Advertisement

ದಲಿತ ವಿದ್ಯಾರ್ಥಿಗಳಿಗೆ ವಸತಿ ವ್ಯವಸ್ಥೆ ಮಾಡಲು ಮನವಿ

05:29 PM Sep 28, 2018 | Team Udayavani |

ಕಾರವಾರ: ದಲಿತ ವಿದ್ಯಾರ್ಥಿಗಳಿಗೆ ಶಿಕ್ಷಣ ಮತ್ತು ಹಾಸ್ಟೆಲ್‌ ವ್ಯವಸ್ಥೆ ನೀಡುವಲ್ಲಿ ದೇಶದ ಇತರೆ ರಾಜ್ಯಗಳಿಗಿಂತ ಕರ್ನಾಟಕ ಮುಂದಿದೆ. ಆದರೆ ಕಳೆದ ಆಗಸ್ಟ್‌ 2018ರಲ್ಲಿ ಸಮಾಜ ಕಲ್ಯಾಣ ಇಲಾಖೆ ಹೊರಡಿಸಿದ ಆದೇಶ ದಲಿತ ಮತ್ತು ಹಿಂದುಳಿದ ವರ್ಗಗಳ ಮಕ್ಕಳ ಪಾಲಿಗೆ ಮರಣಶಾಸನದಂತಿದೆ. ತಕ್ಷಣ ಈ ಆದೇಶ ರದ್ದು ಮಾಡಿ, ಮೊದಲಿನಿಂತೆ ಹಾಸ್ಟೆಲ್‌ನಲ್ಲಿ ಉಳಿಯಲು ಬಯಸುವ ಎಲ್ಲ ದಲಿತ ವಿದ್ಯಾರ್ಥಿಗಳಿಗೆ ವಸತಿ ಹಾಸ್ಟೆಲ್‌ ಮತ್ತು ಶಿಕ್ಷಣ ನೀಡಿ ಎಂದು ರಾಜ್ಯದ ಮುಖ್ಯಮಂತ್ರಿ ಎಚ್‌ .ಡಿ. ಕುಮಾರಸ್ವಾಮಿ ಅವರನ್ನು ಕರ್ನಾಟಕ ರಾಜ್ಯ ದಲಿತ ಸಂಘರ್ಷ ಸಮಿತಿ ಜಿಲ್ಲಾ ಘಟಕದವರು ಜಿಲ್ಲಾಧಿಕಾರಿಗಳ ಮೂಲಕ ಮನವಿ ಮಾಡಿದರು.

