ಆನೇಕಲ್ : ತಾಲೂಕಿನಲಿ ಭೂಮಿ ಕಳೆದುಕೊಂಡು ವಂಚನೆಗೊಳಗಾದ ದಲಿತರಿಗೆ ನ್ಯಾಯ ದೊರಕಿಸಿ ಕೊಡುವಂತೆ ಆಗ್ರಹಿಸಿ ಪ್ರಜಾವಿಮೋಚನ ಚಳವಳಿಯಿಂದ ನಾಡ ಕಚೇರಿ ಮುಂದೆ ಪ್ರತಿಭಟನೆ ನಡೆಸಲಾಯಿತು.
ಈ ವೇಳೆ ಮಾತನಾಡಿದ ಸಂಘಟನೆಯ ರಾಜ್ಯಾಧ್ಯಕ್ಷ ಆನೇಕಲ್ ಕೃಷ್ಣಪ್ಪ , ತಾಲೂಕಿನಲ್ಲಿ ಭೂಮಿ ಬೆಲೆ ದಿನದಿಂದಿ ದಿನಕ್ಕೆ ಗಗನಕ್ಕೆ ಏರುತ್ತಿದೆ. ಮತ್ತೂಂದೆಡೆ ಭೂ ಕಬಳಿಕೆ ಪ್ರಕರಣಗಳೂ ಹೆಚ್ಚುತ್ತಿವೆ. ಇದರ ನಡುವೆ ಕೆಲ ಭೂಗಳ್ಳರು ಅಮಾಯಕ, ಅನಕ್ಷರಸ್ಥ ದಲಿತರ ಭೂಮಿಗಳನ್ನು ಕಬಳಿಸುವ ದಂಧೆಯಲ್ಲಿ ತೊಡಗಿದ್ದಾರೆ. ಅದರಲ್ಲಿ ಜಿಗಣಿ ಹೋಬಳಿಯ ಸುಮಾರು ಹತ್ತುಕೋಟಿ ಬೆಲೆ ಬಾಳುವ ದಲಿತರ ಭೂಮಿಯನ್ನು ಆಂಧ್ರ ಮೂಲದವರು ಕಬಳಿಸುವ ಹುನ್ನಾರ ನಡೆಸಿದ್ದಾರೆ ಎಂದು ದೂರಿದರು.
ದಲಿತರ ಭೂಮಿಯನ್ನು ಭೂಗಳ್ಳರಿಂದ ವಾಪಸ್ ಕೊಡಿಸ ಬೇಕು. ತಪ್ಪಿತಸ್ಥರ ವಿರುದ್ದ ಕಾನೂನು ಕ್ರಮ ಜರುಗಿಸಬೇಕು ಎಂದು ಆಗ್ರಹಿಸಿದರು. ಜಿಗಣಿ ಹೋಬಳಿಯ ಹುಲಿಮಂಗಲ, ಹರಪನಹಳ್ಳಿ ಗ್ರಾಮಗಳಲ್ಲಿನ ಪ್ರತ್ಯೇಕ ಮೂರು ಪ್ರಕರಣಗಳಲ್ಲಿ ಸುಮಾರು 6 ಎಕರೆ ಭೂಮಿಯನ್ನು ಮೂಲ ವಾರಸುದಾರರನ್ನು ವಂಚಿಸಿ ನಕಲಿ ದಾಖಲೆ ಸೃಷ್ಟಿಸಿ ಕೊಂಡು ಆಂಧ್ರ ಮೂಲದ ಲ್ಯಾಂಡ್ ಡೆವಲಪರ್‌ಗಳು ನೋಂದಣಿ ಮಾಡಿಸಿಕೊಂಡಿದ್ದಾರೆಂದು ಆರೋಪಿಸಿದರು.
ಈ ಸಂಬಂಧ ಈಗಾಗಲೇ, ಜಿಲ್ಲಾದಿಕಾರಿಗಳ ನ್ಯಾಯಾಲಯದಲ್ಲಿ ಪ್ರಕರಣ ವಿಚಾರಣೆಯ ಹಂತದಲ್ಲಿದೆ. ಸಿವಿಲ್ ನ್ಯಾಯಾಲಯದಲ್ಲೂ, ಪ್ರಕರಣ ದಾಖಲಾಗಿದೆ. ಯಥಾಸ್ಥಿತಿಕಾಪಾಡಿಕೊಳ್ಳಬೇಕೆಂಬ ಆದೇಶ ಇದ್ದರೂ, ನ್ಯಾಯಲಯದ ಆದೇಶ ಧಿಕ್ಕರಿಸಿ ನೊಂದಣಿ ಮಾಡಿರುವುದು ದಾಖೆಲಗಳಿಂದ ಸ್ಪಷ್ಟವಾಗಿ ತಿಳಿದು ಬಂದಿದೆ. ಹಾಗಾಗಿ ನಕಲಿ ದಾಖಲೆ ಸೃಷ್ಟಿಸಿರುವವರ ವಿರುದ್ಧ ಕಾನೂನು ಕ್ರಮ ಜರುಗಿಸಿ ದಲಿತರಿಗೆ ನ್ಯಾಯ ದೊರಕಿಸಿಕೊಡ ಬೇಕೆಂದು ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆನೇಕಲ್ ಉಪ ವಿಭಾಗದ ಡಿವೈಎಸ್ಪಿ ಸಕ್ರಿ ಅವರು ಬೇಟಿ ನೀಡಿ ಪ್ರತಿಭಟನಾಕಾರರಿಂದ ಮನವಿ ಸ್ವೀಕರಿಸಿ ನ್ಯಾಯ ಕೊಡಿಸುವ ಭರವಸೆ ನೀಡಿದರು.
ಪ್ರತಿಭಟನೆಯಲ್ಲಿ ಬೆಂಗಳೂರು ವಿಭಾಗೀಯ ಅಧ್ಯಕ್ಷ ಯಡವನಳ್ಳಿ ಕೃಷ್ಣಪ್ಪ, ಗ್ರಾಪಂ ಸದಸ್ಯ ಚನ್ನೇನ ಹಳ್ಳಿ ವೆಂಕಟೇಶ್, ಸಂಪಿಗೆಹಳ್ಳಿ ದೊರೆ, ಅರೇಹಳ್ಳಿ ಅಶ್ವಥ್, ಆರ್.ವೆಂಕಟೇಶ್, ಎ.ಲವಾ, ಕೊಪ್ಪರ ಭಾಗವಹಿಸಿದ್ದರು.