Advertisement

Republic Day; ಸಂವಿಧಾನವೇ ಧ್ವನಿರಹಿತರ ಬದುಕಿನ ಚೇತನ: ಖಾದರ್‌

12:41 AM Jan 27, 2024 | Team Udayavani |

ಮೂಡುಬಿದಿರೆ: ರೈತರು, ಶೋಷಿತರು, ಬಡವರು ಸೇರಿದಂತೆ ದೇಶದ ಧ್ವನಿರಹಿತರೆಲ್ಲ ಇಷ್ಟೊಂದು ಧೈರ್ಯದಿಂದ ಇಲ್ಲಿ ಜೀವಿಸಲು ಕಾರಣವೇ ಡಾ| ಬಿ.ಆರ್‌. ಅಂಬೇಡ್ಕರ್‌ ಪ್ರಣೀತ ಸಂವಿಧಾನ ಎಂದು ವಿಧಾನಸಭಾಧ್ಯಕ್ಷ ಯು.ಟಿ. ಖಾದರ್‌ ಅಭಿಪ್ರಾಯಪಟ್ಟರು.

Advertisement

ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ವತಿಯಿಂದ ವಿದ್ಯಾಗಿರಿಯಲ್ಲಿ ನಡೆದ 75ನೇ ಗಣರಾಜ್ಯೋತ್ಸವ ಸಮಾರಂಭ ದಲ್ಲಿ ರಾಷ್ಟ್ರಧ್ವಜಾರೋಹಣಗೈದು ಸಂದೇಶ ನೀಡಿದ ಅವರು, ಗಾಂಧೀಜಿ ನೇತೃತ್ವದಲ್ಲಿ ಸ್ವಾತಂತ್ರ್ಯ ಲಭಿಸಿದರೆ ಅಂಬೇಡ್ಕರ್‌ ನೇತೃತ್ವದಲ್ಲಿ ರಚನೆಯಾದ ಸಂವಿಧಾನ ದೇಶದ ಏಕತೆಯನ್ನು ಉಳಿಸಿದೆ; ನಾವೆಲ್ಲರೂ ಈ ಸಂವಿಧಾನದ ಇತಿಹಾಸ, ಅರ್ಥ ತಿಳಿದುಕೊಳ್ಳಬೇಕು ಎಂದು ಕರೆ ನೀಡಿದರು.

ಆಳ್ವಾಸ್‌ ಮಿನಿ ಭಾರತ
ಕರ್ನಾಟಕದಲ್ಲಿ ಭಾರತದ ಸಂಸ್ಕೃತಿಯ ಸಾರವನ್ನು ಕಾಣಬಹುದಾದರೆ, ಆಳ್ವಾಸ್‌ನಲ್ಲಿ ಕರ್ನಾಟಕದ ಸಾಂಸ್ಕೃತಿಕ ಸಾರ ಗೋಚರವಾಗುತ್ತಿದೆ. ಆಳ್ವಾಸ್‌ ನಮ್ಮ ಸಂಸ್ಕೃತಿ ಬಿಂಬಿಸುವ ಮಿನಿ ಭಾರತ. ಡಾ| ಅಳ್ವರ ದೇಶಪ್ರೇಮ ಎಲ್ಲರನ್ನೂ ಒಂದಾಗಿಸಿದೆ ಎಂದರು. ಆಳ್ವಾಸ್‌ ಸಂಸ್ಥೆಗಳ ಪರಿವಾರ, ಸಾರ್ವಜನಿಕರು ಸೇರಿದಂತೆ ಮೂವತ್ತು ಸಾವಿರಕ್ಕೂ ಅಧಿಕ ಮಂದಿ ಈ ದಾಖಲೆಯ ಗಣರಾಜ್ಯೋತ್ಸವಕ್ಕೆ ಸಾಕ್ಷಿಯಾದರು.

ತ್ರಿವರ್ಣದಲ್ಲಿ ಮೂಡಿದ ಆಳ್ವಾಸ್‌
ಪಕ್ಷಿ ನೋಟದಲ್ಲಿ ಕೇಸರಿ, ಬಿಳಿ, ಹಸುರು ವರ್ಣ, ಆಗಸಕ್ಕೆ ಚಿಮ್ಮಿದ ತ್ರಿವರ್ಣ ಚಿತ್ತಾರದ ಸಂಯೋಜನೆ, ಉಕ್ಕಿ ಬಂದ ದೇಶಪ್ರೇಮದ ಭಕ್ತಿ, ಮಾಜಿ ಸೈನಿಕರಿಂದ ಧ್ವಜಕ್ಕೆ ವಂದನೆ, ಸಭಾ ಮಧ್ಯೆ ತ್ರಿವರ್ಣದಲ್ಲಿ ಮೂಡಿದ ಆಳ್ವಾಸ್‌ ಎಲ್ಲವೂ ಈ ಗಣರಾಜ್ಯೋತ್ಸವದ ಸಂಭ್ರಮ ಸಾರಿದವು.

ಎನ್‌ಸಿಸಿ ಸೀನಿಯರ್‌ ಅಂಡರ್‌ ಆಫೀಸರ್‌ ಇಂದ್ರೇಶ್‌ ಗೌಡ ನೇತೃತ್ವದಲ್ಲಿ ಗೌರವ ರಕ್ಷೆ ನೀಡಲಾಯಿತು. ಆ ಬಳಿಕ ಎನ್‌ಸಿಸಿ ಸೀನಿಯರ್‌ ಅಂಡರ್‌ ಆಫೀಸರ್‌ ಹರ್ಷಾರೆಡ್ಡಿ ನೇತೃತ್ವದಲ್ಲಿ ಗೌರವ ವಂದನೆ ನೀಡಲಾಯಿತು. ಆಳ್ವಾಸ್‌ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ| ಎಂ. ಮೋಹನ ಆಳ್ವ, ಮಾಜಿ ಸಚಿವ ನಾಗರಾಜ ಶೆಟ್ಟಿ, ಪಿ.ಜಿ.ಆರ್‌. ಸಿಂಧ್ಯಾ, ವಿಧಾನ ಪರಿಷತ್‌ ಸದಸ್ಯ ಎಸ್‌. ಎಲ್‌. ಭೋಜೇಗೌಡ 250ಕ್ಕೂ ಅಧಿಕ ಮಾಜಿ ಸೈನಿಕರು ಪಾಲ್ಗೊಂಡಿದ್ದರು.

Advertisement
Advertisement

Udayavani is now on Telegram. Click here to join our channel and stay updated with the latest news.

Next