ರಾಯಚೂರು: ಸತತ ಬರದಿಂದ ನಷ್ಟಕ್ಕೆ ಸಿಲುಕಿರುವ ಜಿಲ್ಲೆಯ ರೈತರ ಸಂಪೂರ್ಣ ಸಾಲಮನ್ನಾ ಮಾಡುವ ಮೂಲಕ ರಾಜ್ಯ ಸರ್ಕಾರ ನೆರವಿಗೆ ಬರಬೇಕು ಎಂದು ಆಗ್ರಹಿಸಿ ಕರ್ನಾಟಕ ರಾಜ್ಯ ರೈತ ಸಂಘ ಹಾಗೂ ಹಸಿರು ಸೇನೆ ಕಾರ್ಯಕರ್ತರು ಶುಕ್ರವಾರ ಪ್ರತಿಭಟನೆ ನಡೆಸಿದರು.
ನಗರದ ಡಾ| ಬಿ.ಆರ್. ಅಂಬೇಡ್ಕರ್ ವೃತ್ತದಲ್ಲಿ ಜಮಾಯಿಸಿದ ಸಂಘದ ಸದಸ್ಯರು ಸ್ಥಳದಲ್ಲಿಯೇ ಕುಳಿತು ಧರಣಿ ನಡೆಸಿದರು. ಇದರಿಂದ ಸಂಚಾರಕ್ಕೆ ಕೆಲಕಾಲ ವ್ಯತ್ಯಯವಾಯಿತು. ಬಳಿಕ ಡಿಸಿ ಕಚೇರಿಗೆ ತೆರಳಿ ಡಿಸಿ ಮೂಲಕ ಸಿಎಂಗೆ ಮನವಿ ಸಲ್ಲಿಸಿದರು. ಹಿಂದಿನ ಸರ್ಕಾರ ಸಾಲ ಮನ್ನಾ ಮಾಡಿದೆ ಎಂದು ತಿಳಿಸಿದೆಯಾದರೂ ಯಾರಿಗೆ ಎಷ್ಟು ಆಗಿದೆ ಎಂಬ ಮಾಹಿತಿಯೇ ಇಲ್ಲ. ಸಾಕಷ್ಟು ರೈತರಿಗೆ ಈ ಸೌಲಭ್ಯವೇ ಸಿಕ್ಕಿಲ್ಲ. ಕಳೆದ ವರ್ಷದಿಂದ ಜಿಲ್ಲೆಯಲ್ಲಿ ಸಮರ್ಪಕ ಮಳೆ ಇಲ್ಲ. ರೈತರ ಕೃಷಿ ಚಟುವಟಿಕೆಗಳಿಗಾಗಿ ಸಹಕಾರಿ ಬ್ಯಾಂಕ್ ಹಾಗೂ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಬೆಳೆ ಸಾಲ ಮಾಡಿಕೊಂಡಿದ್ದು. ಸತತ ನಷ್ಟದಿಂದ ಸಾಲ ಮರುಪಾವತಿ ಮಾಡಲು ಆಗದೆ ಸಮಸ್ಯೆಗೆ ಸಿಲುಕಿದ್ದಾರೆ ಎಂದು ತಿಳಿಸಿದರು.
ಸಾಕಷ್ಟು ರೈತರು ಫಸಲ್ ಬಿಮಾ ಮಾಡಿಸಿದ್ದರೂ ಪರಿಹಾರ ಹಣ ಮಾತ್ರ ಬಂದಿಲ್ಲ. ಸತತ ಬರಕ್ಕೆ ತುತ್ತಾಗಿರುವ ಜಿಲ್ಲೆ ಎಂದು ಸರ್ಕಾರಗಳು ಒಂದೆಡೆ ಘೋಷಿಸಿದರೆ ಮತ್ತೂಂದೆಡೆ ವಿಮೆಗೆ ಅರ್ಹವಾಗಿಲ್ಲ ಎಂದು ಅಧಿಕಾರಿಗಳು ಹೇಳುತ್ತಾರೆ. ನಷ್ಟಕ್ಕೀಡಾದ ರೈತರಿಗೆ ಕೂಡಲೇ ವಿಮೆ ಹಣ ಬಿಡುಗಡೆ ಮಾಡಿಸಬೇಕು. ಗ್ರಾಮೀಣ ಪ್ರದೇಶದಲ್ಲಿ ದಿನದ 24 ಗಂಟೆ ತ್ರಿಪೇಸ್ ವಿದ್ಯುತ್ ಸೌಲಭ್ಯ ಕಲ್ಪಿಸಬೇಕು ಎಂದು ಆಗ್ರಹಿಸಿದರು.
ನಗರಕ್ಕೆ ಪೂರೈಸುವ ಕುಡಿಯುವ ನೀರನ್ನು ಕೆಲ ಖಾಸಗಿ ಕಾರ್ಖಾನೆಗಳಿಗೆ ಹರಿಸುತ್ತಿದ್ದು, ಕೂಡಲೇ ಸ್ಥಗಿತಗೊಳಿಸಬೇಕು. ವೈಟಿಪಿಎಸ್ ಭೂ ಸಂತ್ರಸ್ತ ಕುಟುಂಬ ಸದಸ್ಯರಿಗೆ ಉದ್ಯೋಗ ನೀಡಬೇಕು. ಯರಗೇರಾ ಹೋಬಳಿ ವ್ಯಾಪ್ತಿಯ ಎಲ್ಲ ಗ್ರಾಮಗಳ ಕೆರೆಗಳಿಗೆ ಕಾಲುವೆ ಮೂಲಕ ನೀರು ಹರಿಸಬೇಕು. ಇದೇ ಭಾಗದಲ್ಲಿ ಬರುವ ಗ್ರಾಮಗಳಿಗೆ ಏತ ನೀರಾವರಿ ಮಂಜೂರು ಮಾಡಬೇಕು ಎಂದು ಒತ್ತಾಯಿಸಿದರು.
ಸಂಘದ ಜಿಲ್ಲಾಧ್ಯಕ್ಷ ವಾಸುದೇವ ಮೇಟಿ, ವಿವಿಧ ಜಿಲ್ಲಾಧ್ಯಕ್ಷೆ ಜಯಶ್ರೀ, ಚುಣಪ್ಪ ಪೂಜಾರಿ, ಗಂಗಾಧರ ಮೇಟಿ, ಚಂದ್ರಗೌಡ ಪಾಟೀಲ. ರಾಘವೇಂದ್ರ ನಾಯಕ, ಲಿಂಗಪ್ಪ ಧಾರವಾಡ, ಬಸವರಾಜ ಗದಗ ಪಾಲ್ಗೊಂಡಿದ್ದರು.