Advertisement

ಅರಣ್ಯಭೂಮಿ ಮಂಜೂರಿಗೆ ಆಗ್ರಹ

02:34 PM Oct 15, 2019 | Suhan S |

ಮುಂಡಗೋಡ: ಬೆಳೆಹಾನಿ ಪರಿಹಾರ, ಬೆಳೆಸಾಲ, ಬೆಳೆವಿಮೆ, ಸರ್ವೋಚ್ಛ ನ್ಯಾಯಾಲಯದ ನಿರ್ದೇಶನದಂತೆ ಅರಣ್ಯ ಭೂಮಿ ಮಂಜೂರಿಗೆ ಆಗ್ರಹಿಸಿ ತಾಲೂಕು ಮಟ್ಟದ ಅರಣ್ಯ ಅತಿಕ್ರಮಣದಾರರು ಬೃಹತ್‌ ಪ್ರತಿಭಟನಾ ಮೆರವಣಿಗೆ ನಡೆಸಿ ತಹಶೀಲ್ದಾರ್‌ ಗೆ ಮನವಿ ಸಲ್ಲಿಸಿದರು.

Advertisement

ಜಿಲ್ಲಾ ಅರಣ್ಯಭೂಮಿ ಹಕ್ಕು ಹೋರಾಟಗಾರರ ವೇದಿಕೆ ಅಧ್ಯಕ್ಷ ಎ.ರವೀಂದ್ರ ನಾಯ್ಕರ ಮುಂದಾಳತ್ವದಲ್ಲಿ ಪ್ರತಿಭಟನೆ ನಡೆಯಿತು. ಲೋಕೋಪಯೋಗಿ ಇಲಾಖೆ ಪ್ರವಾಸಿ ಮಂದಿರದಿಂದ ಹೊರಟ ಮೆರವಣಿಗೆ ಪ್ರಮುಖ ಬೀದಿಗಳ ಮುಖಾಂತರ ತಹಶೀಲ್ದಾರ್‌ ಕಚೇರಿಗೆ ತೆರಳಿ ಮನವಿ ಸಲ್ಲಿಸಿತು.

ಎರಡು ಸಾವಿರ ಅತಿಕ್ರಮಣದಾರರು ಭಾಗವಹಿಸಿದ್ದರು. ಅತಿವೃಷ್ಟಿ ಪರಿಹಾರ ಪಡೆದುಕೊಳ್ಳುವ ರೈತರ ಜೊತೆ ಅತಿಕ್ರಮಣ ರೈತರನ್ನು ಸೇರಿಸಿ ಪ್ಯಾಕೇಜ್‌ ವ್ಯವಸ್ಥೆಯಲ್ಲಿ ಪರಿಹಾರ ಬಿಡುಗಡೆಗೊಳಿಸಬೇಕು, ಜಿಲ್ಲೆಯಲ್ಲಿ 3120ಹೆ. ಭತ್ತ, 735ಹೆ. ಗೋವಿನಜೋಳ, 167ಹೆ. ಕಬ್ಬು ಹಾಗೂ ಹತ್ತಿ 23ಹೆ., ಅಡಕೆ 317ಹೆ, ಬಾಳೆ 29 ಹೆ, ತೆಂಗು 33ಹೆ. ಶುಂಠಿ101 ಹೆ. ಅತಿಕ್ರಮಿತ ಭೂಮಿಯಲ್ಲಿ ಬೆಳೆ ಹಾಳಾಗಿದೆ. ಇದರಿಂದ ಅತಿಕ್ರಮಣ ರೈತರು ತೀವ್ರ ತೊಂದರೆ ಅನುಭವಿಸುತ್ತಿದ್ದು ಕೂಡಲೆ ಅವರಿಗೆ ಪರಿಹಾರ ನೀಡಬೇಕು.

ಅರಣ್ಯ ಪ್ರದೇಶದಲ್ಲಿ ಅನಾದಿಕಾಲದಿಂದಲು ಭೂಮಿ ಸಾಗುವಳಿ ಮಾಡಿಕೊಂಡಿದ್ದು ಅರಣ್ಯ ಹಕ್ಕು ಕಾಯ್ದೆ ಅಡಿ ಜಿಪಿಎಸ್‌ ಆಗಿ ಮಂಜೂರಿ ವ್ಯಾಪ್ತಿಯಲ್ಲಿ ಇರುವಂತಹ ಸಾಗುವಳಿ ಅತಿಕೃಮಣದಾರರಿಗೆ ಬೆಳೆಹಾನಿ ಪರಿಹಾರ ತಕ್ಷಣ ನೀಡಬೇಕು. ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಅರಣ್ಯಭೂಮಿ ಮಂಜೂರಿಗೆ ಸೂಕ್ತ ಕ್ರಮ ಕೈಗೊಳ್ಳಬೇಕು.  ಆರ್ಥಿಕ ವರ್ಷದಲ್ಲಿ ಅರಣ್ಯ ಅತಿಕ್ರಮಣದಾರರು ಬೆಳೆಸಾಲ ಪಡೆದು ವ್ಯವಸಾಯಕ್ಕೆ ಸಂಬಂಧಿಸಿ ಸಹಕಾರಿ ಸಂಘದ ಅವಲಂಬಿಸಿರುವುದರಿಂದ ಪ್ರಸಕ್ತ ವರ್ಷದಿಂದ ಸಹಕಾರಿ ಸಂಘಗಳಲ್ಲಿ ಬೆಳೆಸಾಲ ನಿರ್ಬಂಧಿಸಿರುವುದು ರೈತರಿಗೆ ತೊಂದರೆಯಾಗಿದೆ.

