Advertisement

ತಪ್ಪಿತಸ್ಥರ ವಿರುದ್ಧ ಕ್ರಮಕ್ಕೆ ಆಗ್ರಹ

07:51 PM Nov 02, 2019 | Team Udayavani |

ಕಾಸರಗೋಡು: ಕನ್ನಡ ಮಾಧ್ಯಮ ಶಾಲೆಗೆ ಕನ್ನಡ ಭಾಷೆ ತಿಳಿಯದ ಅಧ್ಯಾಪಕರು ಸೇರ್ಪಡೆಯಾಗುತ್ತಿರುವ ವಿಷಯ ಇಂದು ಕಾಸರಗೋಡಿನ ಬಹುದೊಡ್ಡ ಶೈಕ್ಷಣಿಕ, ಸಾಮಾಜಿಕ ಸಮಸ್ಯೆಯಾಗಿ ಕಾಡುತ್ತಿದೆ. ಜಿಲ್ಲೆಯ ವಿವಿಧ ಕನ್ನಡ ಮಾಧ್ಯಮ ಹೈಸ್ಕೂಲ್‌ಗ‌ಳಿಗೆ ವಿವಿಧ ವಿಷಯ ಬೋಧನೆಗಾಗಿ ಕೇರಳ ಲೋಕ ಸೇವಾ ಆಯೋಗದ ಮೂಲಕ ನೇಮಕಗೊಂಡ ಅಧ್ಯಾಪಕರಿಗೆ ಕನ್ನಡ ಭಾಷೆ ತಿಳಿಯದಿರುವ ವಿಷಯ ಕಳೆದ ವರ್ಷವೇ ಬಹಿರಂಗವಾಗಿದೆ. ಈ ಶೈಕ್ಷಣಿಕ ವರ್ಷದಲ್ಲಿ ಇದು ಪುನರಾವರ್ತನೆಯಾಗಿದೆ. ಈ ವಿಷಯದಲ್ಲಿ ಭಾಗಿಯಾದ ತಪ್ಪಿತಸ್ಥರ ವಿರುದ್ಧ ಕಠಿಣ ಕ್ರಮಕೈಗೊಳ್ಳಬೇಕೆಂದು ಕೇರಳ ತುಳು ಅಕಾಡೆಮಿ ಅಧ್ಯಕ್ಷ ಉಮೇಶ್‌ ಎಂ.ಸಾಲಿಯಾನ್‌ ಅವರು ಕೇರಳ ಸರಕಾರಕ್ಕೆ ಮನವಿ ಮಾಡಿದ್ದಾರೆ.

