ನವಲಗುಂದ: ತಾಲೂಕಿನ ಆರೇಕುರಹಟ್ಟಿ ಗ್ರಾಮಕ್ಕೆ ಪ್ರತ್ಯೇಕ ಗ್ರಾಪಂ ಹಾಗೂ ಕುಡಿವ ನೀರಿನ ಕೆರೆಗೆ ಬರುವ ಕೋಡಿ ಸ್ವಚ್ಛತೆಗೆ ಆಗ್ರಹಿಸಿ ಗ್ರಾಮದ ಮುಖಂಡ ಎಚ್.ಕೆ. ಲಕ್ಕಣ್ಣವರ ತಹಶೀಲ್ದಾರ ಕಚೇರಿಗೆ ಮನವಿ ಸಲ್ಲಿಸಿದ್ದಾರೆ.
ಈ ಸಂಬಂಧ 2009ರಿಂದ ಗ್ರಾಮಸ್ಥರು ಕಚೇರಿಗಳಿಗೆ ಅಲೆದಾಡಿದರೂ ಈವರೆಗೂ ಯಾವುದೇ ಪ್ರಯೋಜನವಾಗಿಲ್ಲ. ಹೀಗಾಗಿ ಒಂದು ವಾರದ ಒಳಗಾಗಿ ಈ ಬೇಡಿಕೆಗಳನ್ನು ಈಡೇರಿಸದೆ ಹೋದರೆ ಹುಬ್ಬಳ್ಳಿ-ವಿಜಯಪುರ ರಾಷ್ಟ್ರೀಯ ಹೆದ್ದಾರಿ ಬಂದ್ ಮಾಡಿ ನಿರಂತರ ಧರಣಿ ಸತ್ಯಾಗ್ರಹ ಆರಂಭಿಸುವುದಾಗಿ ತಿಳಿಸಲಾಗಿದೆ.
ಗ್ರಾಮಸ್ಥರು ಈಗಾಗಲೇ ಜಿಪಂ ತಾಪಂ, ಎಪಿಎಂಸಿ ಹಾಗೂ ನಾಲ್ಕು ಗ್ರಾಪಂ ಚುನಾವಣೆಯನ್ನು ಬಹಿಷ್ಕರಿಸಿದರೂ ಅಧಿ ಕಾರಿಗಳು ಮತ್ತು ಜನಪತ್ರಿನಿಧಿಗಳು ಎಚ್ಚೆತ್ತು ಗ್ರಾಮದ ಅಭಿವೃದ್ಧಿಗೆ ಮುಂದಾಗಬೇಕಿತ್ತು.
ಆಕಸ್ಮಿಕವಾಗಿ ಕಳೆದ ಒಂದು ವರ್ಷದ ಹಿಂದೆ ಗ್ರಾಮಕ್ಕೆ ಭೇಟಿ ನೀಡಿದ್ದ ಜಿಲ್ಲಾಧಿಕಾರಿ ಬಿ.ಕೆ. ಬೊಮ್ಮನಹಳ್ಳಿ ಅವರು ಕಲುಷಿತಗೊಂಡ ಕೆರೆ ಕೋಡಿಯನ್ನು ಕೂಡಲೇ ಎನ್ ಆರ್‌ಜಿ ಯೋಜನೆಯಲ್ಲಿ ಸ್ವಚ್ಛಗೊಳಿಸಲು ತಾಪಂ ಇಒ ಬಿ.ಎಸ್. ಮೂಗನೂರಮಠ ಅವರಿಗೆ ಸೂಚಿಸಿದ್ದರು.
ಆದರೆ ಈವರೆಗೆ ಯಾವುದೇ ಪ್ರತಿಕ್ರಿಯೆ ದೊರಕಿಲ್ಲ. ಹೀಗಾಗಿ ಉಗ್ರ ಸ್ವರೂಪದ ಹೋರಾಟ ಅನಿವಾರ್ಯವಾಗಿದೆ ಎಂದು ಮನವಿಯಲ್ಲಿ ತಿಳಿಸಿದ್ದಾರೆ.