ವಿಜಯಪುರ: ಬೇಡ ಜಂಗಮ ಸಮುದಾಯದವರಿಗೆ ಪರಿಶಿಷ್ಟ ಜಾತಿ ಪ್ರಮಾಣ ಪತ್ರ ನೀಡಲು ಆಗ್ರಹಿಸಿ ಅಖೀಲ ಕರ್ನಾಟಕ ಜಂಗಮ ಕ್ಷೇಮಾಭಿವೃದ್ಧಿ ಮಹಾಸಭಾ ವಿಜಯಪುರ ಜಿಲ್ಲಾ ಘಟಕದಿಂದ ನಗರದಲ್ಲಿ ಪ್ರತಿಭಟನಾ ರ್ಯಾಲಿ ನಡೆಸಿ ಜಿಲ್ಲಾಡಳಿತದ ಮೂಲಕ ಸರ್ಕಾರಕ್ಕೆ ಮನವಿ ಸಲ್ಲಿಸಲಾಯಿತು.
ಈ ವೇಳೆ ಮಹಾಸಭೆಯ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿದ್ಧರಾಮಯ್ಯ ಸಾವಳಗಿಮಠ ಮಾತನಾಡಿ, ಸಣ್ಣ ಕಾರಣದ ನೆಪವೊಡ್ಡಿ ಕರ್ನಾಟಕದಲ್ಲಿ ಜಂಗಮ ಜಾತಿಯನ್ನು ರಾಜ್ಯ ಸರಕಾರ ಯಾವದೇ ಜಾತಿಗಳ ಪ್ರವರ್ಗದಲ್ಲಿ ಸೇರಿಸದೇ ಅನ್ಯಾಯ ಮಾಡಲಾಗಿದೆ ಎಂದು ದೂರಿದರು.
ಜಂಗಮ ಸಮುದಾಯ 1921ರಲ್ಲಿ ದುರ್ಬಲ ವರ್ಗದಲ್ಲಿ ಇದ್ದ ಪಟ್ಟಿಯನ್ನೇ 1935ರ ಕೇಂದ್ರ ಸರ್ಕಾರದ ಪಟ್ಟಿಯಲ್ಲಿ ಪರಿಶಿಷ್ಟ ಜಾತಿ ಎಂದು ಉಪ ಬಂಧಿಸಿದೆ. ಸದರಿ ಪರಿಶಿಷ್ಟ ಜಾತಿ ಪಟ್ಟಿಯನ್ನು ಆಧರಿಸಿ 11-8-1950ರಲ್ಲಿ ರಚಿಸಲಾದ ಭಾರತ ಸಂವಿಧಾನ ಅಧಿ ನಿಯಮ 341ರ ಪ್ರಕಾರ ರಾಷ್ಟ್ರಪತಿಗಳು ವಂಶ ಪಾರಂಪರ್ಯ ಧಾರ್ಮಿಕ ಭಾಷಾ ವೃತ್ತಿಯಾದ ಕುಲ ಕಸುಬಿನ ಆಧಾರದ ಅಡಿಯಲ್ಲಿ ಬರುವ ಜಾತಿಗಳ ಪಟ್ಟಿಯಲ್ಲಿ ಪರಿಶಿಷ್ಟ ಜಾತಿಗಳ ಪಟ್ಟಿ ಎಂದು ಒಪ್ಪಿಕೊಂಡಿದೆ. ಇದನ್ನು ಆಧರಿಸಿ 1950 ಆದೇಶ 18-11-1950ರಂದು ಜಾರಿಗೊಳಿಸಿದೆ ಎಂದು ವಿವರಿಸಿದರು.
ಭಾಷಾವಾರು ರಾಜ್ಯಗಳ ಪುನಾರಚನೆ ಸಂದರ್ಭದಲ್ಲಿ ಹೈದರಾಬಾದ್ ರಾಜ್ಯದಲ್ಲಿದ್ದ ಕಲಬುರಗಿ, ಬೀದರ, ರಾಯಚೂರು ಜಿಲ್ಲೆಗಳನ್ನು ಅಂದಿನ ಮೈಸೂರು ರಾಜ್ಯಕ್ಕೆ ವರ್ಗಾಯಿಸಿ, ಈ ಜಲ್ಲೆಗಳಲ್ಲಿ ವಾಸಿಸುತ್ತಿರುವ ಜಂಗಮ ಸಮುದಾಯದ ಬೇಡ ಜಂಗಮರಿಗೆ ಜಿಲ್ಲಾ ಸಿಮಿತಗೊಳಿಸಿ ಕೇಂದ್ರ ಸರಕಾರ ಜಾರಿಗೊಳಿಸಿದೆ. ನಂತರ ವಿಧಿಸಿದ ಕ್ಷೇತ್ರ ನಿರ್ಭಂದನೆಯನ್ನು 1976ರಲ್ಲಿ ತೆಗೆದು ಹಾಕಿ 27-7-1977ರಿಂದ ಜಾರಿಗೆ ಬರುವಂತೆ ಕರ್ನಾಟಕ ರಾಜ್ಯಾದ್ಯಂತ ಬೇಡ ಜಂಗಮರು ವಾಸಿಸುತ್ತಾರೆ. ಇದು ಇಡಿ ರಾಜ್ಯದ ಬೇಡ ಜಂಗಮರು ಪರಿಶಿಷ್ಟ ಜಾತಿಯ ಎಲ್ಲ ಸೌಲಭ್ಯ ಪಡೆಯುವ ಅರ್ಹತೆಯ ತಿದ್ದುಪಡಿ ಆದೇಶ ಹೊರಡಿಸಿದೆ. ಸಂವಿಧಾನದ ಅನುಚ್ಛೇದದಲ್ಲಿ ಸೂಚಿಸಿದ ಜಾತಿಗಳ 101ರ ಪಟ್ಟಿಯಲ್ಲಿ ಕ್ರಮಾಂಕ 19ರಲ್ಲಿ ಬೇಡ ಜಂಗಮ ಜಾತಿ ಎಂದು ನಮೂದಾಗಿರುತ್ತದೆ ಎಂದು ವಿವರಿಸಿದರು.
