Advertisement

ಗಣರಾಜ್ಯೋತ್ಸವ ಸಂಭ್ರಮ: ಎಲ್ಲೆಡೆ ದೇಶ ಪ್ರೇಮದ ನಿನಾದ

09:29 PM Jan 26, 2020 | Lakshmi GovindaRaj |

ಜಿಲ್ಲಾದ್ಯಂತ 71ನೇ ಗಣರಾಜ್ಯೋತ್ಸವ ಸಂಭ್ರಮ ಭಾನುವಾರ ಮುಗಿಲು ಮುಟ್ಟಿತ್ತು. ಸರ್ಕಾರಿ ರಜೆ ದಿನವಾದರೂ ಗಣರಾಜ್ಯೋತ್ಸವದ ಸಂಭ್ರಮಕ್ಕೆ ಯಾವುದೇ ಕುಂದು ಉಂಟಾಗಲಿಲ್ಲ. ಶಾಲಾ, ಕಾಲೇಜು ವಿದ್ಯಾರ್ಥಿಗಳು, ಅಧಿಕಾರಿಗಳು ಉತ್ಸಾಹದಿಂದ ಪಾಲ್ಗೊಂಡು ಗಣರಾಜ್ಯೋತ್ಸವಕ್ಕೆ ಕಳೆ ತಂದರು. ಶಾಲಾ ವಿದ್ಯಾರ್ಥಿಗಳು ದೇಶದ ಐಕ್ಯತೆ, ಸಮಗ್ರತೆ, ಭಾತೃತ್ವ ಹಾಗೂ ಸಹೋದರತ್ವ, ಸೌಹಾರ್ದತೆ ಸಾರುವ ಹಲವಾರು ಸಾಂಸ್ಕೃತಿಕ ನೃತ್ಯ ಕಾರ್ಯಕ್ರಮ ಪ್ರದರ್ಶಿಸಿ ನೆರದಿದ್ದವರಲ್ಲಿ ದೇಶಪ್ರೇಮದ ಕಿಚ್ಚು ಮೂಡಿಸಿದರು.

Advertisement

ಚಿಕ್ಕಬಳ್ಳಾಪುರ: ಎಲ್ಲೆಡೆ ರಾರಾಜಿಸಿದ ತ್ರಿವರ್ಣ ಧ್ವಜ. ಸಾಂಸ್ಕೃತಿಕ ಕಾರ್ಯಕ್ರಮಗಳ ಮೂಲಕ ಮಕ್ಕಳಿಂದ ಮಾರ್ಧನಿಸಿದ ದೇಶ ಪ್ರೇಮದ ನಿನಾದ. ಆಕರ್ಷಕ ಪಥ ಸಂಚಲನ, ರಜೆ ದಿನವಾದರೂ ಮೈದಾನ ತುಂಬಿದ ಶಾಲಾ, ಕಾಲೇಜು ವಿದ್ಯಾರ್ಥಿಗಳ ದಂಡು, ಜಿಲ್ಲೆಯ 10 ಮಂದಿಗೆ ಜಿಲ್ಲಾಡಳಿತದಿಂದ ಸವೊತ್ತಮ ಪ್ರಶಸ್ತಿ ಪ್ರದಾನ. ಗಣರಾಜ್ಯೋತ್ಸವಕ್ಕೆ ಬಾರದ ಸಂಸದರು, ಶಾಸಕರು.

ಹೌದು, ನಗರದ ಸರ್‌ ಎಂ.ವಿಶ್ವೇಶ್ವರಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಭಾನುವಾರ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ 71ನೇ ಗಣರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕಂಡು ಬಂದ ದೃಶ್ಯಗಳು ಇವು. ಶ್ವೇತ ವರ್ಣದ ಸಮವಸ್ತ್ರಗಳನ್ನು ತೊಟ್ಟು ವಿದ್ಯಾರ್ಥಿಗಳು ಮೈದಾನದತ್ತ ಹೆಜ್ಜೆ ಹಾಕುತ್ತಿದ್ದರು. ಪಥ ಸಂಚಲನಕ್ಕೆ ಸಿದ್ಧರಾಗಿದ್ದ ಪೊಲೀಸರು, ಗೃಹ ರಕ್ಷಕರು ದಳ, ಎನ್‌ಸಿಸಿ ವಿದ್ಯಾರ್ಥಿಗಳು ಪಥ ಸಂಚಲನ ನಡೆಸಿ ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿದರು.

