Advertisement

ಪುರಸಭೆ ವ್ಯಾಪ್ತಿಯ ಅನಧಿಕೃತ ನೀರಿನ ಸಂಪರ್ಕ ಕಡಿತಕ್ಕೆ ಆಗ್ರಹ

09:02 PM Sep 28, 2021 | Team Udayavani |

ಬಂಟ್ವಾಳ: ಪುರಸಭೆ ವ್ಯಾಪ್ತಿಯಲ್ಲಿ ಅನಧಿಕೃತ ನೀರಿನ ಸಂಪರ್ಕ ಕಡಿತ ಮಾಡುವ ಕುರಿತು ಸದಸ್ಯರು ಆಗ್ರಹಿಸಿದ ಹಿನ್ನೆಲೆಯಲ್ಲಿ ಎಲ್ಲ ಅನಧಿಕೃತ ಸಂಪರ್ಕಗಳನ್ನು ಕಡಿತ ಮಾಡುವಂತೆ ಅಧ್ಯಕ್ಷರು ಅಧಿಕಾರಿಗಳಿಗೆ ಸೂಚಿಸಿದರು.

Advertisement

ಸಾಮಾನ್ಯ ಸಭೆಯು ಪುರಸಭಾಧ್ಯಕ್ಷ ಮಹಮ್ಮದ್‌ ಶರೀಫ್‌ ಅಧ್ಯಕ್ಷತೆಯಲ್ಲಿ ನಡೆಯಿತು. ಸದಸ್ಯ ವಾಸು ಪೂಜಾರಿ ಅವರು ವಿಷಯ ಪ್ರಸ್ತಾಪಿಸಿ, ಕಳೆದ ಹಲವು ಸಮಯಗಳಿಂದ ಅನಧಿಕೃತ ನೀರಿನ ಸಂಪರ್ಕ ಕಡಿತದ ಕುರಿತು ಪ್ರಸ್ತಾವಿಸಲಾಗುತ್ತಿದೆ. ಅದರ ವಿಚಾರ ಏನಾಯಿತು ಎಂದು ಪ್ರಶ್ನಿಸಿದರು. ಈ ವೇಳೆ ಸಂಬಂಧಪಟ್ಟ ಸಿಬಂದಿ ಉತ್ತರಿಸಿ, ಅನಧಿಕೃತ ಸಂಪರ್ಕ ಕಡಿತ ಕಾರ್ಯ ಪ್ರಗತಿಯಲ್ಲಿದ್ದು, ಕಡಿತದ ನಿರ್ದಿಷ್ಟ ಸಂಖ್ಯೆ ಲಭಿಸಿಲ್ಲ ಎಂದರು. ಈ ವೇಳೆ ಎಲ್ಲ ಅನಧಿಕೃತ ಸಂಪರ್ಕಗಳನ್ನು ಕಡಿತ ಮಾಡುವಂತೆ ಅಧ್ಯಕ್ಷರು ಸೂಚಿಸಿದರು.

ಪೌರ ಕಾರ್ಮಿಕರಿಗೆ ಅವಮಾನ
ಬಂಟ್ವಾಳ ಪುರಸಭೆಯಲ್ಲಿ ಪೌರ ಕಾರ್ಮಿಕರ ದಿನವನ್ನು ಆಚರಿಸದೆ ಅವರಿಗೆ ಕೇವಲ ಊಟ ಕೊಟ್ಟು ಅವಮಾನ ಮಾಡ ಲಾಗಿದೆ. ಜತೆಗೆ ಅದನ್ನು ಪುರಸಭೆ ಸದಸ್ಯರಿಗೂ ತಿಳಿಸಿಲ್ಲ ಎಂದು ಸದಸ್ಯರು ಅಧಿಕಾರಿ ವರ್ಗ ವನ್ನು ತರಾಟೆಗೆ ತೆಗೆದುಕೊಂಡರು.

ಸದಸ್ಯ ಜನಾರ್ದನ ಚಂಡ್ತಿಮಾರ್‌ ಅವರು ವಿಷಯ ಪ್ರಸ್ತಾವಿಸಿ, ವರ್ಷವಿಡಿ ಪುರಸಭೆಯ ಸ್ವತ್ಛತೆ ಕಾಪಾಡುವ ಪೌರ ಕಾರ್ಮಿಕರಿಗೆ ಒಂದು ದಿನ ಗೌರವ ಸಲ್ಲಿಸಲು ನಮಗೆ ಸಾಧ್ಯ ವಾಗದೇ ಇರುವುದು ವಿಷಾದನೀಯ. ಎಲ್ಲ ಕಡೆ ನಗರ ಸ್ಥಳೀಯಾಡಳಿತ ಸಂಸ್ಥೆಗಳಲ್ಲಿ ಪೌರ ಕಾರ್ಮಿಕ ದಿನವನ್ನು ಆಚರಿಸಲಾಗಿದೆ. ಇಲ್ಲಿ ಇದು ಪೌರ ಕಾರ್ಮಿಕರಿಗೆ ಮಾಡಿರುವ ಅವಮಾನ ಎಂದರು.

