ರಾಣಿಬೆನ್ನೂರ: ನಿವೇಶನ ಹಾಗೂ ಮನೆ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸಬೇಕೆಂದು ಒತ್ತಾಯಿಸಿ ನಿವೇಶನರಹಿತರ ವೇದಿಕೆಯ ಅಧ್ಯಕ್ಷ ಪ್ರಣವಾನಂದರಾಮ ಸ್ವಾಮೀಜಿ ಅವರ ನೇತೃತ್ವದಲ್ಲಿ ಗುರುವಾರ ತಾಲೂಕಿನ ಆರೇಮಲ್ಲಾಪುರ ಗ್ರಾಮದಲ್ಲಿ ನಿವೇಶನ ರಹಿತರು ಪಾದಯಾತ್ರೆ ಮೂಲಕ ತೆರಳಿ ಸ್ಥಳೀಯ ಗ್ರಾಪಂ ಪಿಡಿಒ ಡಿ.ಬಿ. ಹರಿಜನ ಮತ್ತು ಅಧ್ಯಕ್ಷೆ ಹೊನ್ನವ್ವ ಓಲೇಕಾರ ಅವರಿಗೆ ಮನವಿ ಸಲ್ಲಿಸಿದರು.
ಈ ವೇಳೆ ಪ್ರಣವಾನಂದರಾಮ ಸ್ವಾಮೀಜಿ ಮಾತನಾಡಿ, ಮನೆ ಮತ್ತು ನಿವೇಶನ ಇಲ್ಲದವರಿಗೆ 15 ದಿನಗಳೊಳಗಾಗಿ ಮನೆ ಮಂಜೂರಿಗೊಳಿಸಬೇಕು. ಇಲ್ಲವಾದರೆ ತಾಪಂ ಇಒ, ತಹಶೀಲ್ದಾರ್ ಹಾಗೂ ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿ ಶ್ರೀಮಠದಲ್ಲಿ ಆಮರಣ ಉಪವಾಸ ಸತ್ಯಾಗ್ರಹ ಕೈಗೊಳ್ಳುವುದಾಗಿ ಶ್ರೀಗಳು ಎಚ್ಚರಿಸಿದರು.
ಗ್ರಾಮದಲ್ಲಿರುವ 154ನೇ ಸರ್ವೇ ನಂಬರ್‌ನಲ್ಲಿ ಈಗಾಗಲೇ 17 ಎಕರೆ ನಿವೇಶನ ನಿರ್ಮಾಣ ಮಾಡಲಾಗಿದೆ. 10 ಎಕರೆ ಜಾಗೆಯಲ್ಲಿ ನಿವೇಶನ ರಹಿತರಿಗೆ ಮಂಜೂರಾಗಿ 2ವರ್ಷಗಳಾದರೂ ಈ ವರೆಗೂ ಹಸ್ತಾಂತರವಾಗಿಲ್ಲ. 25 ಎಕರೆ ಬೇರೆ ಇರುವ ಜಾಗೆಯಲ್ಲಿ 19 ಎಕರೆ ಹುಲ್ಲುಗಾವಲಿದ್ದು, ಇದರಲ್ಲೂ ಸಹ ನಿವೇಶನ ಮಾಡಬಹುದಾಗಿದೆ ಎಂದರು.
ಈ ಕುರಿತು ಹಲವು ಬಾರಿ ಗ್ರಾಪಂ ಅಧ್ಯಕ್ಷರು, ಪಿಡಿಒ ಹಾಗೂ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದರೂ ಪ್ರಯೋಜನವಾಗಿಲ್ಲ. ಈ ಬಗ್ಗೆ ಗಂಭೀರವಾಗಿ ಪರಿಶೀಲಿಸಿ ನಮಗೆ ನ್ಯಾಯ ದೊರಕಿಸಿಕೊಡಬೇಕು. ಗ್ರಾಮದಲ್ಲಿ ಅಧಿಕ ಜನರು ನಿವೇಶನ ರಹಿತರಿದ್ದಾರೆ. ಅವರ ಜೀವನ ನಿಜಕ್ಕೂ ದುಸ್ಥರವಾಗಿದೆ ಎಂದರು.
ರಾಜು ಸುರ್ವೆ, ಶಿವಕುಮಾರ ಶೆಟ್ಟರ್, ನಿಂಗಪ್ಪ ಹಲವಾಗಲ, ಗಾಳೆಪ್ಪ ಮರಿಯಮ್ಮನವರ, ಮಂಜುನಾಥ ವಡ್ಡರ, ಶಿವು ಸಣ್ಣಬೊಮ್ಮಾಜಿ, ಶಿವಾಜಿ ಹಲವಾಗಲ, ಭಾಗ್ಯಲಕ್ಷಿ ್ಮೕ ಶಿವಳ್ಳಿ, ರೇಣುಕಮ್ಮ ಹಲವಾಗಲ, ರೇಷ್ಮಾ ನಾಗರಜ್ಜಿ, ಕರಬಸವ್ವ ಹಳ್ಳಳ್ಳಿ, ಲಲಿತವ್ವ ಚಳಗೇರಿ, ಗೌರಮ್ಮ ನಿಟ್ಟೂರು, ಮಂಜುಳಾ ಮಣಕೂರ ಸೇರಿದಂತೆ ಮತ್ತಿತರರು ಇದ್ದರು.