Advertisement

ಸೂಕ್ತ ಪರಿಹಾರ ಒದಗಿಸಲು ಕೇಂದ‹ ತಂಡಕ್ಕೆ ಸಿಎಂ ಮನವಿ

06:40 AM Sep 15, 2018 | Team Udayavani |

ಬೆಂಗಳೂರು: ಕೊಡಗು, ದಕ್ಷಿಣ ಕನ್ನಡ, ಉಡುಪಿ ಹಾಗೂ ಹಾಸನ ಜಿಲ್ಲೆಗಳಲ್ಲಿ ಅತಿವೃಷ್ಠಿಯಿಂದಾಗಿ ಅಪಾರ ಹಾನಿಯುಂಟಾಗಿರುವುದರಿಂದ ಸೂಕ್ತ ಪರಿಹಾರ ಒದಗಿಸಲು ಶಿಫಾರಸ್ಸು ಮಾಡುವಂತೆ ಕೇಂದ್ರ ಅಧ್ಯಯನ ತಂಡಕ್ಕೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಮನವಿ ಮಾಡಿದ್ದಾರೆ.

Advertisement

ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್‌ ಮಲ್ಲಿಕ್‌ ನೇತೃತ್ವದ ತಂಡ ಪ್ರವಾಹ ಪೀಡಿತ ಜಿಲ್ಲೆಗಳಿಗೆ ಭೇಟಿ ನೀಡಿ ಶುಕ್ರವಾರ ಮುಖ್ಯಮಂತ್ರಿ ಕುಮಾರಸ್ವಾಮಿಯನ್ನು ಭೇಟಿ ಮಾಡಿ ಚರ್ಚೆ ನಡೆಸಿದರು. ಈ ಸಂದರ್ಭದಲ್ಲಿ ಮುಖ್ಯಮಂತ್ರಿ ಕುಮಾರಸ್ವಾಮಿ ಪ್ರಕೃತಿ ವಿಕೋಪದಿಂದ ಹಾನಿಗೊಳಗಾಗಿರುವ ರಸ್ತೆ, ಸೇತುವೆ, ಮನೆ ಹಾಗೂ ಇನ್ನಿತರ ಮೂಲಭೂತ ಸೌಕರ್ಯಗಳನ್ನು ಪುನರ್‌ ನಿರ್ಮಿಸಲು ರಾಜ್ಯ ವಿಕೋಪ ಪರಿಹಾರ ನಿಧಿಯಡಿ ಒದಗಿಸಲಾಗಿರುವ ಮೊತ್ತ ತೀರಾ ಕಡಿಮೆ ಎಂದು ಕೇಂದ್ರ ತಂಡಕ್ಕೆ ತಿಳಿಸಿದ್ದಾರೆ.

ಪ್ರತಿಬಾರಿ ವಿಕೋಪದ ಸಂದರ್ಭದಲ್ಲಿ ಒದಗಿಸುವ ಅನುದಾನಕ್ಕಿಂತ ದುಪ್ಪಟ್ಟು ಮೊತ್ತವನ್ನು ರಾಜ್ಯ ಸರ್ಕಾರ ಖರ್ಚು ಮಾಡಿದೆ. ಈ ಬಾರಿ ಹೆಚ್ಚಿನ ಪ್ರಮಾಣದಲ್ಲಿ ಬೆಳೆ ನಾಶವಾಗಿದ್ದು,  ಹೆಚ್ಚಿನ ಅನುದಾನ ನೀಡುವಂತೆ ಮನವಿ ಮಾಡಿದರು. ಕಾಫಿ ಬೆಳೆ ನಾಶಕ್ಕೆ ಸಂಬಂಧಿಸಿದಂತೆ ಕಾಫಿ ಮಂಡಳಿಯು ಸಿಬ್ಬಂದಿ ಕೊರತೆ ಎದುರಿಸುತ್ತಿರುವ ಹಿನ್ನೆಲೆಯಲ್ಲಿ ಕೃಷಿ ಇಲಾಖೆ ಅಧಿಕಾರಿಗಳನ್ನು ನಿಯೋಜಿಸಿ ಮಾಹಿತಿ ಸಂಗ್ರಹಿಸಲು ಮಂಡಳಿ ಅಧಿಕಾರಿಗಳು ಸಮ್ಮತಿಸಿದ್ದಾರೆ. ಅದರಂತೆ ಕ್ರಮ ಕೈಗೊಳ್ಳುವುದು ಸೂಕ್ತ ಎಂದು ಮುಖ್ಯಮಂತ್ರಿ ತಿಳಿಸಿದರು. ಹಬ್ಬದ ಸಂದರ್ಭದಲ್ಲಿ ಸಮೀಕ್ಷೆ ನಡೆಸಿರುವ ಕೇಂದ್ರ ತಂಡದ ಕಾರ್ಯ ನಿಷ್ಠೆಯ ಬಗ್ಗೆ ಮುಖ್ಯಮಂತ್ರಿ ಕುಮಾರಸ್ವಾಮಿ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಈ ಸಂದರ್ಭದಲ್ಲಿ ಮಾತನಾಡಿದ ಕೇಂದ್ರ ಗೃಹ ಇಲಾಖೆಯ ಜಂಟಿ ಕಾರ್ಯದರ್ಶಿ ಅನಿಲ್‌ ಮಲ್ಲಿಕ್‌, ಅತಿವೃಷ್ಠಿಗೊಳಗಾದ ಜಿಲ್ಲೆಗಳಲ್ಲಿ ವ್ಯಾಪಕ ಪರಿಶೀಲನೆ ನಡೆಸಲಾಗಿದೆ. ರಾಜ್ಯದಲ್ಲಿ ಜಿಪಿಎಸ್‌ ಆಧಾರಿತ ಬೆಳೆ ಸಮೀಕ್ಷೆ ಹಾಗೂ ಮಾಹಿತಿ ಸಂಗ್ರಹಣೆ ವಿಧಾನ ದೇಶದಲ್ಲಿಯೇ ಅತ್ಯುತ್ತಮವಾಗಿದೆ. ಹಾನಿಗೊಳಗಾದ ಯಾವ ಜಿಲ್ಲೆಯಲ್ಲಿಯೂ ಸರ್ಕಾರದ ವಿರುದ್ಧ  ಜನರು ಪ್ರತಿಭಟನೆ ಮಾಡಿಲ್ಲ. ಇದು ರಾಜ್ಯ ಸರ್ಕಾರ ಪರಿಸ್ಥಿತಿಯನ್ನು ಅತ್ಯುತ್ತಮವಾಗಿ ನಿರ್ವಹಣೆ ಮಾಡಿರುವುದಕ್ಕೆ  ಹಿಡಿದ ಕನ್ನಡಿ ಎಂದು ಹೇಳಿದರು.

