Advertisement

ಪಶು ಸಂಗೋಪನೆ, ಮೀನುಗಾರಿಕೆಗೆ ನೆರವಾಗುವಂತೆ ಕೇಂದ್ರಕ್ಕೆ ಮನವಿ

06:50 AM Aug 09, 2018 | |

ಬೆಂಗಳೂರು: ರಾಜ್ಯದಲ್ಲಿ ಮೀನುಗಾರಿಕೆ ಪಶು ಸಂಗೋಪನೆ ಅಭಿವೃದ್ಧಿ ಯೋಜನೆಗಳಿಗೆ ಆರ್ಥಿಕ ನೆರವು ನೀಡುವಂತೆ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಸಚಿವ ವೆಂಕಟರಾವ್‌ ನಾಡಗೌಡ ಅವರು ಕೇಂದ್ರ ಕೃಷಿ ಸಚಿವರಿಗೆ ಮನವಿ ಮಾಡಿದ್ದಾರೆ.

Advertisement

ದೆಹಲಿಯಲ್ಲಿ ಬುಧವಾರ ಕೇಂದ್ರ ಕೃಷಿ ಸಚಿವ ರಾಧಾ ಮೋಹನ್‌ ಸಿಂಗ್‌ ಅವರನ್ನು ಭೇಟಿಯಾದ ಅವರು ಈ ಕುರಿತು ಮನವಿ ಸಲ್ಲಿಸಿದ್ದು, ಕೇಂದ್ರ ಪುರಸ್ಕೃತ ಯೋಜನೆಗಳು ಸೇರಿದಂತೆ ರಾಜ್ಯದಲ್ಲಿ ಪಶು ಸಂಗೋಪನೆ ಮತ್ತು ಮೀನುಗಾರಿಕಾ ಕ್ಷೇತ್ರದಲ್ಲಿ ಹಮ್ಮಿಕೊಳ್ಳುವ ಯೋಜನೆಗಳಿಗೆ ಕೇಂದ್ರದಿಂದ ಹೆಚ್ಚಿನ ನೆರವು ನೀಡಿ ಅಭಿವೃದ್ಧಿಗೆ ಸಹಕರಿಸುವಂತೆ ಕೋರಿದರು.

ಈಗಾಗಲೇ ಕೇಂದ್ರ ಸರ್ಕಾರ ಮಂಜೂರು ಮಾಡಿರುವ ಯೋಜನೆಗಳು ಮತ್ತು ರಾಜ್ಯ ಸರ್ಕಾರ ಸಲ್ಲಿಸಿರುವ ಪ್ರಸ್ತಾವನೆಗಳ ಕುರಿತು ವಿವರಿಸಿರುವ ಸಚಿವ ವೆಂಕಟರಾವ್‌ ನಾಡಗೌಡ, ಈ ಬಗ್ಗೆ ಗಮನಹರಿಸುವಂತೆ ಮನವಿ ಮಾಡಿದರು. ಇದಕ್ಕೆ ಸ್ಪಂದಿಸಿದ ಸಚಿವರು ಅಧಿಕಾರಿಗಳೊಂದಿಗೆ ಚರ್ಚಿಸಿ ಮುಂದಿನ ಕ್ರಮ ಕೈಗೊಳ್ಳುವುದಾಗಿ ತಿಳಿಸಿದರು.

