ಬೆಳಗಾವಿ: ಕಲ್ಯಾಣ ಕರ್ನಾಟಕ ಭಾಗದಲ್ಲಿ ಅತಿ ಹೆಚ್ಚು ಪ್ರಮಾಣದಲ್ಲಿ ಕುರುಬ ಸಮುದಾಯ ಇರುವ ಕ್ಷೇತ್ರಗಳಲ್ಲಿ ಕುರುಬ ಸಮುದಾಯದ ವ್ಯಕ್ತಿಗಳಿಗೆ ಕಾಂಗ್ರೆಸ್ ಟಿಕೆಟ್ ನೀಡಬೇಕೆಂದು ಒತ್ತಾಯಿಸಿ ಕಲ್ಯಾಣ ಕರ್ನಾಟಕ ಕುರುಬ ಸಮುದಾಯದ ಜಾಗೃತ ಸಮಿತಿ ಶುಕ್ರವಾರ ಕಾಂಗ್ರೆಸ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿತು.
ಬೆಳಗಾವಿಯಲ್ಲಿ ಚಳಿಗಾಲ ಅಧಿವೇಶನ ನಡೆಯುತ್ತಿರುವ ಹಿನ್ನೆಲೆಯಲ್ಲಿ ಕುರುಬ ಸಮಾಜದ ಜಾಗೃತ ಸಮಿತಿ ಅಧ್ಯಕ್ಷ ಹನುಮೇಶ ಕೊಡ್ಲಿ, ಕೆಪಿಸಿಸಿ ಮಾಜಿ ಕಾರ್ಯದರ್ಶಿ ಕೆ.ಕರಿಯಪ್ಪ ನೇತೃತ್ವದ ಕಲ್ಯಾಣ ಕರ್ನಾಟಕದ ಕುರುಬ ಸಮಾಜದ ನಿಯೋಗ ಕಾಂಗ್ರೆಸ್ ನಾಯಕರಿಗೆ ಮನವಿ ಸಲ್ಲಿಸಿತು.
ಕಲ್ಯಾಣ ಕರ್ನಾಟಕದ 41 ವಿಧಾನಸಭೆ ಕ್ಷೇತ್ರಗಳ ಪೈಕಿ 16 ಕ್ಷೇತ್ರಗಳಲ್ಲಿ ಕುರುಬ ಸಮಾಜದ ಸಂಖ್ಯೆ ಹೆಚ್ಚಿದೆ. 25 ರಿಂದ 40 ಸಾವಿರದವರೆಗೂ ಸಮಾಜದ ಜನ ಇರುವ ಕ್ಷೇತ್ರಗಳಲ್ಲಿ ಕಾಂಗ್ರೆಸ್ ಪಕ್ಷ ಮುಂದಿನ ಚುನಾವಣೆಯಲ್ಲಿ ಟಿಕೆಟ್ ನೀಡಬೇಕು. ಕಲ್ಯಾಣದ ಏಳು ಜಿಲ್ಲೆಯಲ್ಲಿ ಜಾತಿವಾರು ವಿವರ ಗಮನಿಸಬೇಕು. ಸಾಮಾಜಿಕ ನ್ಯಾಯ ಹಾಗೂ ಮೀಸಲಾತಿ ನಿಯಮದಡಿ ಹಿಂದುಳಿದ ಜನಾಂಗಕ್ಕೆ ನ್ಯಾಯ ಕಲ್ಪಿಸಬೇಕು.
ರಾಯಚೂರು ನಗರ, ಸಿಂಧನೂರು ವಿಧಾನಸಭೆ ಕ್ಷೇತ್ರ ಸೇರಿದಂತೆ ಬೀದರ, ಯಾದಗಿರಿ, ಬಳ್ಳಾರಿ, ಕೊಪ್ಪಳ, ವಿಜಯನಗರ, ಕಲಬುರಗಿ, ರಾಯಚೂರು ಕ್ಷೇತ್ರಗಳ ಜನಸಂಖ್ಯೆ ವಿವರ ಸಲ್ಲಿಸಿ, ಕಾಂಗ್ರೆಸ್ ಟಿಕೆಟ್ ನೀಡುವಂತೆ ಬೇಡಿಕೆ ಸಲ್ಲಿಸಲಾಗಿದೆ. ಕಾಂಗ್ರೆಸ್ ನಿಯೋಗದ ಮನವರಿಕೆ ಮನವಿಗೆ ಸ್ಪಂದಿಸಿದ ಕಾಂಗ್ರೆಸ್ ಪ್ರತಿಪಕ್ಷ ನಾಯಕ ಸಿದ್ದರಾಮಯ್ಯ, ಈ ಬಗ್ಗೆ ವರಿಷ್ಠರ ಗಮನಕ್ಕೆ ತರಲಾಗುವುದು ಎಂದಿದ್ದಾರೆ. ಕಲ್ಯಾಣ ಕರ್ನಾಟಕ ಕುರುಬ ಸಮಾಜದ ಜಾಗೃತ ಸಮಿತಿ ಪದಾಧಿ ಕಾರಿಗಳು ಇದ್ದರು.