ಜಿಲ್ಲಾಧಿಕಾರಿಗಳಿಂದ ಧ್ವಜಾರೋಹಣ: ಕಾರ್ಯಕ್ರಮದಲ್ಲಿ ಜಿಲ್ಲಾಧಿಕಾರಿ ಆರ್‌.ಲತಾ ಧ್ವಜಾರೋಹಣ ನೆರವೇರಿಸಿದರು. ಈ ವೇಳೆ ಅಂಧ ಕಲಾವಿದ ಮಹಾಲಿಂಗಯ್ಯ ಮಠಧ್‌ ಹಾಗೂ ಅವರ ವಿದ್ಯಾರ್ಥಿಗಳಿಂದ ಕೇಳಿ ಬಂದ ರಾಷ್ಟ್ರಗೀತೆಗೆ ಎಲ್ಲರು ಎದ್ದು ನಿಂತು ಗೌರವ ಸಲ್ಲಿಸಿದರು. ಬಳಿಕ ಜಿಲ್ಲಾಧಿಕಾರಿ ಆರ್‌.ಲತಾ, ತೆರೆದ ಪೊಲೀಸ್‌ ಜೀಪ್‌ನಲ್ಲಿ ತೆರಳಿ ಗೌರವ ವಂದನೆ ಸ್ವೀಕರಿಸಿದರು. ಬಳಿಕ ಜಿಲ್ಲಾ ಸಶಸ್ತ್ರ ಮೀಸಲು ಪಡೆ, ಜಿಲ್ಲಾ ನಾಗರಿಕ ಪೊಲೀಸ್‌ ತುಕಡಿ, ಅರಣ್ಯ ಇಲಾಖೆ ತುಕಡಿ, ಜಿಲ್ಲಾ ಗೃಹ ರಕ್ಷಕ ದಳ, ನಗರದ ವಿವಿಧ ಶಾಲಾ, ಕಾಲೇಜುಗಳ ಎನ್‌ಸಿಸಿ ತಂಡಗಳು ಸೇರಿದಂತೆ 20 ಕ್ಕೂ ಹೆಚ್ಚು ತಂಡಗಳು ಪಥ ಸಂಚಲನ ನಡೆಸಿ ರಾಷ್ಟ್ರಧ್ವಜಕ್ಕೆ ಗೌರವ ವಂದನೆ ಸಲ್ಲಿಸಿತು.

ಮತೀಯ ಭಾವ, ಪ್ರತ್ಯೇಕತೆ ಅವಕಾಶ ಇಲ್ಲ: ಜಿಲ್ಲಾಧಿಕಾರಿ ಆರ್‌.ಲತಾ ಸಂದೇಶ ನೀಡಿ ಮಾತನಾಡಿ, ಎಲ್ಲಾ ಮಹನೀಯರ ಶ್ರಮ, ಶ್ರದ್ಧೆ ಜ್ಞಾನದಿಂದ ರೂಪುಗೊಂಡ ಸಂವಿಧಾನ ರಚನೆಯ ಫ‌ಲವಾಗಿ ಭಾರತ ದೇಶ ಇಂದು ವಿಶ್ವದಲ್ಲೇ ಶಿಸ್ತುಬದ್ಧ ದೇಶವಾಗಿ ಬೆಳೆದಿದೆ. ಕಾನೂನು ಪರಿಪಾಲನೆ, ಶಿಸ್ತು, ಐಕ್ಯತೆ ಹಾಗೂ ಶಾಂತಿಯಿಂದ ದೇಶದ ನಾಗರಿಕರು ನೆಮ್ಮದಿಯಿಂದ ಬಾಳ್ವೆ ನಡೆಸಲು ಸಹಕಾರಿಯಾಗಿದೆ. ವೈವಿಧ್ಯತೆಯಲ್ಲಿ ಏಕತೆಯನ್ನು ಹೊಂದಿರುವ ನಮ್ಮ ದೇಶದಲ್ಲಿ ಅನೇಕ ಜಾತಿ, ಮತ, ಧರ್ಮ ಹಾಗೂ ಭಾಷೆಗಳ ಜನರಿದ್ದರೂ ಇಲ್ಲಿ ಮತೀಯ ಭಾವ, ಪ್ರತ್ಯೇಕತೆ ಹಾಗೂ ಮೂಲಭೂತ ವಾದಗಳಿಗೆ ಅವಕಾಶವಿಲ್ಲ ಎಂದರು.

