Advertisement

ರಾಗಿ ಖರೀದಿ ಪ್ರಮಾಣ ಏರಿಕೆಗೆ ಮನವಿ

05:40 PM Feb 25, 2020 | Suhan S |

ದೊಡ್ಡಬಳ್ಳಾಪುರ:  ರಾಗಿ ಖರೀದಿ ಕೇಂದ್ರಗಳಲ್ಲಿ ರೈತರಿಂದ ಪ್ರಸ್ತುತ ಖರೀದಿಸಲಾಗುತ್ತಿರುವ 10 ಕ್ವಿಂಟಲ್‌ ರಾಗಿ ಪ್ರಮಾಣವನ್ನು 15 ಕ್ವಿಂಟಲ್‌ಗೆ ಏರಿಸಬೇಕು. ಬೆಂಬಲ ಬೆಲೆಯಡಿಯಲ್ಲಿ ರೈತರಿಂದ ಖರೀದಿಸುತ್ತಿರುವ ರಾಗಿ ಬೆಳೆಗೆ ಸಂಬಂಧಿಸಿದಂತೆ ಸರ್ಕಾರ ನಿಗದಿಪಡಿಸಿರುವ ಮಾನದಂಡಗಳನ್ನು ಸಡಿಲಗೊಳಿಸಿ, ಖರೀದಿಯಲ್ಲಿನ ನ್ಯೂನ್ಯತೆಗಳನ್ನು ಸರಿಪಡಿಸಬೇಕು ಎಂದು ಇತ್ತೀಚೆಗೆ ನಡೆದ ವಿಧಾನಸಭಾ ಅಧಿವೇಶನದಲ್ಲಿ ಮುಖ್ಯಮಂತ್ರಿಗಳ ಗಮನಕ್ಕೆ ತರಲಾಗಿದ್ದು, ಮಾರ್ಚ್‌ 2ರಂದು ಇದಕ್ಕೆ ಉತ್ತರ ದೊರೆಯಲಿದೆ ಎಂದು ಶಾಸಕ ಟಿ. ವೆಂಕಟರಮಣಯ್ಯ ಹೇಳಿದರು.

Advertisement

ನಗರದ ಎಪಿಎಂಸಿ ಮಾರುಕಟ್ಟೆ ಆವರಣದಲ್ಲಿ ಜಿಲ್ಲಾಡಳಿತ, ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ವತಿಯಿಂದ ಆರಂಭಿಸಿರುವ ರಾಗಿ ಖರೀದಿ ಕೇಂದ್ರಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಕಳೆದ ತಿಂಗಳು ರಾಗಿ ಖರೀದಿ ಕೇಂದ್ರಗಳಲ್ಲಿ ಪಹಣಿ ತಪ್ಪು ನಮೂದು ಮೊದಲಾದ ನ್ಯೂನತೆಗಳ ಕುರಿತು ರೈತರು ಪ್ರತಿಭಟಿಸಿದ್ದರು.

ಈ ಬಗ್ಗೆ ಸಂಬಂಧಪಟ್ಟವರ ಗಮನಕ್ಕೆ ತಂದಿದ್ದು, ಇದು ರಾಜ್ಯಾದ್ಯಂತ ಗಮನ ಸೆಳೆದಿದೆ. ಈಗ ನ್ಯೂನತೆಗಳನ್ನು ಆದಷ್ಟು ಸರಿಪಡಿಸಲಾಗುತ್ತಿದೆ. ರೈತರು ಸಾಮಾನ್ಯವಾಗಿ ಎಕರೆಗೆ 15ರಿಂದ 20 ಕ್ವಿಂಟಲ್‌ ರಾಗಿ ಬೆಳೆಯುತ್ತಾರೆ. ಆದರೆ ಖರೀದಿ ಕೇಂದ್ರಗಳಲ್ಲಿ 10 ಕ್ವಿಂಟಲ್‌ ರಾಗಿ ಮಾತ್ರ ಖರೀದಿಸಲಾಗುತ್ತಿದ್ದು, ಗರಿಷ್ಠ 50 ಕ್ವಿಂಟಲ್‌ ಇದೆ. ಕೇಂದ್ರದಿಂದ ಬೆಂಬಲ ಬೆಲೆ ಖರೀದಿಯಾದರೆ ಪ್ರಮಾಣ ಹೆಚ್ಚಳವಾಗುವ ಸಾಧ್ಯತೆಯಿದ್ದು, ಈ ಬಗ್ಗೆ ಜಿಲ್ಲಾಧಿಕಾರಿಗೆ ಸೂಚನೆ ನೀಡಲಾಗುವುದು ಎಂದು ತಿಳಿಸಿದರು.