ಅವಶೇಷಗಳ ನಿರ್ವಹಣೆ, ಪಶುಸಂಗೋಪನೆಗೆ ಪರಿಹಾರ, ಮೀನುಗಾರಿಕೆ ಹಾಗೂ ಏಲಕ್ಕಿ ಬೆಳೆನಷ್ಟ ಹಾಗೂ ಸಣ್ಣ ನೀರಾವರಿ ಇಲಾಖೆ ವ್ಯಾಪ್ತಿಯಲ್ಲಿ ಸಂಭವಿಸಿದ ನಷ್ಟದ ಕುರಿತು ಹೆಚ್ಚುವರಿ ಮಾಹಿತಿ ಒದಗಿಸುವಂತೆ ತಿಳಿಸಿದರು. ಕೇರಳಕ್ಕೆ ಈಗಾಗಲೇ ಮುಂಗಡ ಅನುದಾನ ಬಿಡುಗಡೆ ಮಾಡಲಾಗಿದ್ದು, ರಾಜ್ಯ ಸರ್ಕಾರ ಮನವಿ ಮಾಡಿದರೆ, ಕೇರಳ ಮಾದರಿಯಲ್ಲಿಯೇ ರಾಜ್ಯಕ್ಕೂ ಮುಂಗಡವಾಗಿ ಅನುದಾನ ಬಿಡುಗಡೆ ಮಾಡಲಾಗುವುದು ಎಂದು ಹೇಳಿದರು.

Advertisement

ಸಭೆಯಲ್ಲಿ ಕೇಂದ್ರ ತಂಡದ ಸದಸ್ಯರಾದ ಜಿತೇಂದ್ರ ಪನ್ವರ್‌, ಡಾ. ಪೊನ್ನುಸ್ವಾಮಿ, ಭರತೇಂದು ಕುಮಾರ್‌ ಸಿಂಗ್‌, ಮಾಣಿಕ್‌ ಚಂದ್ರ ಪಂಡಿತ್‌, ಸದಾನಂದ ಬಾಬು ಹಾಜರಿದ್ದರು. ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿ ಟಿ.ಎಂ. ವಿಜಯಭಾಸ್ಕರ್‌, ಅಭಿವೃದ್ಧಿ ಆಯುಕ್ತರಾದ ವಂದಿತಾ ಶರ್ಮಾ, ಕಂದಾಯ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗಂಗಾರಾಮ್‌ ಬಡೇರಿಯಾ, ಮುಖ್ಯಮಂತ್ರಿಗಳ ಅಪರ್‌ ಮುಖ್ಯ ಕಾರ್ಯದರ್ಶಿ ಇ.ವಿ. ರಮಣ ರೆಡ್ಡಿ, ಲೋಕೋಪಯೋಗಿ ಇಲಾಖೆ ಅಪರ್‌ ಮುಖ್ಯ ಕಾರ್ಯದರ್ಶಿ ರಜನೀಶ್‌ ಗೋಯಲ್‌, ಜಲ ಸಂಪನ್ಮೂಲ ಇಲಾಖೆ ಪ್ರಧಾನ ಕಾರ್ಯದರ್ಶಿ ರಾಕೇಶ್‌ ಸಿಂಗ್‌ ಮತ್ತಿತರರು ಸಭೆಯಲ್ಲಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next