Advertisement

2016 ರಲ್ಲಿ ಕೇರಳ ಸರಕಾರದ ಸಾರ್ವಜನಿಕ ಶಿಕ್ಷಣ ಇಲಾಖೆಯು ಹೊರಡಿಸಿದ ಆದೇಶ ಪ್ರಕಾರ ಒಂದರಿಂದ ಹತ್ತನೆಯ ತರಗತಿವರೆಗೆ ಕನ್ನಡ ಕಲಿತ ಉದ್ಯೋಗಾರ್ಥಿಗಳಿಗೆ ಮಾತ್ರ ಕನ್ನಡ ಮಾಧ್ಯಮ ಶಾಲೆಯಲ್ಲಿ ವಿಷಯ ಬೋಧನೆಗೆ ಅವಕಾಶವಿರುವುದನ್ನು ಸ್ಪಷ್ಟಪಡಿಸಿದೆ. ಈಗ ಸಮಸ್ಯೆಯಾಗಿರುವ ಕನ್ನಡ ಭಾಷೆ ಗೊತ್ತಿಲ್ಲದ ಅಧ್ಯಾಪಕರ ನೋಟಿಫಿಕೇಶನ್‌ 2016 ರ ಮೊದಲಾಗಿದ್ದರೂ ಇವರ ನೇಮಕಾತಿಯ ಸಂದರ್ಶನವು 2017 ಮತ್ತು 2018 ರಲ್ಲಿ ನಡೆದಿರುವುದು ತಿಳಿದುಬರುತ್ತದೆ. ಆದೇಶದ ಮಹತ್ವ ತಿಳಿದಿರುವ ಸಂದರ್ಶನ ಸಮಿತಿಯ ಸದಸ್ಯರು ತಮ್ಮ ಸಾಮಾನ್ಯ ಜ್ಞಾನವನ್ನೂ ಬದಿಗಿರಿಸಿ ಕನ್ನಡ ಭಾಷೆ ಗೊತ್ತಿಲ್ಲದ ಅಭ್ಯರ್ಥಿಗಳನ್ನು ಸಂದರ್ಶನದ ಮೂಲಕ ಆಯ್ಕೆ ಮಾಡಿದ್ದಾರೆ. ಇದು ಹಲವು ಸಂಶಯಗಳಿಗೆ ಎಡೆಮಾಡಿಕೊಡುತ್ತದೆ. ಮಾತ್ರವಲ್ಲದೆ ಅಭ್ಯರ್ಥಿಗಳ ಕನ್ನಡ ಜ್ಞಾನವನ್ನು ಪರೀಕ್ಷಿಸಲು ಸಂದರ್ಶನ ಸಮಿತಿಯಲ್ಲಿ ಇದ್ದ ಕನ್ನಡ ಭಾಷಾ ತಜ್ಞರು ತಮ್ಮ ಕರ್ತವ್ಯಪ್ರಜ್ಞೆ ಮರೆತಿದ್ದಾರೆ. ಇದೆಲ್ಲವೂ ಹಲವು ಸಂಶಯಗಳಿಗೆ ಎಡೆಮಾಡಿಕೊಡುತ್ತಿದ್ದು ಇದರ ವಿರುದ್ಧ ಸಮಗ್ರ ತನಿಖೆ ನಡೆಯಬೇಕಾಗಿದೆ. ಭಾಷಾ ಅಲ್ಪಸಂಖ್ಯಾಕರ ಔದ್ಯೋಗಿಕ ಬದುಕಿನ ಇಂತಹ ಮಹತ್ವದ ಸಂದರ್ಶನದಲ್ಲಿ ಪ್ರಧಾನ ಪಾತ್ರವಹಿಸಿದ ಕನ್ನಡ ಭಾಷಾತಜ್ಞರು ಕನ್ನಡಿಗರಿಗೆ ಅಪಚಾರವೆಸಗಿದ್ದಾರೆ.

ಕ್ರಮ ಕೈಗೊಳ್ಳಬೇಕು
ಇದು ಕೇರಳ ಸರಕಾರದ ಘನತೆಗೆ ಮತ್ತು ಕೇರಳ ಲೋಕ ಸೇವಾ ಆಯೋಗದ ಪಾರದರ್ಶಕತೆಗೆ ಕಳಂಕ ತರುವಂತಾಗಿದೆ. ಸರಕಾರವು ಇದರ ಗಂಭೀರತೆಯನ್ನು ಅರಿತು ಕರ್ತವ್ಯಚ್ಯುತಿ ಮಾಡಿದವರ ಬಗ್ಗೆ ಸಮಗ್ರ ತನಿಖೆ ನಡೆಸಿ ತಪ್ಪಿತಸ್ಥರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಉಮೇಶ್‌ ಎಂ. ಸಾಲಿಯಾನ್‌ ಆಗ್ರಹಿಸಿದ್ದಾರೆ.

ಈಗಾಗಲೇ ನೇಮಕಾತಿಗೊಂಡಿರುವ ಕನ್ನಡ ಗೊತ್ತಿಲ್ಲದ ಅಧ್ಯಾಪಕರನ್ನು ಬೇರೆ ಇಲಾಖೆಗೆ ಅಥವಾ ಮಲೆಯಾಳ ಮಾಧ್ಯಮ ಶಾಲೆಗೆ ವರ್ಗಾಯಿಸಿ ಕನ್ನಡ ವಿದ್ಯಾರ್ಥಿಗಳ ಭವಿಷ್ಯವನ್ನು ಕಾಪಾಡಬೇಕಾಗಿ ಅವರು ಸರಕಾರದಲ್ಲಿ ವಿನಂತಿಸಿದ್ದಾರೆ. ಈ ಬಗ್ಗೆ ಉಮೇಶ್‌ ಎಂ.ಸಾಲಿಯಾನ್‌ ಅವರು ಕೇರಳ ಶಿಕ್ಷಣ ಸಚಿವ ರವೀಂದ್ರನಾಥ್‌ ಅವರನ್ನು ಮುಖತ: ಭೇಟಿಯಾಗಿ ವಿಷಯದ ಗಂಭೀರತೆಯನ್ನು ಚರ್ಚಿಸಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next