Advertisement

ರಫೇಲ್‌ ವಿರಾಟ ರೂಪ; ವೈವಿಧ್ಯ ವೈಭವ

01:28 AM Jan 27, 2021 | Team Udayavani |

ಹೊಸದಿಲ್ಲಿ: ಒಂದೆಡೆ ರಫೇಲ್‌ ಬಲಭೀಮನ “ಬ್ರಹ್ಮಾಸ್ತ್ರ’ದ ಕೌತುಕ, ಟಿ-90 ಭೀಷ್ಮ ಟ್ಯಾಂಕ್‌ನ ವಿರಾಟ ರೂಪ, ಸುಖೋಯ್‌-30ಎಂಕೆಐ ಯುದ್ಧ ವಿಮಾನದ ಚಮತ್ಕಾರ…

Advertisement

ಮತ್ತೂಂದೆಡೆ, ಜನಪದ ಹಾಡುಗಳಿಗೆ ಪುಟಾಣಿಗಳ ನೃತ್ಯ, ಆತ್ಮನಿರ್ಭರ ಭಾರತ, ವಿಜಯನಗರ ಸಾಮ್ರಾಜ್ಯ, ಅಯೋಧ್ಯೆಯ ರಾಮಮಂದಿರ ಬಿಂಬಿಸುವ ಸ್ತಬ್ಧಚಿತ್ರಗಳ ಲೋಕ…

ಇದು ದಿಲ್ಲಿಯ ರಾಜಪಥದಲ್ಲಿ 72ನೇ ಗಣರಾಜ್ಯೋತ್ಸವದ ದಿನವಾದ ಮಂಗಳವಾರ ನಡೆದ ಅಭೂತಪೂರ್ವ ಪರೇಡ್‌ನ‌ ಚಿತ್ರಣ. ಗಣರಾಜ್ಯ ದಿನದ ಪರೇಡ್‌ನಲ್ಲಿ ದೇಶದ ರಕ್ಷಣ ಪಡೆಗಳ ಸಾಮರ್ಥ್ಯ ಹಾಗೂ ಸಾಂಸ್ಕೃತಿಕ ವೈಭವವು ಅನಾವರಣಗೊಂಡಿದ್ದು, ಅಲ್ಲಿ ನೆರೆದಿದ್ದ 25 ಸಾವಿರದಷ್ಟು ಮಂದಿಯ ಕಣ್ಣುಗಳಿಗೆ ಹಬ್ಬ ಹಾಗೂ ಬೆರಗು ಮೂಡಿಸಿದವು.

ವಿವಿಧ ರಾಜ್ಯಗಳು, ಕೇಂದ್ರಾಡಳಿತ ಪ್ರದೇಶಗಳ 17 ಸ್ತಬ್ಧಚಿತ್ರಗಳು, ಕೇಂದ್ರ ಸರಕಾರದ ವಿವಿಧ ಇಲಾಖೆಗಳ 9 ಟ್ಯಾಬ್ಲೋಗಳು ಹಾಗೂ ರಕ್ಷಣ ಸಚಿವಾಲಯದ 6 ಸ್ತಬ್ಧಚಿತ್ರಗಳು ಪರೇಡ್‌ನಲ್ಲಿ ಭಾಗಿಯಾದವು. ಕೊರೊನಾ ಹಿನ್ನೆಲೆಯಲ್ಲಿ 15 ವರ್ಷದೊಳಗಿನ ಹಾಗೂ 65 ದಾಟಿದವರಿಗೆ ಪ್ರವೇಶಕ್ಕೆ ಅನುಮತಿಯಿಲ್ಲದ ಕಾರಣ, ಈ ವರ್ಷ ವೀಕ್ಷಕರ ಸಂಖ್ಯೆ ಸ್ವಲ್ಪಮಟ್ಟಿಗೆ ಕಡಿಮೆಯಿತ್ತು.