ಮುಖ್ಯಾಧಿಕಾರಿ ಲೀನಾ ಬ್ರಿಟ್ಟೊ ಸ್ಪಷ್ಟನೆ ನೀಡಿ, ಪೌರ ಕಾರ್ಮಿಕರ ದಿನಾಚರಣೆಗೆ ಅನುದಾನ ಬಳಕೆಗೆ ಅನುಮತಿ ಸಿಗದೇ ಇರು ವುದರಿಂದ ಆಚರಿಸಿಲ್ಲ ಎಂದರು. ಇದರಿಂದ ಗರಂ ಆದ ಚಂಡ್ತಿಮಾರ್‌ ಅವರು, ಅನು ದಾನ ಇಲ್ಲದೇ ಇದ್ದರೆ ಅದನ್ನು ಸದಸ್ಯರ ಗಮನಕ್ಕೆ ತರಬೇಕಿತ್ತು. ನಾವು ಹೇಗಾದರೂ ಮಾಡಿ ಆಚರಿಸುತ್ತಿದ್ದೆವು ಎಂದರು. ಮುಂದಿನ ಆಯುಧ ಪೂಜೆಯ ಸಂದರ್ಭ ಪೌರ ಕಾರ್ಮಿಕರನ್ನು ಗೌರವಿಸುವ ಕಾರ್ಯ ನಡೆಸೋಣ ಎಂದು ಅಧ್ಯಕ್ಷರು ಭರವಸೆ ನೀಡಿದ ಬಳಿಕ ಚರ್ಚೆ ತಿಳಿಯಾಯಿತು.

Advertisement

ಇದನ್ನೂ ಓದಿ:ಸಿಆರ್‌ಝಡ್‌ ಅಧಿಸೂಚನೆ 2019ರಲ್ಲಿ ಹೆಚ್ಚಿನ ಚಟುವಟಿಕೆಗೆ ಅವಕಾಶ: ಡಿಸಿ

ಧರ್ಮದ ಹೆಸರು ಬಳಕೆಗೆ ಆಕ್ಷೇಪ
ಪುರಸಭೆಯ ಪೌರ ಕಾರ್ಮಿಕರಿಗೆ ಬಿರಿ ಯಾನಿ ತರಿಸಿರುವ ವಿಚಾರಕ್ಕೆ ಸಂಬಂಧಿಸಿ ಮುಖ್ಯಾಧಿಕಾರಿಯವರು ಧರ್ಮದ ವಿಚಾರ ತಂದು ಮುಸ್ಲಿಂ ಎಂಬ ಪದಬಳಕೆ ಮಾಡಿದ್ದಾರೆ ಎಂದು ಸದಸ್ಯರಾದ ಮುನೀಶ್‌ ಆಲಿ, ಅಬೂಬಕ್ಕರ್‌ ಸಿದ್ದಿಕ್‌, ಇದ್ರಿಸ್‌ ಪಿ.ಜೆ., ಹಸೈನಾರ್‌ ಆಕ್ಷೇಪ ವ್ಯಕ್ತಪಡಿಸಿ ಕ್ಷಮೆ ಕೇಳುವಂತೆ ಆಗ್ರಹಿಸಿದರು. ಈ ವಿಚಾರದ ಕುರಿತು ಸುದೀರ್ಘ‌ ಚರ್ಚೆ ನಡೆಯಿತು. ಈ ವೇಳೆ ಮುಖ್ಯಾಧಿಕಾರಿಯವರು ಸ್ಪಷ್ಟನೆ ನೀಡಿ ತಾನು ಯಾರಿಗೂ ಅವಮಾನ ಮಾಡಿಲ್ಲ, ಬಿರಿಯಾನಿ ಬೇಡ, ಊಟ ಕೊಡೋಣ ಎಂದು ಹೇಳಿದ್ದೆ. ಬಿರಿಯಾನಿ ತರಿಸಿರುವುದಕ್ಕೆ ಆಕ್ಷೇಪ ಎತ್ತಿದ್ದೇವೆ. ತನ್ನ ಹೇಳಿಕೆಯಿಂದ ನೋವಾಗಿದ್ದರೆ ವಿಷಾದ ವ್ಯಕ್ತಪಡಿಸುತ್ತೇನೆ ಎಂದು ಹೇಳಿದ ಬಳಿಕ ಸಭೆ ಮುಂದುವರಿಯಿತು.

