Advertisement

ಹೆಗಲತ್ತಿ ಸಂತ್ರಸ್ತರಿಗೆ ಸೌಲಭ್ಯಕ್ಕೆ ಆಗ್ರಹ

04:05 PM Aug 09, 2020 | Suhan S |

ಶಿವಮೊಗ್ಗ/ ತೀರ್ಥಹಳ್ಳಿ: ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿಯಲ್ಲಿ ಗುಡ್ಡ ಕುಸಿದು, ಫಸಲು ನೀಡುತ್ತಿದ್ದ ತೋಟ ಹಾಗೂ ಜಮೀನು ಕಳೆದುಕೊಂಡ ಭೂ ಸಂತ್ರಸ್ತರಿಗೆ ಸರ್ಕಾರದ ವಿವಿಧ ಇಲಾಖೆಗಳ ಹಲವು ಯೋಜನೆಗಳಡಿ ಅಗತ್ಯ ಸೌಲಭ್ಯ ಒದಗಿಸಿ, ಅಗತ್ಯ ಕ್ರಮ ಕೈಗೊಳ್ಳುವಂತೆ ಗ್ರಾಮೀಣಾಭಿವೃದ್ಧಿ, ಪಂಚಾಯತ್‌ ರಾಜ್‌ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್‌. ಈಶ್ವರಪ್ಪ ಅವರು ಜಿಲ್ಲಾಧಿಕಾರಿಗಳಿಗೆ ಸೂಚಿಸಿದರು.

Advertisement

ತೀರ್ಥಹಳ್ಳಿ ತಾಲೂಕಿನ ಹೆಗಲತ್ತಿ ಗ್ರಾಮದಲ್ಲಿ ಗುಡ್ಡ ಕುಸಿದ ಪ್ರದೇಶಕ್ಕೆ ತೀರ್ಥಹಳ್ಳಿ ಶಾಸಕ ಆರಗ ಜ್ಞಾನೇಂದ್ರ ಸೇರಿದಂತೆ ಜಿಲ್ಲಾ ಮಟ್ಟದ ಅಧಿಕಾರಿಗಳೊಂದಿಗೆ ಭೇಟಿ ನೀಡಿ, ವಾಸ್ತವ ಸ್ಥಿತಿಗತಿಗಳನ್ನು ಗಮನಿಸಿ, 9ಜನ ಭೂಸಂತ್ರಸ್ತರಿಗೆ ಅಗತ್ಯ ನೆರವು ಒದಗಿಸಲಾಗುವುದು. ರೈತರು ಯಾವುದೇ ಆತಂಕ ಪಡುವ ಅಗತ್ಯವಿಲ್ಲ ಎಂದರು. ಪ್ರಸ್ತುತ ಗುಡ್ಡಕುಸಿತದಿಂದಾಗಿ ಮಣ್ಣಿನಿಂದ ಆವೃತವಾಗಿರುವ ಜಮೀನಿನಲ್ಲಿನ ಮಣ್ಣನ್ನು ತೆರವುಗೊಳಿಸಿ, ನರೇಗಾ ಯೋಜನೆಯಡಿ ಹೊಂಡ ಹೊಡೆದು, ಗಿಡ ನೆಟ್ಟು ತೋಟ ಮಾಡಿಕೊಳ್ಳಲು ಸಹಕರಿಸುವುದಾಗಿ ತಿಳಿಸಿದ ಅವರು, ಕಳೆದ ಸಾಲಿನಲ್ಲಿ ಅಲ್ಪ ಪ್ರಮಾಣದ ಆರ್ಥಿಕ ನೆರವನ್ನು ಒದಗಿಸಲಾಗಿದೆ. ಆದರೂ ಎಡೆಬಿಡದೆ ಸುರಿಯುತ್ತಿದ್ದ ಮಳೆಯಿಂದಾಗಿ ಅದು ಸಾಧ್ಯವಾಗಿರಲಿಲ್ಲ. ಆದ್ದರಿಂದ ಪ್ರಸಕ್ತ ಸಾಲಿನಲ್ಲಿ ಭೂ ಸಂತ್ರಸ್ತರಿಗೆ ನೆರವು ಒದಗಿಸುವುದಾಗಿ ತಿಳಿಸಿದರು. ಭೂ ಕುಸಿತಗೊಂಡ ಪ್ರದೇಶದಲ್ಲಿ ರೈತರ ಜಮೀನಿನಲ್ಲಿ ಹರಿವ ಮಳೆಯ ನೀರನ್ನು ಪರಿವರ್ತಿಸಲು ಚಾನಲ್‌ನ್ನು ನಿರ್ಮಿಸಲು ಕೂಡ ಉದ್ದೇಶಿಸಲಾಗಿದೆ. ಅತಿ ಹೆಚ್ಚು ಮಳೆಯಾಗುತ್ತಿರುವ ಹಿನ್ನೆಲೆಯಲ್ಲಿ ರಾಜ್ಯ ಸರ್ಕಾರ ಜಿಲ್ಲೆಯನ್ನು ರೆಡ್‌ ಅಲರ್ಟ್‌ ಆಗಿ ಘೋಷಿಸಿದ್ದು, ಸಂತ್ರಸ್ತರಿಗೆ ಅಗತ್ಯ ನೆರವನ್ನು ಒದಗಿಸುವುದಾಗಿ ಮುಖ್ಯಮಂತ್ರಿಗಳು ತಿಳಿಸಿದ್ದಾರೆ.

