ಬೆಂಗಳೂರು: ಸಮಾಜ ಮತ್ತು ಸಮುದಾಯದ ಪ್ರತಿ ಚಿಂತನೆಯೇ ಅಭಿವೃದ್ಧಿಯ ಮೊದಲ ಹೆಜ್ಜೆ ಎಂದು ಪಶುಸಂಗೋಪನೆ ಸಚಿವ ಪ್ರಭು ಚೌಹಾಣ್ ಹೇಳಿದರು. ವಸಂತನಗರದ ಬಿ.ಆರ್ ಅಂಬೇಡ್ಕರ್ ಭವನದಲ್ಲಿ ಬಂಜಾರಾ ಪ್ರಗತಿ ಚಿಂತನಾ ಸಮಾವೇಶವನ್ನು ಉದ್ಘಾಟಿಸಿ ಅವರು ಮಾತನಾಡಿದರು.
ಕರ್ನಾಟಕ ರಾಜ್ಯ ಬಂಜಾರ ನೌಕರರ ಸಾಂಸ್ಕೃತಿಕ ಕ್ಷೇಮಾಭಿವೃದ್ಧಿ ಸಂಘ ಮತ್ತು ಬಂಜಾರ ಸಮುದಾಯ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ನಡೆದ ಪ್ರಗತಿ ಚಿನಂತನಾ ಸಮಾವೇಶದಲ್ಲಿ ಮಾತನಾಡಿ ರಾಜಕೀಯವಾಗಿ ಲಂಬಾಣಿ ಸಮುದಾಯ ಮುನ್ನಡೆಯುತ್ತಿರುವುದು ಅತ್ಯಂತ ಸಂತೋಷದ ವಿಷಯ ಎಂದು ಹೇಳಿದರು.
ಕರ್ನಾಟಕದಲ್ಲಿನ ತಾಂಡಾ ಅಭಿವೃದ್ಧಿ ನಿಗಮದ ಮಾದರಿಯಲ್ಲಿ ರಾಷ್ಟ್ರೀಯ ತಾಂಡಾ ಅಭಿವೃದ್ಧಿಗೆ ನಿಗಮದ ಅನುಷ್ಠಾನಕ್ಕೆ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರಿಗೆ ಮನವಿ ಮಾಡುವುದಾಗಿ ತಿಳಿಸಿದರು. ಮುಂದಿನ ದಿನಗಳಲ್ಲಿ ಇಲ್ಲಿನ ಬೆಳವಣಿಗೆಗಳನ್ನು ನೋಡಿಕೊಂಡು ರಾಷ್ಟ್ರ ಮಟ್ಟದಲ್ಲಿ ನಿಗಮದ ಅನುಷ್ಠಾನಕ್ಕೆ ಕೇಂದ್ರದ ಬಾಗಿಲು ಸಹ ತಟ್ಟಲು ಸಿದ್ಧರಿದ್ದೇವೆ ಎಂದು ಹೇಳಿದರು.
ಲಂಬಾಣಿ ಸಮುದಾಯದ ಸಂಸ್ಕೃತಿ ಮತ್ತು ಭಾಷೆಯನ್ನು ಕಾಪಾಡುವ ಅಗತ್ಯತೆ ಇಂದು ಎದುರಾಗಿದೆ. ಸರ್ಕಾರದ ಮಟ್ಟದಲ್ಲಿ ಲಂಬಾಣಿ ಸಮುದಾಯದ ಅಭಿವೃದ್ಧಿಗೆ ಲಂಬಾಣಿ ಸಮುದಾಯದ ಎಲ್ಲ ಶಾಸಕರು ಮತ್ತು ಸಚಿವರು ಪಕ್ಷಾತೀತವಾಗಿ ಪಣ ತೊಡಬೇಕಿದೆ ಎಂದು ಹೇಳಿದರು.
ಸಂಸದ ಡಾ. ಉಮೇಶ್ ಜಾಧವ್ ಮಾತನಾಡಿ 2020 ಫೆಬ್ರುವರಿ 15ಕ್ಕೆ ದೇಹಲಿಯಲ್ಲಿಯೂ ಸಹ ಲಂಬಾಣಿ ಸಮುದಾಯದ ಶಕ್ತಿ ಪ್ರದರ್ಶನಕ್ಕೆ ಕರೆ ನೀಡಿದರು. ಇಂದು ಲಂಬಾಣಿ ಸಮುದಾಯದಲ್ಲಿ 8 ಜನ ಶಾಸಕರು ಮತ್ತು ಒಬ್ಬರು ಪರಿಷತ್ ಸದಸ್ಯರಿದ್ದೇವೆ. ಸಮುದಾಯದ ವಿಷಯ ಬಂದರೆ ಪಕ್ಷಾತೀತವಾಗಿ ಶ್ರಮಿಸಲು ಸಿದ್ಧರಿದ್ದೇವೆ ಎಂದು ಹೇಳಿದರು.
ಕಾರ್ಯಕ್ರದಲ್ಲಿ ಸಮುದಾಯದ ಹಿರಿಯ ಮುಖಂಡರು ಮತ್ತು ಸಂಘದ ಪದಾಧಿಕಾರಿಗಳು ಹಾಜರಿದ್ದರು.