ವಿದೇಶಿ ಅತಿಥಿಯಿಲ್ಲ: ಕಳೆದ 55 ವರ್ಷಗಳಲ್ಲಿ ಇದೇ ಮೊದಲ ಬಾರಿಗೆ ವಿದೇಶಿ ಅತಿಥಿಗಳು ಕಾರ್ಯಕ್ರಮದಲ್ಲಿ ಭಾಗಿಯಾಗಿರಲಿಲ್ಲ. ಆದರೆ, 122 ಸದಸ್ಯರ ಬಾಂಗ್ಲಾ ಸಶಸ್ತ್ರ ಪಡೆಯು ಪಥಸಂಚಲನದಲ್ಲಿ ಪಾಲ್ಗೊಂಡಿತ್ತು. 1971ರ ಯುದ್ಧದಲ್ಲಿ ಪಾಕಿಸ್ಥಾನದ ವಿರುದ್ಧ ಭಾರತ ಜಯ ಸಾಧಿಸಿದ ನೆನಪಲ್ಲಿ ದೇಶವು ಸ್ವರ್ಣಿಮ್‌ ವಿಜಯ ವರ್ಷವನ್ನು ಆಚರಿಸುತ್ತಿದ್ದು, ಭಾರತೀಯ ಸೇನೆಯ ಟಿ-90 ಭೀಷ್ಮ, ಬಿಎಂಪಿ-2 ಶರಥ್‌, ಬ್ರಹ್ಮೋಸ್‌ ಕ್ಷಿಪಣಿಯ ಲಾಂಚರ್‌, ಪಿನಾಕಾ, ಎಲೆಕ್ಟ್ರಾನಿಕ್‌ ವಾರ್‌ಫೇರ್‌ ಸಿಸ್ಟಂ ಸಂವಿಜಯ್‌ ಕೂಡ ಪರೇಡ್‌ನಲ್ಲಿ ಬಲಪ್ರದರ್ಶನ ಮಾಡಿದವು.

Advertisement

ತೇಜಸ್‌ ಯುದ್ಧ ವಿಮಾನದ ಯಶಸ್ವಿ ಟೇಕ್‌ಆಫ್ ಹಾಗೂ ಟ್ಯಾಂಕ್‌ ನಿಗ್ರಹ ಕ್ಷಿಪಣಿ ವ್ಯವಸ್ಥೆಯನ್ನು ಬಂಬಿಸುವ 2 ಸ್ತಬ್ಧಚಿತ್ರಗಳನ್ನು ದೇಶದ ಡಿಆರ್‌ಡಿಒ ಪ್ರದರ್ಶಿಸಿತು. ಪರೇಡ್‌ ಆರಂಭಕ್ಕೂ ಮುನ್ನ ಪ್ರಧಾನಿ ಮೋದಿ ರಾಷ್ಟ್ರೀಯ ಯುದ್ಧ ಸ್ಮಾರಕಕ್ಕೆ ಭೇಟಿ ನೀಡಿ ಪುಷ್ಪನಮನ ಸಲ್ಲಿಸಿದರು.

 

ಹಲವು ಪ್ರಥಮಗಳು : ಪ್ರಸಕ್ತ ಗಣರಾಜ್ಯೋತ್ಸವ ಪರೇಡ್‌ ಹಲವು  ಪ್ರಥಮಗಳಿಗೆ ಸಾಕ್ಷಿಯಾಗಿವೆ. ಅವೆಂದರೆ

