ಬಾಗಲಕೋಟೆ: ಆಲಮಟ್ಟಿ ಜಲಾಶಯವನ್ನು ಈಗಿರುವ 519.60 ಮೀಟರ್‌ನಿಂದ 524.256 ಮೀಟರ್‌ಗೆ ಎತ್ತರಿಸಿದಾಗ ನಡುಗಡ್ಡೆಯಾಗುವ ನಗರದ ಪ್ರದೇಶ ಸ್ಥಳಾಂತರಕ್ಕೆ ಹಿಂದೆ ಸರ್ಕಾರ ಕ್ರಮ ಕೈಗೊಂಡಿತ್ತು. ಆದರೆ, ಈ ಪ್ರಕ್ರಿಯೆ ಸದ್ಯಕ್ಕೆ ಕೈಬಿಟ್ಟಿದ್ದು, ಕೂಡಲೇ ನಡುಗಡ್ಡೆ ಪ್ರದೇಶ ಸ್ಥಳಾಂತರಕ್ಕೆ ಅಗತ್ಯ ಕ್ರಮ ಕೈಗೊಳ್ಳಲು ನಗರದ ಪ್ರಮುಖರು ಒತ್ತಾಯಿಸಿದ್ದಾರೆ.
ಈಚೆಗೆ ನಗರಕ್ಕೆ ಆಗಮಿಸಿದ್ದ ಕೃಷ್ಣಾ ಭಾಗ್ಯ ಜಲ ನಿಗಮದ ವ್ಯವಸ್ಥಾಪಕ ನಿರ್ದೇಶಕ ವಿ.ಶಂಕರ ಅವರಿಗೆ ನಗರ ಯೋಜನಾ ಪ್ರಾಧಿಕಾರದ ಮಾಜಿ ಅಧ್ಯಕ್ಷ – ಉತ್ತರ ಕರ್ನಾಟಕ ಹೋರಾಟ ಸಮಿತಿಯ ಮುಖಂಡ ಎ.ಎ. ದಂಡಿಯಾ, ಬಿಟಿಡಿಎ ಮಾಜಿ ಸದಸ್ಯ ಜಿ.ಎಂ. ಟಂಕಸಾಲಿ, ಪ್ರಮುಖರಾದ ಸುರೇಂದ್ರ ಸಂಗಮ, ಇಸಾಕ ದಂಡಿಯಾ ಮುಂತಾದವರು ಲಿಖೀತ ಮನವಿ ಸಲ್ಲಿಸಿದರು.
ನಗರದ ವಾಡ್‌ರ್ ನಂ. 1, 2, 3, 6, 7 ಹಾಗೂ 9ರ ವ್ಯಾಪ್ತಿಯ ಸುಮಾರು 855 ಕಟ್ಟಡಗಳು, ನಡುಗಡ್ಡೆಯಾಗಲಿವೆ. ಈ ಪ್ರದೇಶ ಮುಳುಗಡೆ ವ್ಯಾಪ್ತಿಗೆ ಬರುವುದಿಲ್ಲ. ಆಲಮಟ್ಟಿ ಜಲಾಶಯ ಎತ್ತರಿಸಿದಾಗ ಇಲ್ಲಿ 855 ಮನೆಗಳೂ ನಡುಗಡ್ಡೆಯಾಗಿ, ನಗರದ ಸಂಪರ್ಕ ಕಳೆದುಕೊಳ್ಳಲಿವೆ. ಆದ್ದರಿಂದ ಹಿಂದೆ ಸರ್ಕಾರ, ಈ ಮನೆಗಳನ್ನು ಮುಳುಗಡೆ ಪ್ರದೇಶವೆಂದು ಘೋಷಿಸಿ, ಸಮೀಕ್ಷೆ ಕಾರ್ಯ ಆರಂಭಿಸಿತ್ತು. ಆದರೆ, ಈಗ ಅದನ್ನು ನಿಲ್ಲಿಸಲಾಗಿದ ಎಂದು ಕೆಬಿಜೆಎನ್‌ಎಲ್ ಎಂಡಿ ಗಮನಕ್ಕೆ ತಂದರು.
ಹಿಂದಿನ ಸರ್ಕಾರ, 855 ಮನೆಗಳ ಸರ್ವೆ ನಡೆಸಿ, ಬಳಿಕ ಸ್ವಾಧೀನ ಪ್ರಕ್ರಿಯೆ ಆರಂಭಿಸಿತ್ತು. ಈ ಕುರಿತು 855 ಮನೆಗಳ ಮಾಲಿಕರು, ಬಿಟಿಡಿಎಗೆ ಅಗತ್ಯ ದಾಖಲೆ ಸಲ್ಲಿಸಿದ್ದಾರೆ. ಆದರೂ, ಬಿಟಿಡಿಎ ಮುಂದಿನ ಕ್ರಮ ಕೈಗೊಳ್ಳದೇ ನಿರ್ಲಕ್ಷ್ಯ ವಹಿಸಿದೆ ಎಂದು ಆರೋಪಿಸಿದರು.
ಮನವಿ ಆಲಿಸಿದ ಕೆಬಿಜೆಎನ್‌ಎಲ್ ಎಂಡಿ ವಿ.ಶಂಕರ ಮಾತನಾಡಿ, ನಡುಗಡ್ಡೆಯಾಗುವ ಪ್ರದೇಶ ಹಾಗೂ ಇಲ್ಲಿನ ಮುಳುಗಡೆ ವ್ಯಾಪ್ತಿಯ ಪ್ರದೇಶಗಳಿಗೆ ಭೇಟಿ ನೀಡಲು ಪ್ರತ್ಯೇಕವಾಗಿ ಆಗಮಿಸುತ್ತೇನೆ. ಅಲ್ಲದೇ ನಡುಗಡ್ಡೆ ಪ್ರದೇಶದ ಸ್ಥಳಾಂತರ ಅಗತ್ಯ ಕ್ರಮ ಕೈಗೊಳ್ಳುವ ಭರವಸೆ ನೀಡಿದರು. ಬಿಟಿಡಿಎ ಮುಖ್ಯ ಇಂಜಿನಿಯರ್ ಅಶೋಕ ವಾಸನದ, ಎಇಇ ಮೋಹನ ಹಲಗತ್ತಿ ಉಪಸ್ಥಿತರಿದ್ದರು.