ಮಳೆಯಿಂದ ಮನೆ ನಾಶಗೊಂಡಿರುವ ಕುಟುಂಬಗಳಿಗೆ ತಕ್ಷಣದ ಕ್ರಮವಾಗಿ ರೂ.10,000/-ಗಳನ್ನು ನೀಡುವಂತೆ ಈಗಾಗಲೇ ಸೂಚಿಸಲಾಗಿದೆ. ಅಲ್ಲದೆ ಪೂರ್ಣ ಹಾನಿಗೊಂಡ ಮನೆಗಳ ಮಾಲೀಕರಿಗೆ 5ಲಕ್ಷ ರೂ. ನೀಡಲಾಗುವುದು. ಅದರ ಮೊದಲ ಕಂತಿನ ಹಣ ಒಂದು ಲಕ್ಷ ರೂ. ಗಳನ್ನು ಕೂಡಲೇ ಬಿಡುಗಡೆ ಮಾಡುವಂತೆಯೂ ಸೂಚಿಸಲಾಗಿದೆ ಎಂದರು.

ಶಾಸಕ ಆರಗ ಜ್ಞಾನೇಂದ್ರ ಮಾತನಾಡಿ, ಕೋರಿಕೆಯ ಮೇರೆಗೆ ನೊಂದ ರೈತರ ನೆರವಿಗೆ ಧಾವಿಸಿರುವ ಸಚಿವರ ಕಾಳಜಿಗೆ ರೈತರ ಪರವಾಗಿ ಅಭಿನಂದಿಸುವುದಾಗಿ ತಿಳಿಸಿರು. ಈವರೆಗೆ ನೊಂದ ರೈತರ ನೆಮ್ಮದಿಯ ಬದುಕಿಗೆ ಆಸರೆ ಒದಗಿಸಲು ಸಚಿವರು ಸಮ್ಮತಿಸಿರುವುದು ಸಮಾಧಾನ ತಂದಿದೆ ಎಂದರು. ಜಿಲ್ಲಾಧಿಕಾರಿ ಕೆ.ಬಿ. ಶಿವಕುಮಾರ್‌, ಜಿಪಂ ಮುಖ್ಯ ಕಾರ್ಯದರ್ಶಿ ಎಂ.ಎಲ್‌. ವೈಶಾಲಿ, ಉಪ ವಿಭಾಗಾಧಿಕಾರಿ ಟಿ.ವಿ. ಪ್ರಕಾಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next