದು.
ಸೇಡಂ ಮತ್ತು ಕಲಬುರಗಿಯಲ್ಲಿ ನೂತನವಾಗಿ ಪ್ರಾರಂಭಿಸುತ್ತಿರುವ ಕಂಪನಿಗಳ ಅಧ್ಯಕ್ಷರಿಗೆ ಹಾಗೂ ಕಾರ್ಯನಿರ್ವಾಹಕ ಅಧಿಕಾರಿಗಳಿಗೆ ಕರೆಯಿಸಿ ಚರ್ಚಿಸುವ ಮೂಲಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳೋಣ. ಶ್ರೀಸಿಮೆಂಟ್ ಕಂಪನಿ ಬಗ್ಗೆಯೂ ತನಿಖೆ ಮಾಡಿಸಲು ಹೇಳಲಾಗಿದೆ ಎಂದು ತಿಳಿಸಿದರು.
ಜಿಲ್ಲೆಯಲ್ಲಿ ಕೆರೆ ಒತ್ತುವರಿ ಕುರಿತಂತೆ ಕೆರೆಗಳ ಸಂರಕ್ಷಣೆ ಮತ್ತು ದುರಸ್ತಿಗೆ ಕ್ರಮ ಕೈಗೊಳ್ಳಲಾಗುತ್ತಿದ್ದು, ಕೆರೆ ಒತ್ತುವರಿ ವರದಿ ಪಡೆಯಲಾಗುತ್ತಿದೆ. ಕೆರೆ ಒತ್ತುವರಿಗೆ ಸಂಬಂಧಿಸಿದಂತೆ ಈಗಾಗಲೇ ಒಂದು ಸಭೆ ನಡೆಸಲಾಗಿದೆ. ಪ್ರಥಮ ಹಂತವಾಗಿ ಕಲಬುರಗಿ ನಗರದಲ್ಲಾಗಿರುವ ಕೆರೆ ಒತ್ತುವರಿ ತೆರವು ಕಾರ್ಯಾಚರಣೆ ಕೈಗೊಳ್ಳಲಾಗುವುದು. ಅದೇ ರೀತಿ ವಕ್ಫ್ ಮತ್ತು ಸರ್ಕಾರಿ ಜಮೀನುಗಳ ಒತ್ತುವರಿ ಬಗ್ಗೆಯೂ ವರದಿ ಸಂಗ್ರಹಿಸಿ ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
ಶಾಸಕ ಎಂ.ವೈ. ಪಾಟೀಲ, ಕಾಂಗ್ರೆಸ್ ಜಿಲ್ಲಾಧ್ಯಕ್ಷ ಜಗದೇವ ಗುತ್ತೇದಾರ, ಅಲ್ಲಮಪ್ರಭು ಪಾಟೀಲ, ಹೆಚ್ಚುವರಿ ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಇದ್ದರು.