ಮೊಳಕಾಲ್ಮೂರು: ತಾಲೂಕಿನ ನೇರ‌್ಲಹಳ್ಳಿ ಗ್ರಾಮ ಪಂಚಾಯತ್ ವ್ಯಾಪ್ತಿಯ ಓದ್ನೋಬಯ್ಯನಹಟ್ಟಿ ಗ್ರಾಮಕ್ಕೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸಬೇಕೆಂದು ಆಗ್ರಹಿಸಿ ಗ್ರಾಮಸ್ಥರು ಪ್ರತಿಭಟನೆ ನಡೆಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಗ್ರಾಮದ ಮುಖಂಡ ತಿಪ್ಪೇಸ್ವಾಮಿ, ಗ್ರಾಮಸ್ಥರಿಗೆ ಕುಡಿಯುವ ನೀರಿಲ್ಲದೆ ತೋಟ ಮತ್ತು ಜಮೀನುಗಳಿಗೆ ಅಲೆದಾಡುವಂತಾಗಿದೆ. ಗ್ರಾಮದ ವ್ಯಾಪ್ತಿಯಲ್ಲಿ ಕುಡಿಯುವ ನೀರಿಗಾಗಿ ಕೊಳವೆಬಾವಿ ಕೊರೆಸಿ 8-9 ತಿಂಗಳಾದರೂ ಪಂಪ್-ಮೋಟಾರ್ ಇಳಿಸಿಲ್ಲ. ಗ್ರಾಮದ ಜನರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸುವಲ್ಲಿ ಗ್ರಾಮ ಪಂಚಾಯತ್ ದವರು ನಿರ್ಲಕ್ಷé ತಾಳಿದ್ದಾರೆ ಎಂದು ಆರೋಪಿಸಿದರು.
ಕಳೆದ 8 ತಿಂಗಳ ಹಿಂದೆ ಸುಮಾರು 3 ಕೊಳವೆಬಾವಿಗಳನ್ನು ಕೊರೆಸಲಾಗಿದೆ. ಕೇವಲ ಒಂದು ಕೊಳವೆಬಾವಿಗೆ ಮೋಟಾರ್ ಅಳವಡಿಸಿ ನೀರಿನ ಸೌಲಭ್ಯ ಕಲ್ಪಿಸಲಾಗಿತ್ತು. ಉಳಿದ ಎರಡು ಕೊಳವೆಬಾವಿಗಳಿಗೆ ಇದುವರೆಗೂ ಯಾವುದೇ ಪಂಪ್ ಮತ್ತು ಮೋಟಾರ್ ಅಳವಡಿಸಿಲ್ಲ. ಖಾಸಗಿ ಮೋಟಾರ್ ಅಳಡಿಸಿದ ಕೊಳವೆಬಾವಿಗೆ ವಿದ್ಯುತ್ ಸಂಪರ್ಕದ ಕೇಬಲ್ ನೆಲಕ್ಕೆ ತಾಕಿಕೊಂಡು ಹೋಗಿದೆ. ಇದರಿಂದ ಜನಸಾಮಾನ್ಯರು ಮತ್ತು ಜಾನುವಾರುಗಳು ಪ್ರಾಣಾಪಾಯದ ಭೀತಿ ಎದುರಿಸುವಂತಾಗಿದೆ ಎಂದು ಆತಂಕ ವ್ಯಕ್ತಪಡಿಸಿದರು.
ತಾತ್ಕಾಲಿಕವಾಗಿ ಗ್ರಾಮದ ರೈತರೊಬ್ಬರಿಂದ ಉಚಿತವಾಗಿ ಪಡೆದ ಮೋಟಾರ್ ಮುಂದುವರಿಸಿದ್ದಾರೆ. ರೈತನಿಂದ ಪಡೆದ ಮೋಟಾರ್‌ಗೆ ಹಣ ನೀಡದೆ ಸುಳ್ಳು ಬಿಲ್ ಸೃಷ್ಟಿಸಿ ಸರ್ಕಾರಕ್ಕೆ ವಂಚಿಸಿದ್ದಾರೆಂಬುದು ಬೆಳಕಿಗೆ ಬಂದಿದೆ. ಸುಳ್ಳು ಬಿಲ್ ಸೃಷ್ಟಿಯಲ್ಲಿ ಅಧಿಕಾರಿಗಳು ಮತ್ತು ಪ್ರಭಾವಿ ನಾಯಕರೂ ಶಾಮೀಲಾಗಿದ್ದಾರೆ. ಸುಳ್ಳು ಭರವಸೆಗಳನ್ನು ನೀಡುತ್ತಾ ಗ್ರಾಮಸ್ಥರಿಗೆ ಕುಡಿಯುವ ನೀರಿನ ಸೌಲಭ್ಯ ಕಲ್ಪಿಸದೆ ಕಾಲಹರಣ ಮಾಡುತ್ತಿದ್ದಾರೆ ಎಂದುನ ದೂರಿದರು.
ರೈತನಿಂದ ಪಡೆದ ಮೋಟಾರ್ ಸುಟ್ಟು ಹೋಗಿ ಹಲವಾರು ದಿನಗಳಾದರೂ ಗ್ರಾಪಂನವರು ಗಮನ ನೀಡಿಲ್ಲ. ಕುಡಿಯುವ ನೀರಿನ ಸಮಸ್ಯೆ ನಿವಾರಿಸುವಂತೆ ಗ್ರಾಪಂ ಪಿಡಿಒ ಅವರಲ್ಲಿ ಮನವಿ ಮಾಡಿದರೆ ಉದ್ಧಟತನದಿಂದ ವರ್ತಿಸಿದ್ದಾರೆ. ಕುಡಿಯುವ ನೀರಿನ ಸಮಸ್ಯೆ ನನ್ನ ವ್ಯಾಪ್ತಿಗೆ ಬರುವುದಿಲ್ಲ, ಯಾರಿಗೆ ಬೇಓ ಅವರಿಗೆ ಅವರಿಗೆ ಹೇಳಿಕೊಳ್ಳಿ ಎಂದು ಸಬೂಬು ಹೇಳುತ್ತಾರೆ. ಅಂತಹ ಬೇಜವಾಬ್ದಾರಿ ಪಿಡಿಒ ನಮಗೆ ಬೇಕಾಗಿಲ್ಲ. ಕೂಡಲೇ ವರ್ಗಾವಣೆ ಮಾಡಬೇಕು. ಸಮರ್ಪಕವಾಗಿ ಕುಡಿಯುವ ನೀರು ಪೂರೈಕೆ ಮಾಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಗ್ರಾಮಸ್ಥರಾದ ಚಂದ್ರಣ್ಣ, ಪ್ರಹ್ಲಾದ, ಅಜ್ಜಣ್ಣ, ದೊಡ್ಡಪಾಪಯ್ಯ, ನಾಗವೇಣಿ, ಮಮತಾ, ಓಬಮ್ಮ, ರಂಜಿತಾ, ಸಣ್ಣಬೋರಮ್ಮ, ನಾಗಮ್ಮ, ಗಂಗಮ್ಮ ಹಾಗೂ ಗ್ರಾಮಸ್ಥರು ಭಾಗವಹಿಸಿದ್ದರು.