Advertisement

ಪಾಲಿಕೆ ಖಾಲಿ ಹುದ್ದೆಗಳ ನೇಮಕಕ್ಕೆ ಆಗ್ರಹ

12:34 AM Mar 04, 2020 | Lakshmi GovindaRaj |

ಬೆಂಗಳೂರು: ಪಾಲಿಕೆಯ ನೌಕರರಿಗೆ ಮುಂಬಡ್ತಿ, ಖಾಲಿ ಹುದ್ದೆಗಳಿಗೆ ಸಿಬ್ಬಂದಿ ನೇಮಕ ಹಾಗೂ ಆರೋಗ್ಯ ಕಾರ್ಡ್‌ ಸೇರಿದಂತೆ ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ಬಿಬಿಎಂಪಿ ಕಚೇರಿ ಮುಂದೆ ಪ್ರತಿಭಟನೆ ನಡೆಸಿದರು.

Advertisement

ಪ್ರತಿಭಟನೆಯನ್ನು ಉದ್ದೇಶಿಸಿ ಮಾತನಾಡಿದ ಬಿಬಿಎಂಪಿ ಅಧಿಕಾರಿಗಳು ಮತ್ತು ನೌಕರರ ಕ್ಷೇಮಾಭಿವೃದ್ಧಿ ಸಂಘದ ಅಧ್ಯಕ್ಷ ಎ.ಅಮೃತ್‌ರಾಜ್‌, ಬಿಬಿಎಂಪಿಯ ನಾಲ್ಕನೇ ದರ್ಜೆಯ ನೌಕರರಿಗೆ ವೃಂದ ಮತ್ತು ನೇಮಕಾತಿ ನಿಯಮಾವಳಿ ಪ್ರಕಾರ ಹಾಗೂ ಅರ್ಹ ಇಲಾಖೆ ಪರೀಕ್ಷೆಯಲ್ಲಿ ಉತ್ತೀರ್ಣರಾದವರಿಗೆ ಕಂದಾಯ ವಸೂಲಿಗಾರರು ಮತ್ತು ದ್ವಿತೀಯ ದರ್ಜೆ ಗುಮಾಸ್ತರಾಗಿ ಮುಂಬಡ್ತಿ ನೀಡಬೇಕು.

ಕಂದಾಯ ವಸೂಲಿಗಾರರಿಂದ ಕಂದಾಯ ಪರಿವೀಕ್ಷಕರು, ಕಿರಿಯ ಆರೋಗ್ಯ ಪರಿವೀಕ್ಷಕರಿಂದ ಹಿರಿಯ ಆರೋಗ್ಯ ಪರಿವೀಕ್ಷಕರ ಹುದ್ದೆಗೆ ಮುಂಬಡ್ತಿ ಹಾಗೂ ಪ್ರಥಮ ದರ್ಜೆ ಗುಮಾಸ್ತರಿಂದ ವ್ಯವಸ್ಥಾಪಕರ ಹುದ್ದೆಗೆ ಮುಂಬಡ್ತಿ ನೀಡಬೇಕು ಎಂದು ಆಗ್ರಹಿಸಿದರು. ಬಿಬಿಎಂಪಿಯು ಸಿಬ್ಬಂದಿಗಳಿಗೆ ಆರೋಗ್ಯ ಕಾರ್ಡ್‌ ನೀಡುವಲ್ಲಿ ಸಂಪೂರ್ಣ ವಿಫ‌ಲವಾಗಿದ್ದು, ಈ ಕೂಡಲೇ ಆರೋಗ್ಯ ವಿಮೆ ಮಾಡಿಸಬೇಕು. ಪಾಲಿಕೆಯಲ್ಲಿ ಕಾನೂನು ಬಾಹಿರವಾಗಿ ಹೊರಗುತ್ತಿಗೆ ಆಧಾರದ ಮೇಲೆ ಕಿಯೋನಿಕ್ಸ್‌ ಸಂಸ್ಥೆಯಿಂದ ಸಹಾಯಕ ಅಭಿಯಂತರ ನೇಮಿಸಿಕೊಳ್ಳಲಾಗಿದ್ದು, ಇದನ್ನು ಕೈಬಿಡಬೇಕು ಎಂದ‌ರು.

ಪಾಲಿಕೆಯಲ್ಲಿ ಖಾಲಿ ಇರುವ 707 ಹುದ್ದೆಗಳನ್ನು ನೇರನೇಮಕಾತಿ ಮಾಡಿಕೊಳ್ಳಲು ಸರ್ಕಾರ ಹಾಗೂ ಕೌನ್ಸಿಲ್‌ ಅನುಮೋದನೆ ನೀಡಿದೆ. ಆದರೂ ಇಲ್ಲಿಯವರಿಗೆ ಯಾವುದೇ ಪ್ರಕ್ರಿಯೆ ಪ್ರಾರಂಭವಾಗಿಲ್ಲ. ಹೀಗಾಗಿ, ನೌಕರರು ಒತ್ತಡದಲ್ಲಿ ಕೆಲಸ ನಿರ್ವಹಿಸುತ್ತಿದ್ದಾರೆ. ಈ ಕೂಡಲೇ 707 ಹುದ್ದೆಗಳಿಗೆ ನೇಮಕಾತಿ ಮಾಡಿಕೊಳ್ಳಬೇಕು ಎಂದು ಮನವಿ ಮಾಡಿದರು.

Advertisement

Udayavani is now on Telegram. Click here to join our channel and stay updated with the latest news.

Next