  • 2019ರಲ್ಲಿ ಅಸ್ತಿತ್ವಕ್ಕೆ ಬಂದ ಕೇಂದ್ರಾಡಳಿತ ಪ್ರದೇಶ ಲಡಾಖ್‌ನ ಸ್ತಬ್ಧಚಿತ್ರ ಪ್ರದರ್ಶನ
  • ಉ.ಪ್ರದೇಶದ ವತಿಯಿಂದ ಅಯೋಧ್ಯೆ ರಾಮಮಂದಿರದ ಟ್ಯಾಬ್ಲೋ ಭಾಗಿ
  • “ವರ್ಟಿಕಲ್‌ ಚಾರ್ಲಿ’ ಆಕಾರದಲ್ಲಿ ದೇಶದ ಬಲ ಭೀಮ ರಫೇಲ್‌ ಯುದ್ಧ ವಿಮಾನದ ಹಾರಾಟ
  • ಫ್ಲೈ ಪಾಸ್ಟ್‌ನಲ್ಲಿ ಮೊದಲ ಮಹಿಳಾ ಫೈಟರ್‌ ಪೈಲಟ್‌ ಭಾವನಾ ಕಾಂತ್‌ ಭಾಗಿ
  • ನೌಕಾಪಡೆಯಿಂದ 1971ರ ಭಾರತ- ಪಾಕ್‌ ಯುದ್ಧದ ವೇಳೆ ಪಾಲ್ಗೊಂಡಿದ್ದ ಐಎನ್‌ಎಸ್‌ ವಿಕ್ರಾಂತ್‌ ಸ್ತಬ್ಧಚಿತ್ರ
  • ಬಾಂಗ್ಲಾದೇಶದ ಸಶಸ್ತ್ರ ಪಡೆಯ 122 ಸದಸ್ಯರಿಂದಲೇ ಪರೇಡ್‌ ಆರಂಭ

ಪುತ್ರನಿಗೆ ಪರಮ ವೀರ ಚಕ್ರ ಸಿಗಬೇಕಿತ್ತು’ :

ಗಾಲ್ವನ್‌ ಕಣಿವೆಯಲ್ಲಿ ದೇಶಕ್ಕಾಗಿ ಪ್ರಾಣತ್ಯಾಗ ಮಾಡಿದ ಪುತ್ರ ದಿ| ಕ. ಸಂತೋಷ್‌ ಬಾಬುಗೆ ಮಹಾವೀರ ಚಕ್ರ ಗೌರವ ನೀಡಿದ್ದು ತೃಪ್ತಿ ತಂದಿಲ್ಲ ಎಂದು ತಂದೆ ಬಿ.ಉಪೇಂದ್ರ ಹೇಳಿದ್ದಾರೆ. ಹೈದರಾಬಾದ್‌ನಲ್ಲಿ ಮಾತನಾಡಿದ ಅವರು, ಪುತ್ರನ ಶೂರತನಕ್ಕೆ ಪರಮ ವೀರ ಚಕ್ರ ಗೌರವ ನೀಡಬೇಕಾಗಿತ್ತು. ಹೀಗಾಗಿ ತಮಗೆ ನೂರಕ್ಕೆ ನೂರು ಸಂತೋಷ ತಂದಿಲ್ಲ. ಹಾಗಂತ ಈಗ ನೀಡಿದ ಗೌರವದಿಂದ ಸಂತೋಷಗೊಂಡಿಲ್ಲ ಎಂಬ ಅರ್ಥವಲ್ಲ ಎಂದು ಹೇಳಿದ್ದಾರೆ.

ಪಾಕಿಸ್ಥಾನ‌ಕ್ಕೂ ಕಾಣಿಸುತ್ತದೆ  ತ್ರಿವರ್ಣ ಧ್ವಜ! :

ಜಮ್ಮು ಜಿಲ್ಲೆಯ ಭಾರತ-ಪಾಕ್‌ ಗಡಿಯಲ್ಲಿ ಗಡಿ ಭದ್ರತಾ ಪಡೆ(ಬಿಎಸ್‌ಎಫ್) ಯೋಧರು ಮಂಗಳವಾರ ಬರೋಬ್ಬರಿ 131 ಅಡಿ ಎತ್ತರದಲ್ಲಿ ತ್ರಿವರ್ಣ ಧ್ವಜ ಹಾರಿಸಿದ್ದಾರೆ. 30×20 ಅಡಿ ವಿಸ್ತೀರ್ಣದ ತ್ರಿವರ್ಣ ಧ್ವಜ ಇದಾಗಿದ್ದು, ಅತ್ತ ಪಾಕಿಸ್ಥಾನದ ಭೂಪ್ರದೇಶದಲ್ಲಿ ನಿಂತು ನೋಡಿದರೂ ಈ ಧ್ವಜ ಕಾಣಿಸುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ವಿದೇಶಗಳಲ್ಲೂ ಸಂಭ್ರಮ :

