Advertisement

ರಾಷ್ಟ್ರೀಯ ವಿಪತ್ತು ಘೋಷಣೆಗೆ ಆಗ್ರಹ

02:50 PM Aug 27, 2019 | Team Udayavani |

ರಾಯಚೂರು: ರಾಜ್ಯದಲ್ಲಿ ಪ್ರವಾಹದಿಂದ ಸಾಕಷ್ಟು ಹಾನಿಯಾಗಿದ್ದು, ಕೇಂದ್ರ ಸರ್ಕಾರ ಕೂಡಲೇ ರಾಷ್ಟ್ರೀಯ ವಿಪತ್ತು ಘೋಷಿಸಬೇಕು. ನೆರೆಯಿಂದ ಆಸ್ತಿ, ಪಾಸ್ತಿ ಕಳೆದುಕೊಂಡವರಿಗೆ ಸೂಕ್ತ ಪರಿಹಾರ ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ (ಕೋಡಿಹಳ್ಳಿ ಬಣ) ಕಾರ್ಯಕರ್ತರು ಸೋಮವಾರ ಪ್ರತಿಭಟನೆ ನಡೆಸಿದರು.

Advertisement

ನಗರದ ಬಸವೇಶ್ವರ ವೃತ್ತದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಪ್ರತಿಭಟನಾ ರ್ಯಾಲಿ ನಡೆಸಿದ ಪ್ರತಿಭಟನಾಕಾರರು ಬಳಿಕ ಸಹಾಯಕ ಆಯುಕ್ತರ ಮೂಲಕ ಮುಖ್ಯಮಂತ್ರಿಗೆ ಮನವಿ ಸಲ್ಲಿಸಿದರು. ಪ್ರವಾಹದಿಂದ ಲಕ್ಷಾಂತರ ಎಕರೆ ಬೆಳೆ ಹಾನಿಯಾಗಿದೆ. ರೈತರು ಅಕ್ಷರಶಃ ಸಂಕಷ್ಟಕ್ಕೆ ಸಿಲುಕಿದ್ದಾರೆ. ಆದರೆ, ಕೇಂದ್ರ ಸರ್ಕಾರ ಘೋಷಿಸಿದ ಪರಿಹಾರ ಹಣದಿಂದ ರೈತರ ಬದುಕು ಹಸನಾಗುವುದಿಲ್ಲ. ಹೀಗಾಗಿ ರಾಷ್ಟ್ರೀಯ ವಿಪತ್ತು ಘೋಷಿಸುವ ಮೂಲಕ ಹಾನಿ ಭರಿಸಲು ಕೇಂದ್ರ ಸರ್ಕಾರ ಮುಂದಾಗಲಿ ಎಂದು ಆಗ್ರಹಿಸಿದರು.

ಮಹಾರಾಷ್ಟ್ರದ ಕೋಯ್ನಾ, ರಾಜ್ಯದ ಆಲಮಟ್ಟಿ, ನಾರಾಯಣಪುರ ಜಲಾಶಯದಿಂದ ಮುನ್ಸೂಚನೆ ನೀಡದೇ ಲಕ್ಷಾಂತರ ಕ್ಯೂಸೆಕ್‌ ನೀರು ನದಿಗೆ ಹರಿಸಲಾಗಿದೆ. ಇದರಿಂದ ರೈತರ ಬೆಳೆಯೆಲ್ಲ ಹಾಳಾಗಿದೆ. ಜನ ಜಾನುವಾರು ಜೀವ ಕಳೆದುಕೊಂಡಿದ್ದು, ಅಪಾರ ಪ್ರಮಾಣದ ಹಾನಿ ಸಂಭವಿಸಿದೆ. ಜಲಾಶಯದ ಅಧಿಕಾರಿಗಳು ತಮಗೆ ಬೇಕಾದ ರೀತಿ ನಡೆದುಕೊಂಡರೆ ರೈತರು ಅತಂತ್ರ ಸ್ಥಿತಿಗೆ ಸಿಲುಕಬೇಕಾಗುತ್ತದೆ. ಹೀಗೆ ಮಾಹಿತಿ ನೀಡದೆ ನದಿಗೆ ನೀರು ಹರಿಸುವುದರಿಂದ ಉಂಟಾದ ಹಾನಿಗೆ ಸರ್ಕಾರವೇ ಹೊಣೆ ಹೊರಬೇಕು. ಈ ಅವಘಡಕ್ಕೆ ಕಾರಣರಾದವರ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಬೇಕು ಎಂದು ಆಗ್ರಹಿಸಿದರು.

ಮಾತಿನ ಚಕಮಕಿ: ಪ್ರತಿಭಟನೆ ವಿಚಾರ ತಿಳಿದ ಪೊಲೀಸರು ಜಿಲ್ಲಾಧಿಕಾರಿ ಕಚೇರಿ ಮುಂಭಾಗವೇ ಎರಡು ವಾಹನಗಳನ್ನು ಅಡ್ಡಗಟ್ಟಿದ್ದರು. ಈ ವೇಳೆ ಪ್ರತಿಭಟನಾಕಾರರು ನಾವು ಒಳಗೆ ಹೋಗಿ ಮನವಿ ನೀಡುವುದಾಗಿ ಪಟ್ಟು ಹಿಡಿದರು. ಅದಕ್ಕೆ ಆಸ್ಪದವಿಲ್ಲ ಎಂದು ಪೊಲೀಸರು ಹೇಳಿದಾಗ, ಈಚೆಗೆ ಸಂಘವೊಂದು ಹೋರಾಟ ನಡೆಸಿ ಮನವಿ ನೀಡಿದೆ. ನಮ್ಮನ್ನು ಯಾಕೆ ತಡೆಯುವಿರಿ ಎಂದು ಪ್ರತಿಭಟನಾಕಾರರು ವಾದಿಸಿದರು. ಈ ವೇಳೆ ಪೊಲೀಸರು ಪ್ರತಿಭಟನಾಕಾರರ ಮನವೊಲಿಸಿ ಕಚೇರಿ ಎದುರಿನ ಉದ್ಯಾನದಲ್ಲಿಗೆ ಅಧಿಕಾರಿಗಳು ಬಂದು ಮನವಿ ಸ್ವೀಕರಿಸುವರು ಎಂದು ತಿಳಿಸಿದರು. ಸಂಘದ ಜಿಲ್ಲಾಧ್ಯಕ್ಷ ಶರಣಪ್ಪ ಮರಳಿ ಸುಲ್ತಾನಪುರ, ಮಹಿಳಾ ಘಟಕ ಅಧ್ಯಕ್ಷೆ ಉಮಾದೇವಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಸಿ.ಎಚ್ ರವಿ, ಪದಾಧಿಕಾರಿಗಳಾದ ಮಲ್ಲಿಕಾರ್ಜುನರೆಡ್ಡಿ, ಕೆ.ವೈ. ಬಸವರಾಜ ನಾಯಕ, ರಂಗಪ್ಪ ನಾಯಕ, ರಾಮಯ್ಯ ಜವಳಗೇರಾ, ತಿಮ್ಮಣ್ಣ ಭೋವಿ, ಜಿ. ಕೃಷ್ಣ ಸೇರಿದಂತೆ ಅನೇಕ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next