Advertisement

ಕಾರ್ಯಕ್ರಮದಲ್ಲಿ ಜಿಪಂ ಅಧ್ಯಕ್ಷ ಎಂ.ಬಿ.ಚಿಕ್ಕನರಸಿಂಹಯ್ಯ, ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ, ಜಿಪಂ ಸಿಇಒ ಬಿ.ಫೌಝೀಯಾ ತರುನ್ನುಮ್‌, ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಅಭಿನವ ಖರೆ, ಜಿಲ್ಲಾ ಅರಣ್ಯ ಸಂರಕ್ಷಣಾಧಿಕಾರಿ ಅರ್ಸಲನ್‌, ಅಪರ ಜಿಲ್ಲಾಧಿಕಾರಿ ಆರತಿ, ಉಪ ವಿಭಾಗಾಧಿಕಾರಿ ಎ.ಎನ್‌.ರಘುನಂದ್‌ ಸೇರಿದಂತೆ ಜಿಲ್ಲಾ ಹಾಗೂ ತಾಲೂಕು ಮಟ್ಟದ ವಿವಿಧ ಇಲಾಖೆಗಳ ಅಧಿಕಾರಿಗಳು ಉಪಸ್ಥಿತರಿದ್ದರು.

ಪೌರ ಕಾರ್ಮಿಕ ಮಹಿಳೆ ವೆಂಕಟಮ್ಮ ಸೇರಿ 10 ಮಂದಿಗೆ ಸರ್ವೋತ್ತಮ ಪ್ರಶಸ್ತಿ: ಜಿಲ್ಲೆಯಲ್ಲಿ ಸರ್ಕಾರದ ವಿವಿಧ ಇಲಾಖೆಗಳಲ್ಲಿ ಅತ್ಯುತ್ತಮ ಸೇವೆ ಸಲ್ಲಿಸಿ ಸೇವಾ ಕ್ಷಮತೆಯನ್ನು ಮಾನದಂಡವಾಗಿ ಇಟ್ಟುಕೊಂಡು ಪ್ರತಿ ವರ್ಷ ಗಣರಾಜ್ಯೋತ್ಸವ ಸಂದರ್ಭದಲ್ಲಿ ಪ್ರದಾನ ಮಾಡುವ ಸವೊತ್ತಮ ಪ್ರಶಸ್ತಿಗೆ ಚಿಕ್ಕಬಳ್ಳಾಪುರ ನಗರಸಭೆಯ ಖಾಯಂ ಪೌರ ಕಾರ್ಮಿಕ ಮಹಿಳೆ ವೆಂಕಟಮ್ಮ ಹಾಗೂ ಶಿಡ್ಲಘಟ್ಟ ತಾಲೂಕು ತಹಶೀಲ್ದಾರ್‌ ದಯಾನಂದ್‌ ಸೇರಿ ಒಟ್ಟು 10 ಮಂದಿಗೆ ಜಿಲ್ಲಾಡಳಿತದ ವತಿಯಿಂದ ಪ್ರದಾನ ಮಾಡಲಾಯಿತು.