ಚೀನ, ಸಿಂಗಾಪುರ, ಬಾಂಗ್ಲಾ, ಪಾಕಿಸ್ಥಾನ‌, ಆಸ್ಟ್ರೇಲಿಯ ಸೇರಿದಂತೆ ವಿಶ್ವದ ಹಲವು ರಾಷ್ಟ್ರಗಳಲ್ಲಿ 72ನೇ ಗಣರಾಜ್ಯೋತ್ಸವವನ್ನು ಆಚರಿಸಲಾಯಿತು. ಮುಖ್ಯವಾಗಿ ಚೀನ ರಾಜಧಾನಿ ಬೀಜಿಂಗ್‌ನಲ್ಲಿರುವ ಭಾರತೀಯ ರಾಯಭಾರ ಕಚೇರಿಯಲ್ಲಿ ಭಾರತದ ಧ್ವಜಾರೋಹಣ ಮಾಡುವ ಮೂಲಕ ಕಾರ್ಯಕ್ರಮ ನಡೆಸಲಾಯಿತು. ಕೋವಿಡ್ ನಿಯಂತ್ರಿಸಲು ಚೀನದ ಆಡಳಿತ ಬಿಗಿ ನಿರ್ಬಂಧಗಳನ್ನು ಹೇರಿರುವುದರಿಂದ; ಅಧಿಕಾರಿಗಳು ಮತ್ತು ಕುಟುಂಬವರ್ಗ ಮಾತ್ರ ಪಾಲ್ಗೊಂಡಿತ್ತು. ಚೈತಿ ಆರ್ಟ್ಸ್ ಫೌಂಡೇಶನ್‌ನಿಂದ ಸಿದ್ಧಪಡಿಸಲ್ಪಟ್ಟಿರುವ ವಂದೇ ಮಾತರಂ ಅನ್ನು ನುಡಿಸಬಲ್ಲಂತಹ ವಿಶೇಷ ಸಂಗೀತವಾದ್ಯವನ್ನು; ರಾಯಭಾರಿ ವಿಕ್ರಮ್‌ ಮಿಸ್ರಿ ಬಿಡುಗಡೆಗೊಳಿಸಿದರು.

ಜಾಮ್‌ನಗರ ಮುಂಡಾಸು ಧರಿಸಿ ಮಿಂಚಿದ ಮೋದಿ :

ಗಣರಾಜ್ಯೋತ್ಸವದಂದು ಪ್ರಧಾನಿ ನರೇಂದ್ರ ಮೋದಿಯವರು ಧರಿಸಿದ್ದ ಪಗಡಿ (ಮುಂಡಾಸು) ಭಾರೀ ಮೆಚ್ಚುಗೆಗೆ ಪಾತ್ರವಾಗಿದ್ದು, ಅವರ ಫೋಟೋ ವೈರಲ್‌ ಆಗಿದೆ. ಗುಜರಾತ್‌ನ ಜಾಮ್‌ನಗರದ ರಾಜ ಕುಟುಂಬ ಪ್ರಧಾನಿಯವರಿಗೆ ಈ ಪಗಡಿಯನ್ನು ಉಡುಗೊರೆಯಾಗಿ ನೀಡಿತ್ತು. ಅದಕ್ಕೆ “ಹಲಾರಿ ಪಾಗ್‌’ (ರಾಜ ಪ್ರಭುತ್ವದ ಮುಂಡಾಸು) ಎಂಬ ಹೆಸರು ಇದೆ. ಇದರ ಜತೆಗೆ ಮೋದಿ ಬೂದು ಬಣ್ಣದ ಜಾಕೆಟ್‌, ಕ್ರೀಮ್‌ ಬಣ್ಣದ ಶಾಲು ಹೊದ್ದುಕೊಂಡಿದ್ದರು. ಕಳೆದ ವರ್ಷ ಪ್ರಧಾನಿಯವರು ಹಳದಿ ಬಣ್ಣದ ಮುಂಡಾಸು ಧರಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next