Advertisement

Kundapura ಪಾದರಕ್ಷೆ ಕುಶಲಕರ್ಮಿಗೆ ಗಣರಾಜ್ಯೋತ್ಸವ ಆಮಂತ್ರಣ

12:05 AM Jan 25, 2024 | Team Udayavani |

ಕುಂದಾಪುರ: ಕೇಂದ್ರ ಸರಕಾರದ ಸ್ವನಿಧಿ ಸಾಲ ಯೋಜನೆಯ ಪ್ರಯೋಜನ ಪಡೆದು ಸಕಾಲದಲ್ಲಿ ಮರುಪಾವತಿ ಮಾಡಿದ ಕುಂದಾಪುರದ ಯುವ ಉದ್ಯಮಿ ಮಣಿಕಂಠ ಅವರಿಗೆ ದಿಲ್ಲಿಯಲ್ಲಿ ಜ. 26ರಂದು ನಡೆಯುವ ಗಣರಾಜ್ಯೋತ್ಸವ‌ದಲ್ಲಿ ಭಾಗವಹಿಸಲು ಕೇಂದ್ರ ಸರಕಾರ ಆಹ್ವಾನಿಸಿದೆ.

Advertisement

ಬೆಂಗಳೂರಿನ ಬಿಬಿಎಂಪಿಯ ಮೂವರು ಹಾಗೂ ಕುಂದಾಪುರದ ಮಣಿಕಂಠ ಮಾತ್ರ ಈ ಯೋಜನೆಯಡಿ ಆಯ್ಕೆಯಾದವರು.

ನಾಲ್ವರಿಗೂ ಸಪತ್ನಿàಕರಾಗಿ ಕಾರ್ಯ ಕ್ರಮದಲ್ಲಿ ಭಾಗವಹಿಸಲು ವಸತಿ, ಪ್ರಯಾಣ ಎಲ್ಲ ವ್ಯವಸ್ಥೆ ಕೇಂದ್ರ ಸರಕಾರ ಕಲ್ಪಿಸಲಿದೆ.

ಯಾರಿವರು
ಯುವ ಉದ್ಯಮಿ ಮಣಿಕಂಠ ನಗರದ ಶಾಸ್ತ್ರೀ ಸರ್ಕಲ್‌ ಬಳಿ ಲಿಡ್ಕರ್‌ನ ಪಾದರಕ್ಷೆ ದುರಸ್ತಿಯ ಪುಟ್ಟ ಪೆಟ್ಟಿಗೆ ಅಂಗಡಿ ಇಟ್ಟು ಜೀವನ ನಡೆಸುತ್ತಿದ್ದಾರೆ. ಅವರು ಹಲವು ವರ್ಷಗಳಿಂದ ಸ್ಥಳೀಯರಿಗೆ ಚಿರಪರಿಚಿತರು. ಮಣಿಕಂಠ ಮೂಲತಃ ಭದ್ರಾವತಿಯವರು. ತಂದೆ ಮುನಿಸ್ವಾಮಿ 50 ವರ್ಷಗಳ ಹಿಂದೆ ಕುಂದಾಪುರದಲ್ಲಿ ಪಾದರಕ್ಷೆ ದುರಸ್ತಿ ಉದ್ಯೋಗ ಪ್ರಾರಂಭಿಸಿದ್ದರು. ಅದೇ ಕಸುಬನ್ನು ಮಣಿಕಂಠ ಮುಂದುವರಿಸಿದ್ದಾರೆ. ಚಪ್ಪಲಿಯ ಜತೆಗೆ ಕೊಡೆ, ಬ್ಯಾಗ್‌ ಮುಂತಾದ ದುರಸ್ತಿಯಿಂದ ಬರುವ ಆದಾಯದಲ್ಲಿ ತಾಯಿ, ತಮ್ಮ, ಪತ್ನಿ ಜತೆಗೆ ಇಬ್ಬರು ಮಕ್ಕಳಿರುವ ಕುಟುಂಬವನ್ನು ನಿರ್ವಹಿಸುತ್ತಿದ್ದಾರೆ.