ಚಿಕ್ಕಬಳ್ಳಾಪುರದ ಅರಣ್ಯ ವಲಯದ ಅರಣ್ಯ ವೀಕ್ಷಕ ಕೆ.ಪಿ.ವೆಂಕಟೇಶ್‌, ಜಿಲ್ಲಾಧಿಕಾರಿಗಳ ಕಚೇರಿ ವಾಹನ ಚಾಲಕ ಯೋಗೇಶ್‌ ಹೂಗಾರ್‌, ಗೌರಿಬಿದನೂರು ತಾ. ಕಲ್ಲಿನಾಯಕನಹಳ್ಳಿ ಪ್ರಾಥಮಿಕ ಆರೋಗ್ಯ ಕೇಂದ್ರದ ಕಿರಿಯ ಆರೋಗ್ಯ ಸಹಾಯಕ ನಾಗರಾಜೇಂದ್ರ ಪ್ರಸಾದ್‌, ಚಿಕ್ಕಬಳ್ಳಾಪುರ ತಾಲೂಕಿನ ಮಧುರೇನಹಳ್ಳಿಯ ಗ್ರಾಮ ಲೆಕ್ಕಾಧಿಕಾರಿ ಪಿ.ಭರತ್‌ ಕುಮಾರ್‌, ಗೌರಿಬಿದನೂರು ತಾ.ಆರೋಗ್ಯಾಧಿಕಾರಿಗಳ ಕಚೇರಿ ಕಿರಿಯ ಮಹಿಳಾ ಆರೋಗ್ಯ ಸಹಾಯಕಿ ಇಂದಿರಮ್ಮ, ಗೌರಿಬಿದನೂರು ನಗರಸಭೆಯ ಆರೋಗ್ಯ ನಿರೀಕ್ಷಕ ಸುರೇಶ್‌, ಶಿಡ್ಲಘಟ್ಟ ತಾ.ಇ.ತಿಮ್ಮಸಂದ್ರದ ಗ್ರಾಪಂ ಪಿಡಿಒ ತನ್ವೀರ್‌ ಅಹಮದ್‌, ಶಿಡ್ಲಘಟ್ಟ ತಾಲೂಕು ದಂಡಾಧಿಕಾರಿ ದಯಾನಂದ್‌, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಮಹಿಳಾ ಮೇಲ್ವಿಚಾರಕಿ ಪದ್ಮಾವತಮ್ಮ ಸೇರಿದಂತೆ 10 ಮಂದಿಗೆ ಪ್ರದಾನ ಮಾಡಿ ಅಭಿನಂದಿಸಲಾಯಿತು.

ಸಂಸದರು, ಶಾಸಕರು ಗೈರು: ನಗರದಲ್ಲಿ ಜಿಲ್ಲಾಡಳಿತದ ವತಿಯಿಂದ ಆಯೋಜಿಸಲಾಗಿದ್ದ ಗಣರಾಜ್ಯೋತ್ಸವ ಕಾರ್ಯಕ್ರಮಕ್ಕೆ ಜಿಲ್ಲೆಯ ಸಂಸದ ಬಿ.ಎನ್‌.ಬಚ್ಚೇಗೌಡ, ಕಾರ್ಯಕ್ರಮದ ಅಧ್ಯಕ್ಷತೆ ವಹಿಸಬೇಕಿದ್ದ ಚಿಕ್ಕಬಳ್ಳಾಪುರ ಕ್ಷೇತ್ರದ ಶಾಸಕ ಡಾ.ಕೆ.ಸುಧಾಕರ್‌ ಸೇರಿ ಇಬ್ಬರು ಕಾರ್ಯಕ್ರಮಕ್ಕೆ ಬರಲಿಲ್ಲ. ಜಿಪಂ ಅಧ್ಯಕ್ಷ ಚಿಕ್ಕನರಸಿಂಹಯ್ಯ, ತಾಪಂ ಅಧ್ಯಕ್ಷ ಬಿ.ಎಂ.ರಾಮುಸ್ವಾಮಿ ಹೊರತುಪಡಿಸಿದರೆ ಬಹುತೇಕ ಆಹ್ವಾನಿತ ಚುನಾಯಿತ ಜನಪ್ರತಿನಿಧಿಗಳು ಗೈರಾಗಿದ್ದರು.