ಕೇಂದ್ರದ ಮುಂದಿಟ್ಟ ಬೇಡಿಕೆಗಳು:
– ಮಂಗಳೂರು ಮೀನುಗಾರಿಕಾ ಬಂದರು ಅಭಿವೃದ್ಧಿಗೆ 57.6 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಿರುವ ಕೇಂದ್ರ ಸರ್ಕಾರ ಈ ಪೈಕಿ 43.2 ಕೋಟಿ ಮೊತ್ತವನ್ನು ಭರಿಸುವುದಾಗಿ ಹೇಳಿ ಈಗಾಗಲೇ 13 ಕೋಟಿ ರೂ. ಬಿಡುಗಡೆ ಮಾಡಿದೆ. ಬಾಕಿ ಉಳಿದಿರುವ 30.20 ಕೋಟಿ ರೂ. ಕೂಡಲೇ ಬಿಡುಗಡೆ ಮಾಡಬೇಕು.
– ಉತ್ತರ ಕನ್ನಡ ಜಿಲ್ಲೆ ಭಟ್ಕಳ ತಾಲೂಕು ಅಳವೆಕೋಡಿ ಮತ್ತು ತೆಂಗಿನಗುಂಡಿಯ ಮೀನುಗಾರಿಕಾ ತಂಗುದಾಣದಲ್ಲಿ ಅಳಿವೆಕೋಡಿಯಲ್ಲಿ ಗೋಡೆ ನಿರ್ಮಾಣಕ್ಕೆ 86.08 ಕೋಟಿ ರೂ. ವೆಚ್ಚದ ಪ್ರಸ್ತಾವನೆ ಕಳುಹಿಸಿಕೊಟ್ಟಿದ್ದು, ಇದಕ್ಕೆ ಕೇಂದ್ರ ಸರ್ಕಾರ ಮಂಜೂರಾತಿ ನೀಡಬೇಕು.
– ನೀಲಿ ಕ್ರಾಂತಿ ಯೋಜನೆಯಡಿ ಉಡುಪಿ ಜಿಲ್ಲೆಯ ಹೆಜಮಾಡಿ ಕೋಡಿಯಲ್ಲಿ 138.6 ಕೋಟಿ ರೂ. ವೆಚ್ಚದಲ್ಲಿ ಮೀನುಗಾರಿಕಾ ಬಂದರು ನಿರ್ಮಾಣಕ್ಕೆ ಯೋಜನೆ ಮಂಜೂರಾತಿ ಸಮಿತಿ ಒಪ್ಪಿಗೆ ನೀಡಿದ್ದು, ಕೇಂದ್ರ ಸರ್ಕಾರವೂ ಶೀಘ್ರವೇ ಇದಕ್ಕೆ ಒಪ್ಪಿಗೆ ನೀಡಬೇಕು.
– ಉಡುಪಿಯ ಮಲ್ಪೆ , ಬೇಲೇಕೇರಿ ಮತ್ತು ಕೋಡಿಕನ್ಯಾನ ಮೀನುಗಾರಿಕಾ ಪ್ರದೇಶದಲ್ಲಿ ಹೂಳೆತ್ತುವ ಯೋಜನೆಯನ್ನು 11.71 ಕೋಟಿ ರೂ. ವೆಚ್ಚದಲ್ಲಿ ಕೈಗೆತ್ತಿಕೊಳ್ಳಲಾಗಿದ್ದು, ಕೇಂದ್ರದ ಪಾಲು 4.68 ಕೋಟಿ ರೂ. ಪೈಕಿ 2 ಕೋಟಿ ರೂ. ಬಿಡುಗಡೆಯಾಗಿದೆ. ಬಾಕಿ ಮೊತ್ತ ಶೀಘ್ರ ಬಿಡುಗಡೆ ಮಾಡಬೇಕು.
– ನೀಲಿ ಕ್ರಾಂತಿ ಯೋಜನೆಯಡಿ ಕರಾವಳಿ ಮೀನುಗಾರಿಕೆಯ ಸಂಯೋಜಿತ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ ಕೇಂದ್ರ ಸರ್ಕಾರ 13.70 ಕೋಟಿ ರೂ. ಬಿಡುಗಡೆ ಮಾಡಿದ್ದು, ಬಾಕಿ ಇರುವ 2.32 ಕೋಟಿ ರೂ. ಮೊತ್ತವನ್ನು ಶೀಘ್ರ ಒದಗಿಸಬೇಕು.
– ನೀಲಿ ಕ್ರಾಂತಿ ಯೋಜನೆಯಡಿ 2-18-19ನೇ ಸಾಲಿಗೆ 95.39 ಕೋಟಿ ರೂ. ವೆಚ್ಚದ ಯೋಜನೆಗೆ ಅನುಮೋದನೆ ನೀಡಬೇಕು. ಕರಾವಳಿ ಮೀನುಗಾರಿಕೆಯ ಸಂಯೋಜಿತ ಅಭಿವೃದ್ಧಿ ಮತ್ತು ನಿರ್ವಹಣೆಗಾಗಿ 184.81 ಕೋಟಿ ವೆಚ್ಚದ ಯೋಜನೆಗೆ ಅನುಮೋದನೆ ನೀಡಿ ಕೇಂದ್ರದ ಪಾಲು ಕೂಡಲೇ ಮಂಜೂರು ಮಾಡಬೇಕು ಮತ್ತು ಪರಿಷ್ಕೃತ ಯೋಜನೆಗೆ ಒಪ್ಪಿಗೆ ನೀಡಬೇಕು.
– ರಾಜ್ಯದಲ್ಲಿ 8 ಮೀನುಗಾರಿಕಾ ಬಂದರು ಮತ್ತು 26 ಮೀನುಗಾರಿಕಾ ತಂಗುದಾಣಗಳಿದ್ದರೂ ಇದು ಸಾಕಾಗುತ್ತಿಲ್ಲ. ಹೀಗಾಗಿ 40 ಕೋಟಿ ರೂ. ವೆಚ್ಚದಲ್ಲಿ ತೇಲುವ ಜೆಟ್ಟಿಗಳನ್ನು ನಿರ್ಮಿಸಲು ಸರ್ಕಾರ ಪ್ರಸ್ತಾವನೆ ಸಿದ್ಧಪಡಿಸಿದ್ದು, ಇದಕ್ಕೆ ಅನುಮೋದನೆ ನೀಡಬೇಕು.
– ಕರಾವಳಿ ಭಾಗದಲ್ಲಿ ಮೀನುಗಳ ಮಾರಾಟಕ್ಕಾಗಿ ಕೋಲ್ಡ್‌ ಸೋರೇಜ್‌ ಚೈನ್‌ ಯೂನಿಟ್‌ಗಳನ್ನು ಸ್ಥಾಪಿಸಲು ಸರ್ಕಾರ ನಿರ್ಧರಿಸಿದ್ದು, ಒಂದು ರೆಫ್ರಿಜರೇಟೆಡ್‌ ಟ್ರಕ್‌ಗೆ 5 ಕೋಟಿ ರೂ. ಬೇಕಾಗುತ್ತದೆ. ಈ ಯೋಜನೆಗೆ ಅಗತ್ಯ ನೆರವು ಒದಗಿಸಬೇಕು ಎಂದು ಕೋರಿದ್ದಾರೆ.

