ರಾಮನಗರ: ಅಂಗವಿಕಲ ಮಕ್ಕಳ ವಿಶೇಷ ಶಿಶು ಕೇಂದ್ರೀಕೃತ ಶೈಕ್ಷಣಿಕ ಯೋಜನೆಯಡಿ ನಡೆಯುತ್ತಿರುವ ವಿಶೇಷ ಶಾಲೆಗಳ ಸಿಬ್ಬಂದಿಗಳ 6 ತಿಂಗಳ ಗೌರವಧನವನ್ನು ತಕ್ಷಣ ಬಿಡುಗಡೆ ಮಾಡಬೇಕು ಹಾಗೂ ಕನಿಷ್ಠ ಗೌರವಧನವನ್ನು ದ್ವಿಗುಣಗೊಳಿಸಬೇಕು ಎಂದು ಬಿಜಿಎಸ್ ಅಂಧರ ಶಾಲೆ ಸಿಬ್ಬಂದಿ ಸರ್ಕಾರಕ್ಕೆ ಮಾಡಿಕೊಂಡ ಮನವಿಯನ್ನು ಜಿಲ್ಲಾಧಿಕಾರಿಗಳಿಗೆ ಸಲ್ಲಿಸಿದರು.
ಪ್ರಸಕ್ತ ಶೈಕ್ಷಣಿಕ ವರ್ಷದ ಜೂನ್‌ನಿಂದ ಸರ್ಕಾರ ತಮಗೆ ಅನುದಾನ ಬಿಡುಗಡೆ ಮಾಡದ ಕಾರಣ ವೇತನ ಸಿಗದೆ ಜೀವನಸಂಕಷ್ಟದಲ್ಲಿ ಸಿಲುಕಿದೆ.ಕೋವಿಡ್ ಸೋಂಕು ಕಾರಣ ಸರ್ಕಾರಿ ಮತ್ತು ಅನುದಾನಿತ ಶಾಲೆ ಗಳಿಗೂ ರಜೆ ಇದೆ. ಆದರೂ ಆ ಶಾಲೆಗಳ ಶಿಕ್ಷಕರಿಗೆ ವೇತನ ಸಿಗುತ್ತಿದೆ. ತಮಗೂ ಈ ವ್ಯವಸ್ಥೆ ವಿಸ್ತರಿಸಬೇಕೆಂದು ಮನವಿ ಮಾಡಿದ್ದಾರೆ. ವಿಶೇಷ ಚೇತನ ಮಕ್ಕಳ ಭವಿಷ್ಯರೂಪಿಸಲು ತಾವೆಲ್ಲ ಹೆಚ್ಚಿನ ಕಾಳಜಿ, ಶ್ರದ್ಧೆಯಿಂದ ದುಡಿಯುತ್ತಿದ್ದೇವೆ. ಕೋವಿಡ್‌ಕಾರಣ ಎಂದು ತಾವು ಸುಮ್ಮನೆ ಕೂರದೆ, ಮಕ್ಕಳ ಚಟುವಟಿಕೆ ಬಗ್ಗೆ ಅವರ ಪೋಷಕರಿಗೆ ನಿರಂತರ ಸಲಹೆ, ಸೂಚನೆ ನೀಡುತಿರುವುದಾಗಿ ಹೇಳಿದರು.
ತಮಗೆ ಗೌರವಧನ ಹೊರತುಪಡಿಸಿ ಇನ್ನಿತರ ಯಾವುದೇ ಭತ್ಯೆ, ಸೇವಾ ಭದ್ರತೆ ಸೌಲಭ್ಯಗಳು ಇಲ್ಲ. ಕನಿಷ್ಠ ವೇತನವೂ ಸಿಗದಿದ್ದರೆ ಜೀವನ ಸಾಗಿಸುವುದು ಹೇಗೆ ಎಂದು ಮನವಿಯಲ್ಲಿ ಸರ್ಕಾರದ ಗಮನ ಸೆಳೆಯಲಾಗಿದೆ.
ವೇತನ ಸಿಗದ ಕಾರಣ ಅನ್ಯದಾರಿ ಕಾಣದೆ ಸಿಬ್ಬಂದಿ ಕೆಲಸ ಬಿಟ್ಟರೆ ಶಾಲೆ ಪುನಃ ಆರಂಭ ವಾಗುವ ಸಂದರ್ಭದಲ್ಲಿ ಸಿಬ್ಬಂದಿ ಕೊರತೆಯಾದರೆ ಶಾಲೆ ಆರಂಭವಾಗುವುದು ಕಷ್ಟ ಸಾಧ್ಯ, ವಿಕಲ ಚೇತನ ಮಕ್ಕಳ ಶಿಕ್ಷಣಕ್ಕೆ ತೊಂದರೆಯಾಗಲಿದೆ ಎಂದು ತಿಳಿಸಿದ್ದಾರೆ.ಮಹಿಳಾ ಮತ್ತು ಮಕ್ಕಳ ಖಾತೆ ಸಚಿವರು, ವಿಕಲಚೇತನರ ಹಾಗೂ ಹಿರಿಯ ನಾಗರಿಕರ
ಸಬಲೀಕರಣ ಇಲಾಖೆ ನಿರ್ದೇಶಕರು, ಜಿಲ್ಲಾ ಅಂಗವಿಕಲರ ಕಲ್ಯಾಣಾಧಿಕಾರಿಗಳಿಗೆ ಮಾಡಿಕೊಂಡ ಮನವಿಯನ್ನು ಬಿಜಿಎಸ್ ಅಂಧರಶಾಲೆಯ ಸಿಬ್ಬಂದಿ ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾರಿಗೆ ಸಲ್ಲಿಸಿದರು.