Advertisement

ಜಿಲ್ಲಾ ಸಂಚಾಲಕ ಶಿವಾನಿ ಬನವಾಸಿ, ರಾಮಚಂದ್ರ ಇಳಸೂರು ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಬಳಿ ಸಾಂಕೇತಿಕ ಪ್ರತಿಭಟನೆ ಮಾಡಿದ ಕರಾದಸಂಸ, ದಲಿತ ಜನಾಂಗದ ಯಾವುದೇ ವಿದ್ಯಾರ್ಥಿಗಳಿಗೆ ಹಾಸ್ಟೆಲ್‌ ವಾಸ ನಿರಾಕರಿಸಬಾರದು ಎಂಬ ಪ್ರಮುಖ ಬೇಡಿಕೆ ಇಟ್ಟಿತು. ಹಾಸ್ಟೆಲ್‌ ಮತ್ತು ಶಿಕ್ಷಣಕ್ಕೆ ಅರ್ಜಿ ಹಾಕಿದ ಯಾವುದೇ ವಿದ್ಯಾರ್ಥಿಗೆ ವಸತಿ ಮತ್ತು ಶಿಕ್ಷಣ ನಿರಾಕರಿಸಬೇಡಿ ಎಂದ ದಲಿತ ಮುಖಂಡರು, ಭೂಮಿ ಒಡೆತನಕ್ಕಾಗಿ ಅರ್ಜಿ ಸಲ್ಲಿಸಿದ ಎಲ್ಲ ಅರ್ಹ ಫಲಾನುಭವಿಗಳಿಗೆ ಭೂಮಿ ನೀಡಬೇಕು. ದಲಿತರಿಗೆ ಇರುವ ಯೋಜನೆಗಳ ಜಾರಿಗೆ ಏಕಗವಾಕ್ಷಿ ನೀತಿ ಜಾರಿಗೆ ತರಬೇಕು. ಆಯಾ ಕ್ಷೇತ್ರಗಳಲ್ಲಿ ಶಾಸಕರ ನೇತೃತ್ವದ ಸಮಿತಿ ಇದ್ದು, ಇದು ದಲಿತರ ಯೋಜನೆ ಜಾರಿಗೆ ಅಡ್ಡಿಯಾಗಿದೆ. ಇಂತಹ ಶಾಸಕರ ನೇತೃತ್ವದ ಸಮಿತಿಗಳನ್ನು ರದ್ದು ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ಅಡಿ ಬರುವ ಎಲ್ಲ ನಿಗಮ ಮಂಡಳಿಗಳಲ್ಲಿ ದಲಿತರು, ಹಿಂದುಳಿದವರು ಸಾಲಕ್ಕಾಗಿ ಅರ್ಜಿ ಸಲ್ಲಿಸಿದ್ದರೆ ಅಂಥರಿಗೆ ಸಾಲ ಮಂಜೂರು ಮಾಡಬೇಕು. ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್‌ಗ‌ಳಲ್ಲಿ ಕೆಲಸ ಮಾಡುತ್ತಿರುವ ಗುತ್ತಿಗೆ ನೌಕರರನ್ನು ಸರ್ಕಾರ ಕಾಯಂ ಮಾಡಬೇಕೆಂಬ ಬೇಡಿಕೆಯನ್ನು ಜಿಲ್ಲಾಧಿಕಾರಿ ಎಸ್‌.ಎಸ್‌. ನಕುಲ್‌ ಮೂಲಕ ಸಲ್ಲಿಸಲಾಯಿತು.

ಇಳಸೂರು ಜಮೀನು ಮಂಜೂರಿ ಮಾಡಲು ಮನವಿ: ಶಿರಸಿ ಬಳಿ ಇಳಸೂರಿನಲ್ಲಿ ಆರು ಎಕರೆ ಭೂಮಿಯನ್ನು ದಲಿತರ ನಿವೇಶನಕ್ಕೆ ಮೀಸಲಿಡಲಾಗಿದೆ. ಕಳೆದ ಹತ್ತು ವರ್ಷಗಳಿಂದ ಈ ಭೂಮಿಯನ್ನು ದಲಿತರಿಗೆ ನೀಡದೇ ಸತಾಯಿಸಲಾಗುತ್ತಿದೆ. ದಲಿತರಿಗೆ ವಸತಿಗಾಗಿ ಭೂಮಿ ನೀಡುವುದಾಗಿ ಜಿಲ್ಲಾಡಳಿತ, ಸರ್ಕಾರವೇ ಮೊದಲು ಪ್ರಕಟಿಸಿತ್ತು. ಈ ಭೂಮಿ ಒತ್ತುವರಿಯಾಗದಂತೆ ದಲಿತ ಸಂಘರ್ಷ ಸಮಿತಿ ಕಾಯ್ದುಕೊಂಡು ಬಂದಿದೆ. ಈಗಲಾದರೂ ಇಳಸೂರು ಬಳಿ ಕಂದಾಯ ಭೂಮಿಯನ್ನು ದಲಿತರಿಗೆ ನಿವೇಶನ ಕಟ್ಟಿಕೊಳ್ಳಲು ನೀಡಬೇಕೆಂದು ಕರಾದ ಸಂಸ ಜಿಲ್ಲಾ ಸಂಚಾಲಕ ಶಿವಾಜಿ ಬನವಾಸಿ ಜಿಲ್ಲಾಧಿಕಾರಿಗಳನ್ನು ಒತ್ತಾಯಿಸಿದರು. ತಿಂಗಳಲ್ಲಿ ಸೂಕ್ತ ಕ್ರಮ ಕೈಗೊಳ್ಳುವ ಭರವಸೆ ಜಿಲ್ಲಾಧಿಕಾರಿಗಳ ಕಡೆಯಿಂದ ಬಂದಿದೆ ಎಂದು ಕರಾದಸಂಸ ತಿಳಿಸಿತು.

Advertisement

Udayavani is now on Telegram. Click here to join our channel and stay updated with the latest news.

Next