ಜಂಗಮರೆಂದ ಕೂಡಲೇ ಲಿಂಗಾಯತರು ಅಥವಾ ವೀರಶೈವರೆಂದೆ ಅನೇಕರು ಭಾವಿಸುತ್ತಾರೆ. ಈ ತಿಳಿವಳಿಕೆ ಯಿಂದಾಗಲೇ ಜಂಗಮರು ಸಹ ತಮ್ಮ ಶಾಲೆಯ ದಾಖಲೆ ಮುಂತಾದವುಗಳಲ್ಲಿ ಜಾತಿ ಕಾಲಂದಲ್ಲಿ ಲಿಂಗಾಯತ ಅಥವಾ ವೀರಶೈವ ಜಂಗಮ ಎಂದು ಬರೆಯುವ ರೂಢಿಯಾಗಿದೆ. ಆದ ಕಾರಣ ಸರ್ಕಾರ ನಮ್ಮ ಬೇಡಿಕೆಗೆ ಸ್ಪಂದಿಸಬೇಕು ಎಂದು ಮನವಿ ಮಾಡಿದರು.
ಮಹಾಸಭೆ ಜಿಲ್ಲಾಧ್ಯಕ್ಷ ಸಂಜೀವ ಹಿರೇಮಠ ಮಾತನಾಡಿ, ಕರ್ನಾಟಕ ಉತ್ಛ ನ್ಯಾಯಾಲಯ ಗೀತಾ ಕುಲಕರ್ಣಿ ಪ್ರಕರಣದಲ್ಲಿ ವೀರಶೈವ ಲಿಂಗಾಯತ ಇದು ಜಾತಿ ಎ ಅಲ್ಲ ಅದು ಒಂದು ಪಂಥ ಎಂದು ತೀರ್ಪುಕೊಟ್ಟಿದೆ. ಆದರು ಸಹ ಕರ್ನಾಟಕ ಸರಕಾರ ಪ್ರವರ್ಗ 3ಬಿ ಯಲ್ಲಿ ಜಾತಿ ಪ್ರಮಾಣ ಪತ್ರ ಕೊಡುತ್ತ ಬಂದಿದೆ. ಅದು ಸಹ ನ್ಯಾಯಾಂಗ ನಿಂದನೆ ಎಂದು ತಿಳಿದುಕೊಂಡರು ಸಹಿತ ಇನ್ನೂವರೆಗೆ 3ಬಿಯನ್ನು ಮುಂದುವರಿಸಿಕೊಂಡು ಬಂದಿದೆ ಎಂದು ದೂರಿದರು.
ಬೇಡ ಜಂಗಮ ಸಮಾಜದ ನೀಲಕಂಠ ಮಠ, ಶಾಂತೇಶ ನಿಂಬರಗಿಮಠ, ಎಸ್.ಎಸ್. ರೂಗಿಮಠ, ಐ.ಬಿ. ಮಠ, ಸಿ.ಎನ್. ಹಿರೇಮಠ, ಬಿ.ಐ. ಹಿರೇಮಠ, ಷಡಕ್ಷರಿ ಹಿರೇಮಠ, ಸದಾಶಿವಯ್ಯ ಅರಕೇರಿಮಠ, ಘನಕುಮಾರ, ಮಲ್ಲಯ್ಯ ಹಿರೇಮಠ, ಸಂಗಮೇಶ ಹಿರೇಮಠ, ಶ್ರೀಕಾಂತ ಹಿರೇಮಠ, ವಿಶ್ವನಾಥ ಹಿರೇಮಠ, ರಾಚಯ್ಯ ಚೌಕಿಮಠ, ಕುಮಾರ ವಿಭೂತಿಮಠ, ಸಂಗಮೇಶ ಹಿರೇಮಠ, ದಾನಮ್ಮ ತೆಗ್ಗಳ್ಳಿ, ಶಾಂತಾ ಹಿರೇಮಠ ಇರಿದ್ದರು.