ದೇಶ ಪ್ರೇಮದ ಕಿಚ್ಚು ಮೂಡಿಸಿದ ಮಕ್ಕಳ ಸಾಂಸ್ಕೃತಿಕ ಚಟುವಟಿಕೆ: ಸರ್‌ಎಂವಿ ಕ್ರೀಡಾಂಗಣದಲ್ಲಿ ವಿವಿಧ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಮೂಡಿ ಬಂದ ಸಾಂಸ್ಕೃತಿಕ ಕಾರ್ಯಕ್ರಮಗಳು ನೆರೆದಿದ್ದವರಲ್ಲಿ ದೇಶ ಪ್ರೇಮ ಮೂಡಿಸಿದವು. ಆರಂಭದಲ್ಲಿಯೇ ನಗರದ ಬಿಬಿ ರಸ್ತೆಯ ಸರ್ಕಾರಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ಹಾಗೂ ಉರ್ದು ಶಾಲೆಯ ಮಕ್ಕಳು ನಡೆಸಿಕೊಟ್ಟ ಹಾರುತ್ತಿದೆ ಹಾರುತ್ತಿದೆ ನಮ್ಮ ಬಾವುಟ ನೃತ್ಯ, ನಗರದ ಪಂಚಗಿರಿ ಬೋಧನಾ ಪ್ರೌಢ ಶಾಲೆ ಹಾಗೂ ಸಂತ ಜೋಸೆಫ್ ಶಾಲೆಗಳ ವಿದ್ಯಾರ್ಥಿಗಳು ಪ್ರದರ್ಶಿಸಿದ ಏರೋಬಿಕ್ಸ್‌ ನೃತ್ಯ ಗಮನ ಸೆಳೆಯಿತು.

ಸರ್‌.ಎಂ.ವಿ ಪ್ರೌಢ ಶಾಲೆಯ ವಿದ್ಯಾರ್ಥಿಗಳು ನಡೆಸಿಕೊಟ್ಟ ವಂದೇ ಮಾತರಂ ನೃತ್ಯ ಪ್ರದರ್ಶನ ದೇಶ ಪ್ರೇಮದ ನಿನಾದ ಮೂಡಿಸಿತು. ಪ್ರಶಾಂತಿ ಬಾಲ ಮಂದಿರ ಬಾಲಕಿಯರು ನಡೆಸಿಕೊಟ್ಟ ಸಮುದ್ರ ಮಂಥನ ಯಕ್ಷಗಾನ ನೃತ್ಯ ಗಮನ ಸೆಳೆಯಿತು. ಬಾಗೇಪಲ್ಲಿಯ ಪೂಲವಾರಪಲ್ಲಿಯ ಮೊರಾರ್ಜಿ ವಸತಿ ಶಾಲೆ ಮಕ್ಕಳು ಹಾಗೂ ಚಿಂತಾಮಣಿ ತಾಲೂಕಿನ ಮುರಗಮಲ್ಲದ ಮೊರಾರ್ಜಿ ದೇಸಾಯಿ ವತಿ ಶಾಲೆಯ ಮಕ್ಕಳು ನಡೆಸಿಕೊಟ್ಟ ಸಂದೇಸೆ ಆತೆ ಹೈ ಹಾಗೂ ನಮ್ಮ ಇಂಡಿಯಾ ನೃತ್ಯ ಕಾರ್ಯಕ್ರಮಗಳು ಜನರಲ್ಲಿ ಐಕ್ಯತೆ, ಭಾತೃತ್ವ, ಸಹೋದರತೆ, ಸೌಹಾರ್ದತೆಗೆ ಆಕರ್ಷಿಸಿದವು.

* ಕಾಗತಿ ನಾಗರಾಜಪ್ಪ

Advertisement

Udayavani is now on Telegram. Click here to join our channel and stay updated with the latest news.

Next