ಆಸರೆಯಾದ ಸ್ವನಿಧಿ
ತಮ್ಮ ಕಸುಬಿಗೆ ಬೇಕಾದ ಕಚ್ಚಾ ವಸ್ತುಗಳ ಖರೀದಿಗಾಗಿ ಕೈ ಸಾಲ ಪಡೆದುಕೊಳ್ಳುತ್ತಿದ್ದ ಅವರ ಆದಾಯದ ಬಹುಪಾಲು ಬಡ್ಡಿಗೆ ವಿನಿಯೋಗವಾಗುತ್ತಿತ್ತು. ಹೀಗಿರುವಾಗ 2 ವರ್ಷಗಳ ಹಿಂದೆ ಪ್ರಧಾನಮಂತ್ರಿ ಸ್ವನಿಧಿ ಯೋಜನೆಯಡಿ ಕೌಶಲಾಭಿವೃದ್ಧಿ ಇಲಾಖೆಯ ಮೂಲಕ ಪುರಸಭೆಯಿಂದ ಬೀದಿ ವ್ಯಾಪಾರಿಗಳಿಗೆ ನೀಡುವ ಸಾಲ ಯೋಜನೆಯಡಿ ಶೇ. 7ರ ಬಡ್ಡಿ ದರದಲ್ಲಿ 10 ಸಾವಿರ ರೂ. ಸಾಲ ಪಡೆದರು. ಮರುಪಾವತಿಗೆ 12 ತಿಂಗಳ ಕಾಲಾವಕಾಶ ಇದ್ದರೂ ಮಾಸಿಕ 2,500 ರೂ. ಗಳಂತೆ ಐದೇ ತಿಂಗಳಲ್ಲಿ ಪಾವತಿಸಿ ಸಾಲ ಮುಕ್ತರಾದರು.
ಇದನ್ನು ಮೆಚ್ಚಿ ಇಲಾಖೆಯು 2ನೇ ಅವಧಿಗೆ 20 ಸಾವಿರ ರೂ. ಸಾಲ ನೀಡಿದ್ದು, ಅದರಲ್ಲಿ ಚಪ್ಪಲಿ ಮತ್ತು ಕೊಡೆಗಳನ್ನು ತಂದು ಮಾರುವಲ್ಲಿಯೂ ಯಶಸ್ವಿಯಾದರು. ಹಿಂದಿನಂತೆ ಐದೇ ತಿಂಗಳಲ್ಲಿ ಸಾಲವನ್ನು ತೀರಿಸಿದ್ದಲ್ಲದೇ, ಒಂದಿಷ್ಟು ಆದಾಯವನ್ನೂ ಗಳಿಸಿದರು. ಅವರ ಪ್ರಾಮಾಣಿಕತೆ, ಬದ್ಧತೆಯನ್ನು ಗುರುತಿಸಿ 3ನೇ ಅವಧಿಗೆ ಮತ್ತೆ 50 ಸಾವಿರ ರೂ. ಮಂಜೂರು ಮಾಡಲಾಯಿತು. ಆ ಹಣದಲ್ಲಿ ತನ್ನ ಅಂಗಡಿಯ ಜತೆಗೆ, ಪಕ್ಕದಲ್ಲಿನ ಸಹೋದರನ ಸೀಟ್‌ ಕುಶನ್‌ ಅಂಗಡಿಗೂ ಸಹಾಯ ಮಾಡುವ ಆಲೋಚನೆ ಅವರದ್ದು.

Advertisement

ಪುರಸಭೆ ದಾಖಲೆ
ವಿಸ್ತಾರ, ಗಾತ್ರದಲ್ಲಿ ಸಣ್ಣದಾಗಿ ಇರುವ ಕುಂದಾಪುರ ಪುರಸಭೆ ಪ್ರಧಾನಮಂತ್ರಿಯವರ ಮಹತ್ವಾಕಾಂಕ್ಷೆಯ ಯೋಜನೆಯಲ್ಲಿ ಮಹತ್ತರ ಸಾಧನೆ ಮಾಡಿದೆ. ಪಿಎಂ ಸ್ವನಿಧಿ ಯೋಜನೆಯಲ್ಲಿ ಬೀದಿ ಬದಿ ವ್ಯಾಪಾರಿಗಳಿಗೆ 1 ಕೋ.ರೂ. ಸಾಲ ಕೊಡಿಸಿದೆ. ಈ ಮೂಲಕ ಉಡುಪಿ ಜಿಲ್ಲೆಯಲ್ಲಿ ಪ್ರಥಮ ಸ್ಥಾನದಲ್ಲಿದೆ. ದೇಶದ 253 ಸ್ಥಳೀಯಾಡಳಿತ ಸಂಸ್ಥೆಗಳಷ್ಟೇ ಈ ಯೋಜನೆಯನ್ನು ಪರಿಣಾಮಕಾರಿಯಾಗಿ ಅನುಷ್ಠಾನ ಮಾಡಿವೆ.

ಬಡ್ಡಿ ಕಡಿಮೆ ಇದ್ದುದರಿಂದ ಸಾಲ ಮರುಪಾವತಿ ಹೊರೆಯಾಗಲಿಲ್ಲ. ಬೀದಿ ಬದಿಯಲ್ಲಿ ಕುಳಿತು ಕಸುಬು ಮಾಡುವ ನಮ್ಮಂತವರನ್ನು ಸರಕಾರ ಗುರುತಿಸಿರುವುದು ಸಂತೋಷ ತಂದಿದೆ.
– ಮಣಿಕಂಠ, ಉದ್ಯಮಿ

Advertisement

Udayavani is now on Telegram. Click here to join our channel and stay updated with the latest news.

Next