ಅಧ್ಯಕ್ಷರ ಗಮನಕ್ಕೆ ಬರುವುದಿಲ್ಲ
ಪುರಸಭೆಯ ಬಿಲ್ಲು ಪಾವತಿಯ ವಿಚಾರ ಗಳು ಅಧ್ಯಕ್ಷರ ಗಮನಕ್ಕೆ ಬರುವುದಿಲ್ಲವೇ ಎಂದು ಸದಸ್ಯ ಗೋವಿಂದ ಪ್ರಭು ಅವರು ಕೇಳಿದಾಗ, ನನ್ನ ಬಳಿ ಯಾವ ಬಿಲ್ಲು ಪಾವತಿಯ ವಿಚಾರವೂ ಬರುವುದಿಲ್ಲ ಎಂದರು. ಬಿಲ್ಲು ಪಾವತಿಯ ವಿಚಾರ ಅಧ್ಯಕ್ಷರ ಬಳಿ ಬರುವುದಿಲ್ಲ ಎಂದು ಅಧಿ ಕಾರಿಗಳು ಸದಸ್ಯರಿಗೆ ತಿಳಿಸಬೇಕು ಎಂದು ಸದಸ್ಯ ಹಸೈನಾರ್‌ ಆಗ್ರಹಿಸಿದರು. ಜತೆಗೆ ಮುಂದಿನ ದಿನಗಳಲ್ಲಿ ಬಿಲ್ಲು ಪಾವತಿ ವಿಚಾರಗಳನ್ನು ಅಧ್ಯಕ್ಷರ ಗಮನಕ್ಕೆ ತಂದೇ ಮುಂದುವರಿಯಬೇಕು ಎಂದು ಸದಸ್ಯ ಸಿದ್ದಿಕ್‌ ಆಗ್ರಹಿಸಿದರು.

ಪುರಸಭೆ ವ್ಯಾಪ್ತಿಯ ಬೀದಿದೀಪಗಳ ಅಳವಡಿಕೆಯ ವಿಚಾರದಲ್ಲಿ ಸಾಕಷ್ಟು ಚರ್ಚೆ ಗಳು ನಡೆಯಿತು. ಗುತ್ತಿಗೆದಾರರು ಕಡಿಮೆ ಗುಣಮಟ್ಟದ ಬಲ್ಬ್ಗಳನ್ನು ಅಳವಡಿ ಸುತ್ತಿದ್ದಾರೆ. ಸೋಡಿಯಂ ಬಲ್ಬ್ಗಳನ್ನು ಹಾಕುತ್ತಿಲ್ಲ. ದುಬಾರಿ ವೆಚ್ಚ ಮಾಡಿದ ಬಳಿಕ ಸರಿಯಾಗಿ ಉರಿಯಬೇಕಲ್ಲವೇ ಎಂದು ಗೋವಿಂದ ಪ್ರಭು ಕೇಳಿದರು.

ಪುರಸಭೆ ವ್ಯಾಪ್ತಿಯಲ್ಲಿ ತೆರಿಗೆ ಪಾವತಿಸದೆ ಇರುವ ವ್ಯಕ್ತಿಗೆ ಲೈಸನ್ಸ್‌ ನೀಡಿರುವ ಕುರಿತು ಸದಸ್ಯರಾದ ಗೋವಿಂದ ಪ್ರಭು, ವಿದ್ಯಾವತಿ ಅಧಿಕಾರಿಗಳನ್ನು ತರಾಟೆಗೆ ತೆಗೆದುಕೊಂಡರು.

ಈ ವೇಳೆ ಕಂದಾಯ ಅಧಿಕಾರಿ ಗಳು ಮಾತನಾಡಿ, ಅದು ಹಿಂದಿನ ಮುಖ್ಯಾಧಿಕಾರಿ ಅವರು ಇರುವಾಗ ನೀಡಲಾಗಿದೆ ಎಂದರು. ಜತೆಗೆ ವಿದ್ಯುತ್‌ ಸಂಪರ್ಕಕ್ಕೆ ಮೆಸ್ಕಾಂಗೆ ಎನ್‌ಒಸಿ ನೀಡಿರುವುದಕ್ಕೂ ಆಕ್ಷೇಪ ವ್ಯಕ್ತ ಪಡಿಸಲಾಯಿತು. ತೆರಿಗೆ ಪಾವತಿಸದೇ ಇದ್ದರೆ ಲೈಸನ್ಸ್‌ ರದ್ದು ಮಾಡುವಂತೆ ಅಧ್ಯಕ್ಷರು ಸೂಚಿಸಿದರು.

