Advertisement

ಪಬ್ಲಿಕ್‌ ಶಾಲೆಗಳಿಗೆ ಸೌಲಭ್ಯಗಳ ಒದಗಿಸಲು ಮನವಿ

01:10 PM Jun 30, 2019 | Suhan S |

ಕೋಲಾರ: ತಾಲೂಕಿನ 14 ಸಾವಿರ ಸರ್ಕಾರಿ ಶಾಲಾ ಮಕ್ಕಳಿಗೆ 83 ಸಾವಿರ ಉಚಿತ ನೋಟ್ ಪುಸ್ತಕ, ಪರೀಕ್ಷಾ ಪ್ಯಾಡ್‌ ನೀಡಿದ ಎಪ್ಸನ್‌ ಸಂಸ್ಥೆ, ಕರ್ನಾಟಕ ಪಬ್ಲಿಕ್‌ ಶಾಲೆಗಳ ಅಭಿವೃದ್ಧಿಗೆ ಸಹಕಾರ ನೀಡುವಂತೆ ಜಿಪಂ ಸಿಇಒ ಜಿ.ಜಗದೀಶ್‌ ಮನವಿ ಮಾಡಿದರು.

Advertisement

ತಾಲೂಕಿನ ವೇಮಗಲ್ನ ಮಾದರಿ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಎಪ್ಸನ್‌ ಇಂಡಿಯಾ ಲಿಮಿಟೆಡ್‌ ಕಂಪನಿಯಿಂದ ಶಿಕ್ಷಕರ ಗೆಳೆಯರ ಬಳಗದ ಆಶ್ರಯದಲ್ಲಿ ಸರ್ಕಾರಿ ಶಾಲಾ ಮಕ್ಕಳಿಗೆ ನೋಟ್ ಪುಸ್ತಕ ವಿತರಿಸುವ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದರು.

ಸರ್ಕಾರಿ ಶಾಲೆಗಳಲ್ಲೂ ಗುಣಮಟ್ಟದ ಆಂಗ್ಲ ಮಾಧ್ಯಮ ಶಿಕ್ಷಣ ನೀಡುವ ಸರ್ಕಾರದ ಬಹು ನಿರೀಕ್ಷಿತ ಕೆಪಿಎಸ್‌ ಶಾಲೆಗಳಿಗೆ ಉತ್ತಮ ದಾಖಲಾತಿಯಾಗುತ್ತಿದೆ ಎಂದ ಅವರು, ಸರ್ಕಾರ 30 ಸೀಟು ನಿಗದಿ ಮಾಡಿದ್ದರೆ ಅಲ್ಲಿ ದಾಖಲಾತಿ 90 ಮೀರುತ್ತಿದೆ ಎಂದರು.

ಸಲಕರಣೆ ಕೊಡಿ: ಈ ಕೆಪಿಎಸ್‌ ಶಾಲೆಗಳ ಹೆಚ್ಚುವರಿ ಮಕ್ಕಳಿಗೆ ಅಗತ್ಯ ಮೂಲಸೌಲಭ್ಯಗಳಾದ ಶೂ, ಸಮವಸ್ತ್ರ, ಪುಸ್ತಕ, ಆಟೋಪಕರಣ ಮತ್ತಿತರ ಸಲಕರಣೆಗಳನ್ನು ಒದಗಿಸಿ ಮಾದರಿ ಶಾಲೆಗಳಾಗಿಸಿ ಎಂದು ಎಪ್ಸನ್‌ ಕಂಪನಿಯ ಸೀನಿಯರ್‌ ಮ್ಯಾನೇಜರ್‌ ಸ್ಯಾಮ್ಯೂಯಲ್ ನವನೀತ್‌ ಅವರಿಗೆ ಸಲಹೆ ನೀಡಿದರು. ಕಂಪನಿಯ ಮಾನವ ಸಂಪನ್ಮೂಲ ವಿಭಾಗದ ವ್ಯವಸ್ಥಾಪಕ ರಾಜೇಂದ್ರ ಕುಮಾರ್‌ ಸಿಂಗ್‌, ಉಚಿತ ನೋಟ್ಪುಸ್ತಕಗಳನ್ನು ಹಂಚುವುದರೊಂದಿಗೆ ಸರ್ಕಾರಿ ಶಾಲೆಗಳ ಭೌತಿಕ ಅಭಿವೃದ್ಧಿಗೂ ನೆರವಾಗಲು ಕಂಪನಿ ಸಿದ್ಧವಿದೆ ಎಂದು ಭರವಸೆ ನೀಡಿದರು.

