Advertisement
ಜ್ವರ, ತಲೆನೋವಿಗೆ ಚಿಕಿತ್ಸೆ ಪಡೆಯಲು ಸೋಮವಾರ ಜಿಲ್ಲೆಯ ಖಾಸಗಿ ಆಸ್ಪತ್ರೆಯಲ್ಲಿ ದಾಖಲಾದ ಫಿಲಿಪ್ಪೀನ್ಸ್‌ನ ದಂಪತಿ ಚೇತರಿಸಿಕೊಳ್ಳುತ್ತಿದ್ದಾರೆ. ಶೀತ, ತಲೆನೋವಿಗೆ ದಾಖಲಾಗಿದ್ದ ಕೇರಳ ಮೂಲದ ಜಪಾನ್ ವಿದ್ಯಾರ್ಥಿ ಚೇತರಿಸಿಕೊಂಡು ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದಾರೆ. ಮೂವರಿಗೂ ಸಾಮಾನ್ಯ ಶೀತ, ಜ್ವರ, ತಲೆನೋವು ಕಾಣಿಸಿಕೊಂಡಿತ್ತು. ಯಾವುದೇ ಕಾರಣಕ್ಕೂ ಅನಗತ್ಯ ವದಂತಿಗಳನ್ನು ಹರಡಬಾರದು ಎಂದು ಜಿಲ್ಲಾ ರೋಗವಾಹಕ ಆಶ್ರಿತ ರೋಗಗಳ ನಿಯಂತ್ರಣಾಧಿಕಾರಿ ಡಾ| ನವೀನ್‌ಚಂದ್ರ ಕುಲಾಲ್ ಮನವಿ ಮಾಡಿದ್ದಾರೆ.
ಕೊರೊನಾ ವೈರಸ್ ಸೋಂಕು ತಡೆ ಹಾಗೂ ನಿಯಂತ್ರಣ ಕುರಿತು ಜಿಲ್ಲೆಯಲ್ಲಿ ಜಾಗೃತಿ ಮೂಡಿಸುವ ಕಾರ್ಯ ಮುಂದುವರಿದಿದೆ. ಜಿಲ್ಲೆಯಲ್ಲಿ ಮಂಗಳವಾರದ ತನಕವೂ ಯಾವುದೇ ಶಂಕಿತ ಪ್ರಕರಣ ಕಂಡುಬಂದಿಲ್ಲ. ಮುನ್ನೆಚ್ಚರಿಕೆ ಕ್ರಮಗಳನ್ನು ಮುಂದುವರಿಸಲಾಗಿದೆ ಎಂದು ಉಡುಪಿ ಜಿಲ್ಲಾ ಆರೋಗ್ಯಾಧಿಕಾರಿ ಡಾ| ಸುಧೀಂದ್ರ ಚಂದ್ರ ಸೂಡ ತಿಳಿಸಿದ್ದಾರೆ. ಜಿಲ್ಲೆಯಾದ್ಯಂತ ಮುಂಜಾಗ್ರತೆ ಕ್ರಮಗಳನ್ನು ಆರೋಗ್ಯ ಅಧಿಕಾರಿಗಳು ಕೈಗೊಂಡಿದ್ದಾರೆ. ಜಿಲ್ಲಾ ಮಟ್ಟ, ತಾಲೂಕು ಮಟ್ಟ ಹಾಗೂ ಪ್ರಾಥಮಿಕ ಆರೋಗ್ಯ ಕೇಂದ್ರ, ಸಮುದಾಯ ಕೇಂದ್ರಗಳಲ್ಲಿ ಕೇಂದ್ರ ಮಟ್ಟದಲ್ಲಿ ವೈದ್ಯಾಧಿಕಾರಿಗಳು ನಿಗಾವಹಿಸಿ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸುವ ಕಾರ್ಯ ನಡೆಸುತ್ತಿದ್ದಾರೆ. ಸದ್ಯ ಜಿಲ್ಲೆಯಲ್ಲಿ ಯಾವುದೇ ಆತಂಕವಿಲ್ಲ ಎಂದು ತಿಳಿಸಿದ್ದಾರೆ.
Related Articles
ಕೊರೊನಾ ವೈರಸ್ ಸೋಂಕು ಪೀಡಿತ ದೇಶಗಳಾದ ಚೀನ, ಹಾಂಕಾಂಗ್, ಆಗ್ನೇಯ ಏಷ್ಯಾ, ಜಪಾನ್, ದಕ್ಷಿಣ ಕೊರಿಯಾ ಅಥವಾ ವಿಶ್ವದ ಇತರ ದೇಶಗಳಿಂದ ಕಳೆದ ಒಂದು ತಿಂಗಳಿನಿಂದೀಚೆಗೆ ದ.ಕ. ಜಿಲ್ಲೆಗೆ ಯಾವುದೇ ವ್ಯಕ್ತಿ ಬಂದಿರುವುದು ತಿಳಿದುಬಂದಲ್ಲಿ ಅಂತಹವರ ಬಗ್ಗೆ ಸಾರ್ವಜನಿಕರು ಆರೋಗ್ಯ ಇಲಾಖೆಗೆ ಮಾಹಿತಿ ನೀಡಬಹುದು. ಅವರಲ್ಲಿ ಕೊರೊನಾ ಸೋಂಕಿನ ಲಕ್ಷಣ ಇದ್ದರೂ ಇಲ್ಲದಿದ್ದರೂ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯ ದೂರವಾಣಿ ಸಂಖ್ಯೆ 0824-2423672 ಅಥವಾ ಜಿಲ್ಲಾ ಸರ್ವೆಲೆನ್ಸ್ ಘಟಕದ ದೂರವಾಣಿ ಸಂಖ್ಯೆ 0824-2427316 ಸಂಖ್ಯೆಗೆ ಮಾಹಿತಿ ನೀಡಬೇಕು. ಮಾಹಿತಿಯನ್ನು ಗೌಪ್ಯವಾಗಿಡಲಾಗುವುದು ಎಂದು ದ.ಕ. ಜಿಲ್ಲಾಧಿಕಾರಿ ಸಿಂಧೂ ಬಿ. ರೂಪೇಶ್ ತಿಳಿಸಿದ್ದಾರೆ.
Advertisement