ಸಭೆಯಲ್ಲಿ ಪುರಸಭೆ ಉಪಾಧ್ಯಕ್ಷೆ ಜೆಸಿಂತಾ ಡಿ’ಸೋಜಾ, ಸದಸ್ಯರು ಪಾಲ್ಗೊಂಡಿದ್ದರು.

ಅನುದಾನ ಹಂಚಿಕೆಗೆ ಆಕ್ಷೇಪ
ಪುರಸಭೆಯ 2021-22ನೇ ಸಾಲಿನ 15ನೇ ಹಣಕಾಸು ಆಯೋಗ ಅನುದಾನದ ಕಾಮಗಾರಿಗಳ ಕ್ರಿಯಾಯೋಜನೆಯ ಕುರಿತು ಸದಸ್ಯ ಹರಿಪ್ರಸಾದ್‌ ಆಕ್ಷೇಪ ವ್ಯಕ್ತಪಡಿಸಿ, ಆದ್ಯತೆಯ ಕಾಮಗಾರಿಯ ಬದಲು ಅಧ್ಯಕ್ಷರು ತಮಗೆ ಬೇಕಾದ ಸದಸ್ಯರಿಗೆ ಬೇಕಾದ ಹಾಗೆ ಅನುದಾನ ನೀಡಿದ್ದಾರೆ ಎಂದು ಆರೋಪಿಸಿದರು.

ಈ ವೇಳೆ ರಾಮಕೃಷ್ಣ ಆಳ್ವ ಮಧ್ಯೆ ಪ್ರವೇಶಿಸಿದಾಗ, ತಾವು ಮಾಜಿ ಅಧ್ಯಕ್ಷರ ಬಳಿ ಮಾತನಾಡಿಲ್ಲ. ಅಧ್ಯಕ್ಷರ ಬಳಿ ಮಾತನಾಡಿದ್ದೇವೆ ಎಂದು ಸದಸ್ಯರಾದ ಹರಿಪ್ರಸಾದ್‌, ಜಯರಾಮ್‌ ವಾದಿಸಿದರು.

ಈ ವೇಳೆ ಕಾಂಗ್ರೆಸ್‌-ಬಿಜೆಪಿ ಸದಸ್ಯರ ಮಧ್ಯೆ ವಾಕ್ಸಮರ ನಡೆಯಿತು. ಜತೆಗೆ ರಾಮಕೃಷ್ಣ ಆಳ್ವ ಅವರು ಚರ್ಚೆಯ ವೇಳೆ ಗೋವಿಂದ ಪ್ರಭು ಅವರನ್ನು ಏಕವಚನದಲ್ಲಿ ಮಾತನಾಡಿಸಿದರು ಎಂದು ಬಿಜೆಪಿ ಸದಸ್ಯರು ಆರೋಪಿಸಿದರು.

ನೀರಿನ ಶುಲ್ಕ ದುಬಾರಿ
ಈಗಿನ ವ್ಯವಸ್ಥೆಯಲ್ಲಿ ನೀರಿನ ಸಂಪರ್ಕಕ್ಕೆ ಮೀಟರ್‌ ಅಳವಡಿಸಿದ ಬಳಿಕ ಶುಲ್ಕ 3ರಿಂದ 4 ಸಾವಿರ ರೂ.ಬರುತ್ತಿದ್ದು, ತನ್ನ ವಾರ್ಡ್‌ನಲ್ಲೇ 10 ದೂರುಗಳು ಬಂದಿದೆ ಎಂದು ಸದಸ್ಯ ಜನಾರ್ದನ ಚಂಡ್ತಿಮಾರ್‌ ತಿಳಿಸಿದರು. ಶುಲ್ಕ ಅಧಿಕ ಬಂದಿರುವ ಕುರಿತು ಸಂಬಂಧಪಟ್ಟ ನಗರ ನೀರು ಸರಬರಾಜು ಮಂಡಳಿಗೆ ತಿಳಿಸುತ್ತೇವೆ. ಅವರು ಪರಿಶೀಲನೆ ನಡೆಸುತ್ತಾರೆ ಎಂದು ಮುಖ್ಯಾಧಿಕಾರಿ ಉತ್ತರಿಸಿದರು.

Advertisement

Udayavani is now on Telegram. Click here to join our channel and stay updated with the latest news.

Next