ನೆರವಿಗೆ ಬದ್ಧ: ಕಂಪನಿಯ ಹಿರಿಯ ವ್ಯವಸ್ಥಾಪಕ ಸ್ಯಾಮ್ಯೂಯಲ್ ನವನೀತ್‌, ಕಂಪನಿ ತನ್ನ ಸಾಮಾಜಿಕ ಹೊಣೆಯಡಿ ಈ ಕಾರ್ಯ ಮಾಡುತ್ತಿದ್ದು, ಶೈಕ್ಷಣಿಕ ಪ್ರಗತಿಗೆ ಒತ್ತು ನೀಡಬೇಕೆಂಬುದೇ ನಮ್ಮ ಧ್ಯೇಯವಾಗಿದೆ, ಇದರ ಸದುಪಯೋಗವಾದರೆ ಮತ್ತಷ್ಟು ನೆರವಿಗೆ ಬದ್ಧ ಎಂದು ತಿಳಿಸಿದರು.

Advertisement

ಶಿಕ್ಷಕ ಗೆಳೆಯರ ಬಳಗದ ಕಾರ್ಯದರ್ಶಿ ವೀರಣ್ಣಗೌಡ, ತಾಲೂಕಿನ 21 ಸರ್ಕಾರಿ ಪ್ರೌಢಶಾಲೆಗಳಿಗೆ ತಲಾ 4.40 ಲಕ್ಷ ರೂ. ವೆಚ್ಚದಲ್ಲಿ ಸ್ಮಾರ್ಟ್‌ ಕ್ಲಾಸ್‌ ಸೌಲಭ್ಯ ನೀಡಲು ಎಪ್ಸನ್‌ ಕಂಪನಿಗೆ ಪ್ರಸ್ತಾವನೆ ಸಲ್ಲಿಸಲಾಗಿದ್ದು, ಪ್ರಾಯೋಗಿಕವಾಗಿ ಮೊದಲು ಐದು ಶಾಲೆಗಳಲ್ಲಿ ಆರಂಭಿಸಲು ಒಪ್ಪಿಗೆ ಸಿಕ್ಕಿದೆ ಎಂದರು.

ಕಾರ್ಯಕ್ರಮದಲ್ಲಿ ಎಪ್ಸನ್‌ ಕಂಪನಿಯ ಆಡಳಿತ ವಿಭಾಗದ ಮುಖ್ಯಸ್ಥ ವಿಜಯ್‌ಗೋವಿಂದ್‌, ಇಸಿಒ ಆರ್‌.ಶ್ರೀನಿವಾಸನ್‌, ಶಿಕ್ಷಕರ ಗೆಳೆಯರ ಬಳಗದ ಅಧ್ಯಕ್ಷ ನಾರಾಯಣಸ್ವಾಮಿ, ಖಜಾಂಚಿ ಚಂದ್ರಪ್ಪ, ವೆಂಕಟಾಚಲಪತಿಗೌಡ, ಶಾಲೆಯ ಎಸ್‌ಡಿಎಂಸಿ ಅಧ್ಯಕ್ಷ ಮಂಜುನಾಥ್‌, ಮುಖ್ಯ ಶಿಕ್ಷಕರ ಸಂಘದ ಅಧ್ಯಕ್ಷ ಜಿ.ಶ್ರೀನಿವಾಸ್‌, ಮುಖ್ಯ ಶಿಕ್ಷಕ ಆರ್‌.ಸದಾನಂದ್‌ ಮತ್ತಿತರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next