ಬಳ್ಕುಂಜೆ: ಬಳ್ಕುಂಜೆ ಗ್ರಾ.ಪಂ.ನ 2019-20ನೇ ಸಾಲಿನ ಪ್ರಥಮ ಹಂತದ ಗ್ರಾಮ ಸಭೆ ಪಂಚಾಯತ್ ಸಭಾಭವನದಲ್ಲಿ ಪಂಚಾಯತ್ ಅಧ್ಯಕ್ಷ ದಿನೇಶ್ ಪುತ್ರನ್ ಅಧ್ಯಕ್ಷತೆಯಲ್ಲಿ ಜರಗಿತು.
ಬಳ್ಕುಂಜೆಯಲ್ಲಿ ನಿವೇಶನ ರಹಿತರಿಗೆ ಇನ್ನೂ ನಿವೇಶನ ಹಂಚಿಕೆಯಾಗಿಲ್ಲ. ಐದು ವರ್ಷದ ಮೊದಲು ಈ ಬಗ್ಗೆ ತಯಾರಿ ನಡೆಸಲಾಗಿತ್ತು, ಆದರೆ ತಟಸ್ಥವಾಗಿದೆ ಯಾಕೆ ಎಂದು ಗ್ರಾಮಸ್ಥ ಗೋಪಾಲ ಭಂಡಾರಿ ಅವರ ಪ್ರಶ್ನೆಗೆ ಉತ್ತರಿಸಿದ ಪಂಚಾಯತ್ ಅಧ್ಯಕ್ಷ ದಿನೇಶ್ ಪುತ್ರನ್ ನಿವೇಶನ ಹಂಚಿಕೆಗೆ ಕೆಲವೊಂದು ತಾಂತ್ರಿಕ ಸಮಸ್ಯೆಯಿಂದ ತೊಂದರೆ ಯಾಗಿದೆ. ಗ್ರಾಮಕರಣಿಕರು ಹೊಸ ದಾಗಿ ಬಂದಿದ್ದಾರೆ. ಇದನ್ನು ಆದಷ್ಟು ಬೇಗ ಸರಿಪಡಿಸಲಾಗುವುದು ಎಂದರು.
ಬಳ್ಕುಂಜೆಮತದಾರರ ಪಟ್ಟಿ ವಿಭಾಗವಾಗಿದೆ ಒಂದೇ ಕಡೆಯವರು ಬೇರೆ ಬೇರೆ ಕಡೆಗಳಲ್ಲಿ ಮತದಾನ ಮಾಡುವಂತಾಗಿದೆ ಎಂದು ಗ್ರಾಮಸ್ಥ ನೆಲ್ಸನ್ ಲೋಬೋ ಸಮಸ್ಯೆ ತಿಳಿಸಿದಾಗ ಗ್ರಾಮಕರಣಿಕ ಸಂತೋಷ ಉತ್ತರಿಸಿ, ಸರಿಯಾದ ಗಡಿ ಗುರುತಿಸಿ ಮುಂದಿನ ಚುನಾವಣೆಯ ಮೊದಲು ಸರಿಪಡಿಸಲಾಗುವುದು ಎಂದರು. ಬಳ್ಕುಂಜೆಯಲ್ಲಿ ತಾತ್ಕಾಲಿಕ ಗ್ರಾಮಕರಣಿಕರು ಇರುವುದರಿಂದ ಜನರಿಗೆ ಸಮಸ್ಯೆ ಉಂಟಾಗುತ್ತಿದೆ ಎಂದು ನೆಲ್ಸನ್ ಲೋಬೋ ತಿಳಿಸಿದಾಗ ದಿನೇಶ್ ಪುತ್ರನ್ ಈ ಬಗ್ಗೆ ಮೇಲಧಿಕಾರಿಯವರಿಗೆ ತಿಳಿಸಲಾಗುವುದು ಎಂದರು.
ವಲಯ ಅರಣ್ಯಾಧಿಕಾರಿ ಚಿದಾನಂದ ಜಿ. ನೋಡಲ್ ಅಧಿಕಾರಿಯಾಗಿದ್ದರು. ಉಪಾಧ್ಯಕ್ಷೆ ಸುಮಿತ್ರಾ ಎಸ್. ಕೋಟ್ಯಾನ್, ಸದಸ್ಯರಾದ ಪ್ರಸಾದ್ ಶೆಟ್ಟಿ, ಮಮತಾ ಡಿ. ಪೂಂಜಾ, ಶಶಿಕಲಾ, ನವೀನ್ ಚಂದ್ರ ಶೆಟ್ಟಿ, ಭುವನೇಶ್ವರೀ, ವಿಜಯ ಚೌಟ, ಪ್ರಭಾಕರ ಶೆಟ್ಟಿ, ಜಯಲಕ್ಷ್ಮೀ ಕೆ., ಆನಂದ , ಗೀತಾ ನಾಯ್ಕ, ಪಂಚಾಯತ್ ರಾಜ್ ಎಂಜಿನಿಯರ್ ಪ್ರಶಾಂತ್ ಅಳ್ವ, ಪಶುವೈದ್ಯ ಕೆ.ಜಿ. ಮನೋಹರ್, ಗ್ರಾಮಕರಣಿಕ ಸಂತೋಷ್, ಸುಜಿತ್, ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಕಾತ್ಯಾಯನಿ, ಶಿಕ್ಷಕಿ ಮೇರಿ ಫಿಲೋಮಿನಾ ಪಿರೇರ, ಅಂಗನವಾಡಿ ಕಾರ್ಯಕರ್ತೆ ಪ್ರಮೀಳಾ, ಮಮತಾ, ನೇತ್ರಾವತಿ, ಸುಜಾತಾ, ಆಶಾ ಕಾರ್ಯಕರ್ತೆ ವಿಶಾಲಾಕ್ಷಿ, ವಸಂತಿ ಮೊದಲಾದವರು ಉಪಸ್ಥಿತರಿದ್ದರು.
ರಸ್ತೆ ಚರಂಡಿ ನಿರ್ಮಿಸಿ
ಕರ್ನಿರೆ ಶಾಲೆಯಿಂದ ಮುಗೇರಬೈಲು ಸಂಪರ್ಕ ಕಲ್ಪಿಸುವ ರಸ್ತೆಯ ಚರಂಡಿ ಸರಿಪಡಿಸಲು ಎಂದು ಪೌಲ್ ಆಗ್ರಹಿಸಿದಾಗ ಅಧ್ಯಕ್ಷ ದಿನೇಶ್ ಪುತ್ರನ್ ರಸ್ತೆ ಚರಂಡಿ ನಿರ್ಮಿಸಲು ತಕರಾರು ಇದೆ. ಈ ವಿವಾದ ಕೋರ್ಟ್‌ನಲ್ಲಿರುವುದರಿಂದ ಸರಿಪಡಿಸಲು ಸಾಧ್ಯವಿಲ್ಲ. ಆ ಜಾಗ ಬಿಟ್ಟು ಕೊಟ್ಟ ಸ್ಥಳದಲ್ಲಿ ಮುಂಭಾಗದಲ್ಲಿ ಸರಿಪಡಿಸುವ ಎಂದರು.