ತಾಲೂಕಿನಲ್ಲಿ 4300 ರೈತರು ಈಗಗಲೇ ನೋಂದಾಯಿಸಿಕೊಂಡಿದ್ದು, ರಾಗಿ ಖರೀದಿಗೆ ನೋಂದಾಯಿಸಲು ಫೆ.29ಕೊನೆಯ ದಿನವಾಗಿದ್ದು, ರೈತರು ಆದಷ್ಟೂ ಗುಣಮಟ್ಟದ ರಾಗಿ ನೀಡಬೇಕು. ಅಧಿಕಾರಿಗಳು ರೈತರನ್ನು ವಿನಾಕಾರಣ ಅಲೆದಾಡಿಸದೇ ನಿಯಮಗಳನ್ನು ಪಾಲಿಸಬೇಕಿದೆ ಎಂದರು.

ತಾಲೂಕಿನಲ್ಲಿ ಎತ್ತಿನಹೊಳೆ ಯೋಜನೆಗಾಗಿ ದೊಡ್ಡಬಳ್ಳಾಪುರ ಭಾಗದ ಸುಮಾರು 2,500 ಎಕರೆಗೆ ಭೂಮಿಗೆ ಸಂಬಂಧಿಸಿದ ರೈತರಿಗೆ ಕೂಡಲೇ ಪರಿಹಾರ ನೀಡಿ ಕಾಮಗಾರಿ ಪೂರ್ಣಗೊಳಿಸಲು ಸಹಕರಿಸಬೇಕು. ಬೆಂಗಳೂರಿನ ಒಳ ಚರಂಡಿ ನೀರನ್ನು ಸಂಸ್ಕರಿಸಿ ಕೆರೆಗಳಿಗೆ ಹಾಯಿಸುವ ಯೋಜನೆಯ ಮೂರನೇ ಹಂತವಾಗಿ ನಾಯಂಡಹಳ್ಳಿ ಸಂಸ್ಕರಣಾ ಕೇಂದ್ರದಿಂದ ನೆಲಮಂಗಲ ಮತ್ತು ದೊಡ್ಡಬಳ್ಳಾಪುರ ಭಾಗದ ಕೆರೆಗಳಿಗೆ ನೀರು ತುಂಬಿಸುವ ಯೋಜನೆಯನ್ನು ಬದಲಾಯಿಸಿ ಯಶವಂತಪುರ ಹಾಗೂ ದಾಬಸ್‌ ಪೇಟೆ ಭಾಗಕ್ಕೆ ಹಾಯಿಸುವ ಯೋಜನೆಗೆ ಮುಂದಾಗಿರುವ

Advertisement

ಸರ್ಕಾರದ ಕ್ರಮ ಬದಲಾಗಬೇಕು. ಜಿಲ್ಲಾ  ಸರ್ಕಾರಿ ಆಸ್ಪತ್ರೆಗೆ ಬಿಡುಗಡೆಗೊಳಿಸಲು ಉದ್ದೇಶಿಸಿರುವ 90 ಕೋಟಿ ಯೋಜನೆ ಅನುಮೋದನೆ ನೀಡುವ ಕುರಿತು ಸರ್ಕಾರದ ಗಮನಕ್ಕೆ ತರಲಾಗಿದೆ ಎಂದರು.

ರೈತ ಸಂಘದ ಜಿಲ್ಲಾಧ್ಯಕ್ಷ ಪ್ರಸನ್ನ ಮತನಾಡಿ, ನಮ್ಮ ತಾಲೂಕಿನಲ್ಲಿ ರಾಗಿಯಂತೆ ಜೋಳ ಹೆಚ್ಚಗಿ ಬೆಳೆಯುತ್ತಿದ್ದು, ಜೋಳ ಖರೀದಿ ಕೇಂದ್ರವನ್ನು ನಿರಂತರವಾಗಿ ತೆರೆಯಬೇಕು. ಸ್ವಾಮಿನಾಥನ್‌ ಆಯೋಗದ ಶಿಫಾರಸ್ಸಿನಂತೆ ಸರ್ಕಾರ ರೈತರಿಗೆ ಬೆಂಬಲ ಬೆಲೆ ಘೋಷಿಸಬೇಕು ಎಂದರು.

ಈ ಸಂದರ್ಭದಲ್ಲಿ ತಹಶೀಲ್ದಾರ್‌ ಟಿ.ಎಸ್‌. ಶಿವರಾಜ್‌, ಕೃಷಿ ಇಲಾಖೆಯ ಸಹಾಯಕ ನಿರ್ದೇಶಕ ಎಸ್‌.ಪಿ.ನಾರಾಯಣಸ್ವಾಮಿ, ಎಪಿಎಂಸಿ ಮಾಜಿ ಅಧ್ಯಕ್ಷ ತಿ.ರಂರರಾಜು, ರೈತ ಸಂಘದ ತಾಲೂಕು ಅಧ್ಯಕ್ಷ ಹನುಮೇಗೌಡ, ಮುಖಂಡರಾದ ಸತೀಶ್‌ ಸೇರಿದಂತೆ ಮತ್ತಿತರರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next