ಕಲಬುರಗಿ: ಅತಿವೃಷ್ಟಿಯಿಂದ ಕಲಬುರಗಿ ಸೇರಿದಂತೆ ಕಲ್ಯಾಣ ಕರ್ನಾಟಕ ಜಿಲ್ಲೆಗಳಲ್ಲಿ ತೊಗರಿ ಹಾಗೂ ಇತರ ಬೆಳೆಗಳಿಗೆ ಸಾಕಷ್ಟು ಹಾನಿಯಾಗಿದೆ. ಇದರಿಂದ ಸಂಕಷ್ಟಕ್ಕೆ ಸಿಲುಕಿರುವ ರೈತರಿಗೆ ಕೂಡಲೇ ಪರಿಹಾರ ವಿತರಿಸಲು ಮತ್ತು ತೊಗರಿ ಮಂಡಳಿ ಸದೃಢಗೊಳಿಸಲು 250 ಕೋಟಿ ರೂ. ವಿಶೇಷ ಪ್ಯಾಕೇಜ್ ಘೋಷಿಸಬೇಕು ಎಂದು ಆಗ್ರಹಿಸಿ ಕರ್ನಾಟಕ ಪ್ರಾಂತ ರೈತ ಸಂಘದ ನೇತೃತ್ವದಲ್ಲಿ ಪ್ರತಿಭಟನೆ ನಡೆಸಲಾಯಿತು.
ನಗರದ ಸರ್ದಾರ ವಲ್ಲಭಭಾಯಿ ಪಟೇಲ್ ವೃತ್ತದಿಂದ ಮೆರವಣಿಗೆ ಮೂಲಕ ಜಿಲ್ಲಾಧಿಕಾರಿ ಕಚೇರಿಗೆ ಆಗಮಿಸಿದ ಪ್ರತಿಭಟನಾಕಾರರು, ತೊಂದರೆಯಲ್ಲಿರುವ ರೈತರು ಮತ್ತು ಕೂಲಿಕಾರ್ಮಿಕರ ನೆರವಿಗೆ ಬಾರಬೇಕಿದ್ದ ಸರ್ಕಾರಗಳು ಚುನಾವಣೆಗಳನ್ನು ಮಾಡುವತ್ತ ಮಾತ್ರ ಗಮನ ಹರಿಸುತ್ತಿದೆ . ಜಿಲ್ಲೆಯ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ರೈತರು ಬೆಳೆದ ಬೆಳೆಗಳು ಅತಿವೃಷ್ಟಿಯಿಂದ ಹಾಳಾಗಿದ್ದು, ಕೈಗೆ ಬಂದ ತುತ್ತು ಬಾಯಿಗೆ ಬರದಂತಾಗಿದೆ. ರೈತರ ಸಂಕಷ್ಟಕ್ಕೆ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಸ್ಪಂದಿಸುತ್ತಿಲ್ಲ ಎಂದು ಟೀಕಿಸಿದರು.
ಬೆಳೆ ನಷ್ಟ ಅನುಭವಿಸಿರುವ ರೈತರಿಗೆ ಪ್ರತಿ ಎಕರೆಗೆ 25 ಸಾವಿರ ರೂ. ಪರಿಹಾರ ನೀಡಬೇಕು. ಸಾಲ ಮನ್ನಾ ಮಾಡಬೇಕು. ಹೊಸ ಸಾಲ ನೀಡಲು ಕ್ರಮ ಕೈಗೊಳ್ಳಬೇಕು. ತೊಗರಿ ಮಂಡಳಿಗೆ ಬಲ ತುಂಬುವ ಕೆಲಸ ಮಾಡಬೇಕು. ನೀರಾವರಿ ರೈತರಿಗೆ 8 ಗಂಟೆಗಳ ಕಾಲ ವಿದ್ಯುತ್ ಪೂರೈಕೆ ಮಾಡಬೇಕೆಂದು ಆಗ್ರಹಿಸಿದರು.
ಬ್ಯಾಂಕ್‌ಗಳು ರೈತರ ಪರಿಹಾರದ ಹಣ ಸರಳವಾಗಿ ಕೊಡಲು ಮುಂದಾಗಬೇಕು. ನರೇಗಾ ಯೋಜನೆಯಡಿ ಹೆಚ್ಚಿನ ಕೆಲಸಗಳನ್ನು ಆರಂಭಿಸಿ, ಕೂಲಿ ಕೆಲಸ ನೀಡಬೇಕು. ಗಡಿಕೇಶ್ವಾರ ಸೇರಿ ಸುತ್ತಮುತ್ತಲಿನ ಗ್ರಾಮದಲ್ಲಿ ಕೂಡಲೇ ಪರಿಹಾರ ಕೆಲಸ ಆರಂಭಿಸಲು 5 ಕೋಟಿ ರೂ. ಪ್ಯಾಕೇಜ್ ಘೋಷಿಸಬೇಕೆಂದು ಒತ್ತಾಯಿಸಿದರು.
ಬಡವರಿಗೆ ಮನೆಗಳನ್ನು ಮಂಜೂರು ಮಾಡಬೇಕು. ಕೃಷಿಕರ ಸಮಸ್ಯೆಗಳನ್ನು ಚರ್ಚಿಸಬೇಕು. ಜಾನುವಾರು ಹತ್ಯೆ ನಿಷೇಧ ಕಾಯ್ದೆ ರದ್ದು ಮಾಡಬೇಕು. ಪೋಲೀಸ್ ಸಿಬ್ಬಂದಿ ವಸತಿ ಗೃಹಗಳು ಸೋರುತ್ತಿದ್ದು ದುರಸ್ತಿ ಮಾಡಬೇಕು. ಎಸ್‌ಬಿಐ ಖಾಸಗೀಕರಣ ಕೈ ಬಿಡಬೇಕು ಎಂದು ಡಿಸಿಗೆ ಮನವಿ ಸಲ್ಲಿಸಲಾಯಿತು.
ಕರ್ನಾಟಕ ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಶರಣಬಸಪ್ಪ ಮಮಶೆಟ್ಟಿ, ಉಪಾಧ್ಯಕ್ಷೆ ಗೌರಮ್ಮ ಪಾಟೀಲ, ಕಾರ್ಯದರ್ಶಿ ಪಾಂಡುರಂಗ ಮಾವಿನಕರ್, ಮುಖಂಡರಾದ ಎಂ.ಬಿ.ಸಜ್ಜನ್, ಸುಭಾಷ ಜೇವರ್ಗಿ, ಅಲ್ತಾಫ್ ಹುಸೇನ್ ಇನಾಮದಾರ, ರೇವಣ ಸಿದ್ದಪ್ಪ ಕಲಬುರಗಿ, ಜಾವೇದ್ ಹುಸೇನ್, ಸಿದ್ಧರಾಮ ಹರವಾಳ, ಸಾಯಿಬಣ್ಣ ಗುಡುಬಾ, ರಾಯಪ್ಪ ಶಹಾಬಾದ ಪಾಲ್ಗೊಂಡಿದ್ದರು.