ಗೋಕುಲ ಗ್ರಾಮ ನಿರ್ಮಾಣಕ್ಕೆ ನೆರವು ನೀಡಿ
ಪಶು ಸಂಗೋಪನೆಯಡಿ ರಾಜ್ಯದ ಹೆಮ್ಮೆಯ ತಳಿ ಅಮೃತ್‌ಮಹಲ್‌ ಕಾವಲು ತಳಿಯ ಅಭಿವೃದ್ಧಿಗೆ ರಾಜ್ಯ ಸರ್ಕಾರ ಚಿಕ್ಕಮಗಳೂರು ಜಿಲ್ಲೆಯ ಲಿಂಗದಹಳ್ಳಿಯಲ್ಲಿ “ಗೋಕುಲ ಗ್ರಾಮ’ ನಿರ್ಮಾಣಕ್ಕೆ ಯೋಜನೆ ರೂಪಿಸಿದ್ದು, ಇದಕ್ಕೆ 24.52 ಕೋಟಿ ರೂ. ಮಂಜೂರು ಮಾಡುವಂತೆ ಸಚಿವ ವೆಂಕಟರಾವ್‌ ನಾಡಗೌಡ ಅವರು ಕೇಂದ್ರ ಕೃಷಿ ಸಚಿವರನ್ನು ಕೋರಿದ್ದಾರೆ.

Advertisement

ಅಲ್ಲದೆ, ಯಲಹಂಕದಲ್ಲಿ ನಿರ್ಮಾಣ ಮಾಡುತ್ತಿರುವ ಜಾನುವಾರುಗಳು ಕಾಲುಬಾಯಿ ಜ್ವರಕ್ಕೆ ಲಸಿಕೆ ತಯಾರಿಕಾ ಘಟಕಕ್ಕೆ ಹೆಬ್ಟಾಳದ ಭಾರತೀಯ ಪಶುಸಂಗೋಪನಾ ಸಂಶೋಧನಾ ಸಂಸ್ಥೆಯ 100 ಎಕರೆ ಜಾಗದ ಪೈಕಿ 25 ಎಕರೆ ನೀಡುವಂತೆ ಭಾರತೀಯ ಕೃಷಿ ಸಂಶೋಧನಾ ಮಂಡಳಿ ಪ್ರಸ್ತಾವನೆ ಸಲ್ಲಿಸಿದ್ದು, ಇದಕ್ಕೆ ಒಪ್ಪಿಗೆ ನೀಡುವಂತೆಯೂ ಮನವಿ ಮಾಡಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next