ಈ ವರ್ಷದ ಅತಿವೃಷ್ಟಿಯಿಂದಾಗಿ ಅರಣ್ಯ ಅತಿಕ್ರಮಣದಾರರು ತಮ್ಮ ಮನೆ, ಹೊಲ-ಗದ್ದೆಗಳನ್ನು ಕಳೆದುಕೊಂಡು ಬೆಳೆ ನಷ್ಟದಿಂದ ಆರ್ಥಿಕ ಸಂಕಷ್ಟದಲ್ಲಿದ್ದು ಎರಡೂವರೆ ತಿಂಗಳು ಕಳೆದರೂ ಸರ್ಕಾರದಿಂದ ಯಾವುದೇ ಆರ್ಥಿಕ ನೆರವು, ಪರಿಹಾರ ದೊರಕದೆ ಇರುವುದು ಸರ್ಕಾರದ ವೈಫಲ್ಯ ಎದ್ದು ತೋರುತ್ತಿದೆ. ಕೂಡಲೆ ಅತಿಕ್ರಮಣ ರೈತರಿಗೆ ಪರಿಹಾರ ಬಿಡುಗಡೆ ಮಾಡುವಂತೆ ತಾವು ಸರಕಾರಕ್ಕೆ ಸೂಚನೆ ನೀಡಬೇಕು ಎಂದು ಮನವಿಯಲ್ಲಿ ಆಗ್ರಹಿಸಿದ್ದಾರೆ.

Advertisement

ನ.10ರೋಳಗೆ ಸಮಸ್ಯೆ ಬಗೆ ಹರಿಸದಿದ್ದರೆ ಬೃಹತ್‌ ಪ್ರತಿಭಟನೆ ನಡೆಸಲಾಗುವುದು ಎಂದು ಎಚ್ಚರಿಸಿದ್ದಾರೆ. ಅರಣ್ಯ ಹಕ್ಕು ಕಾಯಿದೆ ಅಡಿಯಲ್ಲಿ ಮಂಜೂರಿಗೆ ಸಂಬಂದಪಟ್ಟಂತೆ ಪುನರ್‌ ಪರಿಶೀಲನಾ ವಿಧಾನವನ್ನು ಸರ್ವೋಚ್ಚ ನ್ಯಾಯಾಲಯದ ನಿರ್ದೇಶನದಂತೆ ಕೇಂದ್ರ ಬುಡಕಟ್ಟು ಮಂತ್ರಾಲಯ ಸೂಚಿಸಿದ ಮಾರ್ಗಸೂಚಿಯಂತೆ ನಿರ್ದಿಷ್ಟ ಕಾಲದೊಳಗೆ ಮಂಜೂರಿ ಪ್ರಕ್ರಿಯೆ ಜರುಗಿಸುವಂತೆ ಸರಕಾರಕ್ಕೆ ಸೂಚಿಸಬೇಕು. ಅನಾದಿ ಕಾಲದಿಂದಲೂ ಅರಣ್ಯಭೂಮಿ ಸಾಗುವಳಿ, ವಾಸ್ತವ್ಯಕ್ಕೆ ಅವಲಂಬಿತರಾಗಿರುವ ತಾಲೂಕಿನ ಅರಣ್ಯ ಅತಿಕ್ರಮಣದಾರರ ಸಮಸ್ಯೆಗಳನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಿ ಇನ್ನಿತರರಿಗೆ ನೀಡುವ ಪರಿಹಾರದ ಮಾದರಿಯಲ್ಲಿಯೇ ಪ್ಯಾಕೇಜ್‌ ವ್ಯವಸ್ಥೆಯಲ್ಲಿಯೆ ಪರಿಹಾರ ನೀಡಬೇಕೆಂದು ಆಗ್ರಹಿಸಿದ್ದಾರೆ.

ಶೇಖಯ್ಯ ಹಿರೇಮಠ, ಸಾಧಿಕ್‌ ಪಠಾಣ, ರಾಮಣ್ಣ ವಡ್ಡರ, ಸೋಮಣ್ಣ ಉಗ್ನಿಕೇರಿ, ರಾಯಪ್ಪ ಕುಡ್ಡಿಕೇರಿ, ಈರಪ್ಪ ದುರ್ಗಮುರ್ಗಿ, ವೀರಭದ್ರಪ್ಪ ಗಳಗಿ, ಸೋಮಸಿಂಗ್‌ ಶಿಗ್ಗಟ್ಟಿ ಸೇರಿದಂತೆ ಮುಂತಾದವರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next